ರೈತರ ಬಿತ್ತನೆಗೆ ಕೊರತೆ ಆಗದಿರಲಿ: ಸಚಿವ ಎಸ್‌ಎಸ್‌ಎಂ

| Published : May 25 2025, 03:17 AM IST

ರೈತರ ಬಿತ್ತನೆಗೆ ಕೊರತೆ ಆಗದಿರಲಿ: ಸಚಿವ ಎಸ್‌ಎಸ್‌ಎಂ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಪೂರ್ವ ಮಳೆ ಜಿಲ್ಲೆಯಲ್ಲಿ ಉತ್ತಮವಾಗಿ ಶುರುವಾಗಿದ್ದು, ಬಿತ್ತನೆ ಬೀಜ, ಗೊಬ್ಬರಕ್ಕೆ ಯಾವುದೇ ಕೊರತೆಯಾಗದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಜಿಲ್ಲಾಡಳಿತ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಭೆ । ಮಳೆ ಅಪಾಯ ಜಾಗೃತಿಗೆ ನಿರ್ದೇಶನ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಂಗಾರು ಪೂರ್ವ ಮಳೆ ಜಿಲ್ಲೆಯಲ್ಲಿ ಉತ್ತಮವಾಗಿ ಶುರುವಾಗಿದ್ದು, ಬಿತ್ತನೆ ಬೀಜ, ಗೊಬ್ಬರಕ್ಕೆ ಯಾವುದೇ ಕೊರತೆಯಾಗದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ ಜಿಲ್ಲಾಡಳಿತಕ್ಕೆ ಸೂಚಿಸಿದರು.

ನಗರದ ತಮ್ಮ ಸ್ವಗೃಹ ಶಿವ ಪಾರ್ವತಿಯಲ್ಲಿ ಶನಿವಾರ ಜಿಲ್ಲಾಡಳಿತ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದು, ಬೀಜ, ಗೊಬ್ಬರಕ್ಕೆ ಯಾವುದೇ ಸಮಸ್ಯೆಯಾಗದಂತೆ ನಿಗಾ ವಹಿಸಿ ಎಂದರು.

ಮಳೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಯುದೇ ಪ್ರಾಣ ಹಾನಿ, ಆಸ್ತಿ ಹಾನಿಯಾದರೆ ಸೂಕ್ತ ಕ್ರಮ ಕೈಗೊಂಡು, ಸರ್ಕಾರಕ್ಕೆ ಸಲ್ಲಿಸಬೇಕು. ಮಳೆಯಿಂದಾಗಿ ಆಗುವ ಅಪಾಯ, ಅನಾಹುತಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು.

ಗುಡುಗು-ಸಿಡಿಲಿನಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಿ. ಗುಡುಗು-ಸಿಡಿಲಿನ ಸಂದರ್ಭದಲ್ಲಿ ಹೇಗೆ ಸುರಕ್ಷಿತವಾಗಿರಬೇಕು, ಆಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಮಳೆಯಿಂದ ಮರಗಳು ಉರುಳಿ ಬಿದ್ದರೆ, ವಿದ್ಯುತ್ ಕಂಬಗಳು ಮುರುಳಿ ಬಿದ್ದರೆ, ತಕ್ಷಣ ತೆರವುಗೊಳಿಸಬೇಕು. ವಿದ್ಯುತ್ ಸಮಸ್ಯೆ ಉಂಟಾದರೆ, ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದರು.

ಮಳೆ ನೀರು, ಕೊಳಚೆ ನೀರು, ಕಲುಷಿತ ನೀರು ಕುಡಿಯುವ ನೀರಿನ ಪೈಪ್‌ಲೈನ್‌ ಸೇರಿ, ಪೂರೈಕೆಯಾಗದಂತೆ ಪರಿಶೀಲಿಸುತ್ತಿರಿ. ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಒತ್ತು ನೀಡಿ. ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆಯು ಸಮುದಾಯ ‍‍ಆರೋಗ್ಯ ಕೇಂದ್ರಗಳ ಮೂಲಕ ಜನರಿಗೆ ಸೂಕ್ತ ಮುನ್ನೆಚ್ಚರಿಕೆ ಮೂಡಿಸಲಿ ಎಂದರು.

ಜಿಲ್ಲಾಡಳಿತ, ತಾಲೂಕು ಆಡಳಿತ, ಮಹಾ ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಪಂಗಳು ಜಿಲ್ಲಾದ್ಯಂತ ಎಲ್ಲಿಯೂ ಮಳೆ ನೀರು ನುಗ್ಗುವಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ಗಮನ ಹರಿಸಬೇಕು. ತಗ್ಗು ಪ್ರದೇಶಕ್ಕೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಬೇಕು. ತಿಪ್ಪೆ ಗುಂಡಿಗಳಲ್ಲಿದ್ದರೆ ತಕ್ಷಣವೇ ಅಂತಹ ಕಡೆ ಸ್ವಚ್ಛತಾ ಕಾರ್ಯ ಕೈಗೊಳ್ಳಿ ಎಂದು ಹೇಳಿದರು.

ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ ಇತರೆ ಭಾಗಗಳಲ್ಲಿ ಮುಂದಾರು ಪೂರ್ವ ಮಳೆಗೆ ಬತ್ತ, ಮೆಕ್ಕೆಜೋಳ ಹಾಗೂ ಇತರೆ ಬೆಳೆಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ರೈತರು ತಮ್ಮ ಗಮನಕ್ಕೆ ತರುತ್ತಿದ್ದಾರೆ. ತಕ್ಷಣವೇ ಅಂತಹ ರೈತರ ನೆರವಿಗೆ ಕೃಷಿ ಇಲಾಖೆಗೆ ಧಾವಿಸಬೇಕು. ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ. ಈಗಾಗಲೇ ಮೆಕ್ಕೆಜೋಳ ಇತರೆ ಬಿತ್ತನೆದೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದರು.

ಜಿಲ್ಲಾಡಳಿತ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು. ಮತ್ತೊಂದು ಕಡೆ ಕಳೆದೊಂದು ವಾರದಿಂದ ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿರುವ ಬೆನ್ನಲ್ಲೇ ರೈತರು ಭೂಮಿ ಹದ ಮಾಡಿಕೊಂಡು, ಮೆಕ್ಕೆಜೋಳ ಇತರೆ ಬೆಳೆಗಳನ್ನು ಬೆಳೆಯುವುದರಲ್ಲಿ ತಲ್ಲೀನರಾಗಿದ್ದಾರೆ. ಉರಿ ಬಿಸಿಲಿನಿಂದ ಬಸವಳಿದಿದ್ದ ಭೂಮಿಯು ತಂಪಾಗಿದ್ದು, ಕಳೆದೊಂದು ವಾರದಿಂದ ಸುರಿದ ಮಳೆಯಿಂದಾಗಿ ವಾತಾವರಣವೂ ತಂಪಾಗಿದ್ದು, ಕೃಷಿ ಚಟುವಟಿಕೆಗಳೂ ದಾವಣಗೆರೆ ತಾಲೂಕು ಸೇರಿ ಜಿಲ್ಲಾದ್ಯಂತ ಗರಿಗೆದರಿವೆ.