ಬಳ್ಳಾರಿ: ಸುಸ್ಥಿರ ಕೃಷಿ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ರೈತರು ಸಾಂಪ್ರದಾಯಿಕ ಏಕಬೆಳೆ ಪದ್ಧತಿಯಿಂದ ಹೊರಬಂದು ವೈವಿಧ್ಯಮಯ ಬೆಳೆ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಐಸಿಎಆರ್-ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರಮೇಶ ಎಂ.ಎನ್. ತಿಳಿಸಿದರು.

ಬಳ್ಳಾರಿಯ ಪ್ರಾದೇಶಿಕ ಕೇಂದ್ರದ ಐಸಿಎಆರ್-ಐಐಎಸ್‌ಡಬ್ಲ್ಯೂಸಿ ವತಿಯಿಂದ ಬುಡಕಟ್ಟು ಉಪ ಯೋಜನೆಯಡಿ ಸಂಡೂರು ತಾಲೂಕಿನ ಮಟ್ಟಜನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಮಣ್ಣಿನ ಆರೋಗ್ಯ ಚೇತನಕ್ಕಾಗಿ ವೈವಿಧ್ಯಮಯ ಬೆಳೆ ವ್ಯವಸ್ಥೆಗಳು ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಸಾವಯವ ಗೊಬ್ಬರ ತಯಾರಿಸುವುದು ಮತ್ತು ಬೆಳೆ ಅವಶೇಷಗಳನ್ನು ಸುಡದೇ ಮಣ್ಣಿನಲ್ಲಿ ಸೇರಿಸುವುದು ಮಣ್ಣಿನ ಆರೋಗ್ಯಕ್ಕೆ ಪೂರಕ. ಪಶುಪಾಲನೆ, ಹಸಿರು ಎಲೆ ಗೊಬ್ಬರ ಮತ್ತು ಕೃಷಿ ಅರಣ್ಯ ವ್ಯವಸ್ಥೆಗಳು ರೈತರಿಗೆ ಹೆಚ್ಚುವರಿ ಆದಾಯ ನೀಡುವುದಲ್ಲದೆ, ಹವಾಮಾನ ವೈಪರೀತ್ಯ ಎದುರಿಸಲು ಶಕ್ತಿ ನೀಡುತ್ತವೆ ಎಂದು ತಿಳಿಸಿದರು.

ಹಿರಿಯ ವಿಜ್ಞಾನಿ ಡಾ.ರವಿ ಮಾತನಾಡಿ, ಬೆಳೆ ವೈವಿಧ್ಯೀಕರಣ ಮತ್ತು ಎಫ್‌ವೈಎಂ, ಹಸಿರು ಗೊಬ್ಬರ, ಕಾಂಪೋಸ್ಟ್, ವರ್ಮಿಕಾಂಪೋಸ್ಟ್, ಒಳಚರಂಡಿ ಕೆಸರು ಮತ್ತು ಪ್ರೆಸ್‌ಮಡ್‌ನಂತಹ ಪರ್ಯಾಯ ಪೋಷಕಾಂಶ ಮೂಲಗಳ ಬಳಕೆಯಿಂದ ಇನ್‌ಪುಟ್ ವೆಚ್ಚವನ್ನು ಕಡಿಮೆ ಮಾಡುತ್ತದೆ. ಲಾಭದಾಯಕತೆ ಸುಧಾರಿಸುತ್ತದೆ. ಪೋಷಕಾಂಶಗಳ ಬಳಕೆಯ ದಕ್ಷತೆ ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುವಲ್ಲಿ ಮತ್ತು ಇಳುವರಿಯನ್ನು ಸ್ಥಿರಗೊಳಿಸುವಲ್ಲಿ ಅವುಗಳ ಪಾತ್ರ ಬಹುಮುಖ್ಯವಾಗಿದೆ. ವರ್ಮಿಕಾಂಪೋಸ್ಟ್, ಕಾಂಪೋಸ್ಟ್ ಮತ್ತು ಹಸಿರು ಗೊಬ್ಬರದ ಬಳಕೆಯಿಂದ ಕೃಷಿ ವೆಚ್ಚ ತಗ್ಗಿಸಿ ಲಾಭದಾಯಕತೆ ಹೆಚ್ಚಿಸಿಕೊಳ್ಳುವ ವಿಧಾನಗಳನ್ನು ವಿವರಿಸಿದರು.


ಇನ್ನೋರ್ವ ವಿಜ್ಞಾನಿ ಡಾ.ಕವಿತಾ ಪಿ. ಜಾಧವ್ ಮಾತನಾಡಿ, ಜೀವಾಮೃತ, ಬೀಜಾಮೃತ ಮತ್ತು ಮಲ್ಚಿಂಗ್ (ಹೊದಿಕೆ) ಅಳವಡಿಕೆಯಿಂದ ಪರಿಸರ ಸ್ನೇಹಿ ಕೃಷಿ ಸಾಧ್ಯ. ಸೂಕ್ಷ್ಮ ಪೋಷಕಾಂಶಗಳ ಕೊರತೆ ನೀಗಿಸುವ ಮೂಲಕ ಸುಸ್ಥಿರ ಇಳುವರಿ ಪಡೆಯಬಹುದು ಎಂದು ರೈತರಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರೈತರಿಗೆ ಸುಧಾರಿತ ತಳಿಯ ತೊಗರಿ ಬೀಜಗಳನ್ನು (ಪಿಆರ್‌ಜಿ-176) ವಿತರಿಸಲಾಯಿತು. ಜಿಪ್ಸಮ್ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಜಮೀನಿನಲ್ಲಿ ಬಳಸುವ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.ಗ್ರಾಮದ ಸುಮಾರು 40ಕ್ಕೂ ಹೆಚ್ಚು ರೈತರು ಈ ಅಭಿಯಾನದಲ್ಲಿ ಪಾಲ್ಗೊಂಡು ಮಾಹಿತಿ ಪಡೆದರು.

ಸಂಡೂರು ತಾಲೂಕಿನ ಮಟ್ಟಜನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಮಣ್ಣಿನ ಆರೋಗ್ಯ ಚೇತನಕ್ಕಾಗಿ ವೈವಿಧ್ಯಮಯ ಬೆಳೆ ವ್ಯವಸ್ಥೆಗಳು ಜಾಗೃತಿ ಅಭಿಯಾನದಲ್ಲಿ ಜಿಪ್ಸಮ್ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಜಮೀನಿನಲ್ಲಿ ಬಳಸುವ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.