ರೈತರೇ ಬೆಳೆ ಸಮೀಕ್ಷೆ ಕಡ್ಡಾಯವಾಗಿ ಮಾಡಿಕೊಳ್ಳಿ: ಬಿ.ಪೂಜಾ

| Published : Jul 01 2025, 12:48 AM IST

ರೈತರೇ ಬೆಳೆ ಸಮೀಕ್ಷೆ ಕಡ್ಡಾಯವಾಗಿ ಮಾಡಿಕೊಳ್ಳಿ: ಬಿ.ಪೂಜಾ
Share this Article
  • FB
  • TW
  • Linkdin
  • Email

ಸಾರಾಂಶ

ರೈತಾಪಿಗಳು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ರೈತರೇ ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳ ಕುರಿತು ಈಗಲೇ ವಿಮೆ ನೋಂದಣಿ ಮಾಡಿಸಿಕೊಳ್ಳಿ ಮತ್ತು ಬೆಳೆ ಬಂದ ನಂತರ ನೀವೇ ಖುದ್ದಾಗಿ ಬೆಳೆ ಸಮೀಕ್ಷೆ ಮಾಡಿಕೊಳ್ಳುವ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಜಾಗರೂಕರಾಗಿರಿ ಎಂದು ತಾಲೂಕು ಕೃಷಿ ಇಲಾಖಾ ಸಹಾಯಕ ನಿರ್ದೇಶಕಿ ಬಿ. ಪೂಜಾ ರೈತರಲ್ಲಿ ವಿನಂತಿಸಿಕೊಂಡಿದ್ದಾರೆ.

ತಾಲೂಕು ಕಚೇರಿ ಮುಂಭಾಗ ಕೃಷಿ ಇಲಾಖಾ ವತಿಯಿಂದ ನಮ್ಮ ಬೆಳೆ ನಮ್ಮ ಹಕ್ಕು ಯೋಜನೆಯಡಿ ರೈತರಿಂದ ಬೆಳೆ ಸಮೀಕ್ಷೆ ಕಾರ್ಯಕ್ರಮದ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ಕರ್ನಾಟಕ ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ 2025ರ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆಯುವ ಬೆಳೆಗಳಿಗೆ ಅನುಕೂಲವಾಗುವ ಸಲುವಾಗಿ ಆರಂಭಿಸಿರುವ ಸಣ್ಣ ಪ್ರೀಮಿಯಂ ದೊಡ್ಡ ಸುರಕ್ಷೆ ಎಂಬ ಘೋಷಣೆಯಡಿ ಪ್ರಚಾರವನ್ನು ಪ್ರಾರಂಭಿಸಲಾಗಿದೆ ಎಂದರು.ರೈತಾಪಿಗಳು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ರಾಗಿಗೆ ವಿಮೆ ಮಾಡಿಸಲು ಆಗಸ್ಟ್ 16ರಂದು ಕೊನೆಯ ದಿನ, ಅಲಸಂಡೆಗೆ ಜುಲೈ 15 ಕೊನೆಯ ದಿನವಾಗಿದೆ ಎಂದು ಅವರು ತಿಳಿಸಿದರು.

ತೋಟಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ಕಂದಾಯ ಇಲಾಖೆಯ ಸಹಕಾರದೊಂದಿಗೆ ಎಲ್ಲಾ ರೈತರಿಗೆ ಸೂಕ್ತ ತಿಳಿವಳಿಕೆಯನ್ನು ನೀಡಲಾಗುತ್ತಿದೆ. ತಾವು ಬೆಳೆದಿರುವ ಬೆಳೆಯನ್ನು ಸಮೀಕ್ಷೆ ಮಾಡಲು ರೈತರೇ ಪ್ಲೇ ಸ್ಟೋರ್‌ನ ಮೂಲಕ ಬೆಳೆ ಸಮೀಕ್ಷೆ ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ತಾಂತ್ರಿಕ ತೊಂದರೆ ಕಂಡು ಬಂದಲ್ಲಿ ಸಮೀಪದ ರೈತ ಕೇಂದ್ರವನ್ನು ಭೇಟಿ ಮಾಡಲು ಬಿ.ಪೂಜಾ ತಿಳಿಸಿದ್ದಾರೆ.ಬೆಳೆ ಸಮೀಕ್ಷೆ ಯನ್ನು ಸ್ವತಃ ರೈತರೇ ಮಾಡಿಕೊಳ್ಳುವುದರಿಂದ ಹಲವಾರು ಪ್ರಯೋಜನಗಳನ್ನು ರೈತರು ಪಡೆಯಬಹುದಾಗಿದೆ. ನ್ಯಾಫೆಡ್ ಮೂಲಕ ರಾಗಿ ಕೊಬರಿ ಬಿಡುವ ವೇಳೆ ಅನುಕೂಲವಾಗಲಿದೆ. ಬ್ಯಾಂಕ್ ಗಳಿಂದ ಬೆಳೆ ಸಾಲ ಪಡೆಯಲು ಸಹಕಾರಿಯಾಗಲಿದೆ. ಆಕಸ್ಮಿಕವಾಗಿ ಅತಿವೃಷ್ಠಿ ಅಥವಾ ಅನಾವೃಷ್ಠಿ ಸಂಭವಿಸಿ ಬೆಳೆ ಹಾಳಾದಲ್ಲಿ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಸೂಕ್ತ ಪರಿಹಾರ ನೀಡಲು ಅವಕಾಶವಾಗಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಬಿ.ಪೂಜಾ ಹೇಳಿದ್ದಾರೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಎ. ಕುಂಇ ಅಹಮದ್ ಪ್ರಚಾರಾಂದೋಲನಕ್ಕೆ ಹಸಿರು ನಿಶಾನೆ ತೋರಿದರು. ಕೃಷಿ ಅಧಿಕಾರಿ ಗಿರೀಶ್, ಆತ್ಮ ಸಿಬ್ಬಂದಿ, ಕೃಷಿ ಇಲಾಖಾ ಅಧಿಕಾರಿಗಳು ಈ ಪ್ರಚಾರಾಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

29 ಟಿವಿಕೆ 4 – ತುರುವೇಕೆರೆ ತಾಲೂಕು ಕೃಷಿ ಇಲಾಖೆ ವತಿಯಿಂದ ಆರಂಭಿಸಿರುವ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ತಾಲೂಕು ಕಚೇರಿ ಮುಂಭಾಗ ತಹಸೀಲ್ದಾರ್ ಎನ್.ಎ.ಕುಂಇ ಅಹಮದ್, ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ಚಾಲನೆ ನೀಡಿದರು.