ರೈತರು ಹಾಗೂ ಕೃಷಿ ಇಲಾಖೆಯ ನಡುವೆ ಕೃಷಿಕ ಸಮಾಜವು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಸರ್ಕಾರದಿಂದ ಲಭಿಸುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗೌಡಹಳ್ಳಿ ರವಿ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಯಳಂದೂರು

ರೈತರು ಹಾಗೂ ಕೃಷಿ ಇಲಾಖೆಯ ನಡುವೆ ಕೃಷಿಕ ಸಮಾಜವು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರಿಗೆ ಸರ್ಕಾರದಿಂದ ಲಭಿಸುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಗೌಡಹಳ್ಳಿ ರವಿ ತಿಳಿಸಿದರು.

ಪಟ್ಟಣದ ಕೃಷಿ ಇಲಾಖೆ ಕಚೇರಿಯ ಸಭಾಂಗಣದಲ್ಲಿ ತಾಲೂಕು ಕೃಷಿಕ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಹಾಗೂ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ಇಲಾಖೆಯಿಂದ ಲಭಿಸುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ತಮ್ಮ ಭೂಮಿಯನ್ನು ಹಸನುಗೊಳಿಸಿಕೊಳ್ಳಬೇಕು. ಅಧಿಕ ಇಳುವರಿ ಪಡೆಯಲು ಇಲಾಖೆಯಿಂದ ಲಭಿಸುವ ಸೂಕ್ತ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳಬೇಕು ಎಂದರು.

ಬೆಳೆ ವಿಮೆ, ಗೊಬ್ಬರಗಳು, ಕೃಷಿ ಯಂತ್ರೋಪಕರಣಗಳನ್ನು ಪಡೆದುಕೊಂಡು ಅಧಿಕ ಇಳುವರಿ ಪಡೆದುಕೊಳ್ಳಬೇಕು. ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಕೃಷಿಕ ಸಮಾಜದ ವತಿಯಿಂದ ರೈತ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಇದರ ಸದಸ್ಯರಿಗೆ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ರೈತರು ತಮ್ಮ ಭೂಮಿಗಳನ್ನು ಹೊರ ರಾಜ್ಯ. ಜಿಲ್ಲೆಯವರಿಗೆ ಮಾರಾಟ ಮಾಡುತ್ತಿದ್ದಾರೆ. ಇದು ನಿಲ್ಲಿಸಬೇಕು. ತಾವು ಬೆಳೆದ ಬೆಳೆಗಳಿಂದ ಇತರೆ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಸ್ವಾವಲಂಬನೆಯನ್ನು ಸಾಧಿಸಬೇಕು ಎಂದರು.

ನಮ್ಮನ್ನಾಳುವ ಸರ್ಕಾರಗಳು ನಮ್ಮನ್ನು ಬೀದಿಗೆ ತರಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಸುಕಿನ ಜೋಳವನ್ನು ಅಮದು ಮಾಡಿಕೊಳ್ಳುವ ಮಾತುಕತೆ ನಡೆಯುತ್ತಿದ್ದಂತೆಯೇ ನಮ್ಮಲ್ಲಿ ಬೆಳೆಯುವ ಮುಸುಕಿನ ಜೋಳದ ಬೆಲೆ ಕುಸಿತ ಕಂಡು ಬಂದಿದೆ. ಇನ್ನು ಆಮದಾದರೆ ಇನ್ನೂ ಅಪಾಯವಿದೆ. ನಮ್ಮಲ್ಲಿ ಶೇ. 60 ರಷ್ಟು ರೈತರು ಇದ್ದಾರೆ. ಅಮೆರಿಕಾದಲ್ಲಿ ಶೇ. 1 ರಷ್ಟು, ಯುರೋಪ್ ರಾಷ್ಟ್ರಗಳಲ್ಲಿ ಶೇ. 4 ರಷ್ಟು ರೈತರಿದ್ದಾರೆ. ಅವರು ಸಾವಿರಾರು ಎಕರೆ ಜಮೀನನ್ನು ಹೊಂದಿದ್ದಾರೆ. ಅವರು ನಮ್ಮ ಜಮೀನ್ನು ಖರೀದಿಸಿ ನಮಗೆ ಕೆಲಸ ಇಲ್ಲದಂತೆ ಮಾಡಿ, ನಮ್ಮ ಮೇಲೆ ಸವಾರಿ ಮಾಡುವ ಹಂತಕ್ಕೆ ಹೋದರೆ ನಾವು ಮತ್ತೆ ಗುಲಾಮಗಿರಿಗೆ ಹೋಗುವ ಅಪಾಯವಿದೆ. ಭೂಮಿಗೆ ರಾಸಾಯನಿಕಗಳನ್ನು ಸುರಿದು ಇದನ್ನು ಬರಡು ಮಾಡುವ ಅಪಾಯವಿದೆ. ನಾವು ನಮ್ಮ ಭೂಮಿಯನ್ನು ಉಳಿಸಿಕೊಂಡು, ನಮ್ಮಲ್ಲಿ ಬೆಳೆದ ಉತ್ಪನ್ನಗಳಿಂದ ಇತರೆ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಅಧಿಕ ಲಾಭಗಳಿಸುವತ್ತ ತಮ್ಮ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಚಿಕ್ಕಸ್ವಾಮಿ, ರಾಜ್ಯ ಪ್ರತಿನಿಧಿ ರಾಘವೇಂದ್ರ ನಾಯ್ಡು, ತಾಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಖಜಾಂಚಿ ರಾಜು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಮೃತೇಶ್ವರ, ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೌಡಹಳ್ಳಿ ಸೋಮಣ್ಣ, ತಾಲೂಕು ಅಧ್ಯಕ್ಷ ಸಿದ್ದಲಿಂಗಸ್ವಾಮಿ ನರ‍್ದೇಶಕರಾದ ನಾಗೇಂದ್ರಸ್ವಾಮಿ, ಕೆಸ್ತೂರು ನಟರಾಜು, ಬಸವಣ್ಣ, ಗೋವಿಂದನಾಯಕ ಜಯಶಂಕರ, ಸಿದ್ದರಾಜು, ಶಾಂತಮರ‍್ತಿ, ನಾಗರಾಜು ಇದ್ದರು.