ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲೆಯಲ್ಲಿ ಎಲ್ಲಿಯೂ ಬಿತ್ತನೆ ಬೀಜಗಳು, ರಸಗೊಬ್ಬರಗಳು ಹಾಗೂ ಕೀಟನಾಶಕಗಳ ಕೊರತೆ ಉಂಟಾಗದಂತೆ ಸಮರ್ಪಕ ದಾಸ್ತಾನು ಇರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.ತಮ್ಮ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಕೃಷಿ ಪರಿಕರ ಸರಬರಾಜುದಾರರು ಹಾಗೂ ವಿತರಕರ ಸಭೆಯಲ್ಲಿ ಮಾತನಾಡಿದ ಅವರು, 2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಬೇಕಾಗುವ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ದಾಸ್ತಾನುಗಳ ಲಭ್ಯತೆಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಪರಿಶೀಲಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಿಗೆ ತಿಳಿಸಿದರು.
ರೈತರು ಇಚ್ಛಿಸುವ ರಸಗೊಬ್ಬರದ ಜೊತೆ ಲಿಂಕ್ ಮಾಡಿ ಮತ್ತೊಂದು ಗೊಬ್ಬರವನ್ನು ಮಾರಾಟಗಾರರು ವಿತರಿಸಬಾರದು ಹಾಗೂ ರಸಗೊಬ್ಬರಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ರಸಗೊಬ್ಬರ ನಿಯಂತ್ರಣ ಕಾಯಿದೆಯ ಆದೇಶದಂತೆ ಕ್ರಮ ಕೈಗೊಳ್ಳಲು ಇಲಾಖಾ ಅಧಿಕಾರಿಗಳಿಗೆ ಅವರು ಸೂಚಿಸಿದರು.ಪ್ರಸ್ತುತ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ ಬೀಳುವ ಸಂಭವವಿರುವುದರಿಂದ ಯಾವುದೇ ಪರಿಕರಗಳ ಲಭ್ಯತೆಯಲ್ಲಿ ವ್ಯತ್ಯಾಸವಾಗದಂತೆ ಅಧಿಕೃತ ಬಿಲ್ಲನ್ನು ರೈತರಿಗೆ ನೀಡಬೇಕು. ರಸಗೊಬ್ಬರ ಸಾಗಾಣಿಕೆ ವೆಚ್ಚಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಹೆಚ್ಚಿನ ದರವನ್ನು ಸಾಗಾಣಿಕೆದಾರರು ನಿಗದಿಪಡಿಸಲಾಗುತ್ತಿದ್ದು, ಈ ಬಗ್ಗೆ ಡೀಸೆಲ್ ಹಾಗೂ ಇತರೆ ವೆಚ್ಚಗಳ ಏರಿಕೆಯಾಗದಿರುವುದರಿಂದ ಸಂಬಂಧಿಸಿದ ಲಾರಿ ಮಾಲೀಕರ ಸಂಘ ಹಾಗೂ ಲಾರಿ ಅಸೋಸಿಯೇಷನ್ ಪದಾಧಿಕಾರಿಗಳೊಡನೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಜಂಟಿ ಕೃಷಿ ನಿರ್ದೇಶಕರು ಸಭೆ ನಡೆಸಿ, ರೈತರಿಗೆ ಯಾವುದೇ ರೀತಿಯ ರಸಗೊಬ್ಬರ ಸರಬರಾಜಿನಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಅವರು ಹೇಳಿದರು.
2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆ ನೊಂದಾಯಿಸಿಕೊಳ್ಳಲು ಕ್ರಮ ವಹಿಸುವಂತೆ ಕೃಷಿ ಪರಿಕರ ಮಾರಾಟಗಾರರ ಸಂಘದವರು ಸಹಕರಿಸಬೇಕು. ಹಾಗೂ ಕೃಷಿ ಪರಿಕರ ಮಾರಾಟ ಮಳಿಗೆಯಲ್ಲಿ ಬೆಳೆ ವಿಮೆಗೆ ಸಂಬಂಧಿಸಿದ ಪೋಸ್ಟರ್ ಪ್ರದರ್ಶಿಸಬೇಕು ಎಂದರು.ಇದೇ ವೇಳೆ ಬೆಳೆ ವಿಮೆ ಯೋಜನೆಯ ಕರಪತ್ರ ಹಾಗೂ ಪೋಸ್ಟರ್ ಗಳನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್, ವಿವಿಧ ಕಂಪನಿಯ ರಸಗೊಬ್ಬರ ವಿತರಕರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ, ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯ ಅಧಿಕಾರಿಗಳು, ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಇದ್ದರು.