ಸಣ್ಣ-ಪುಟ್ಟ ಅವಶ್ಯಕತೆಗಳಿಗೆ ಭೂಮಿ ಮಾರಿದರೆ ಮುಂದೆ ಹಣ ಉಳಿಯುವುದಿಲ್ಲ, ಬೇಕೆಂದಾಗ ಭೂಮಿ ಸಿಗುವುದಿಲ್ಲ, ಭೂಮಿ ಇದ್ದರೆ ನಿಮ್ಮ ಮಕ್ಕಳು ಮೊಮ್ಮಕ್ಕಳ ಅಸ್ತಿತ್ವ ಇರುತ್ತದೆ ಎಂದರು ರೈತರು ತಮ್ಮ ಇರುವ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ತಿಪಟೂರು

ಜಿಲ್ಲಾ ಕೇಂದ್ರಕ್ಕೆ ಬಂದು ಸಮಸ್ಯೆ ಹೇಳಿಕೊಳ್ಳುವುದು ಕಷ್ಟವಾಗುತ್ತದೆ ಎಂಬ ಕಾರಣದಿಂದ ತಾಲೂಕು ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ಆಯೋಜಿಸಲಾಗುತ್ತಿದ್ದು ಇಲ್ಲಿ ಸ್ವೀಕೃತವಾಗುವ ಎಲ್ಲ ಅರ್ಜಿಗಳನ್ನು ಒಂದು ಪ್ರತ್ಯೇಕವಾದ ಆನ್‌ಲೈನ್ ಪೋರ್ಟಲ್‌ಗೆ ಫೀಡ್ ಮಾಡಿ ಅರ್ಜಿಯಲ್ಲಿನ ಸಮಸ್ಯೆ ಬಗೆಹರಿಯುವವರೆಗೂ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ರೈತರಿಗೆ ತಿಳಿಸಿದರು.

ನಗರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರದ ನಿರ್ದೇಶನದನ್ವಯ ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ಜಿಲ್ಲಾಧಿಕಾರಿಗಳ ನಡೆ ತಾಲೂಕುಗಳ ಕಡೆ-ಜನ ಸಂಪರ್ಕ ಸಭೆಯನ್ನು ತುಮಕೂರು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯೋಜಿಸುತ್ತಿದ್ದು ತಿಪಟೂರಿನ ಸಭೆ ಒಂಬತ್ತನೆಯದಾಗಿದೆ. ಜನಸಂಖ್ಯೆ ಹೆಚ್ಚಾದಂತೆಲ್ಲಾ ಈಗ ಭೂಮಿಯ ಲಭ್ಯತೆ ಕಡಿಮೆಯಾಗಿದೆ. ರೈತರು ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮಲ್ಲಿರುವ ಭೂಮಿಯನ್ನು ಮಾರದೇ ಉಳಿಸಿಕೊಳ್ಳಿ. ಕಳೆದುಕೊಳ್ಳಬೇಡಿ. ಸಣ್ಣ-ಪುಟ್ಟ ಅವಶ್ಯಕತೆಗಳಿಗೆ ಭೂಮಿ ಮಾರಿದರೆ ಮುಂದೆ ಹಣ ಉಳಿಯುವುದಿಲ್ಲ, ಬೇಕೆಂದಾಗ ಭೂಮಿ ಸಿಗುವುದಿಲ್ಲ, ಭೂಮಿ ಇದ್ದರೆ ನಿಮ್ಮ ಮಕ್ಕಳು ಮೊಮ್ಮಕ್ಕಳ ಅಸ್ತಿತ್ವ ಇರುತ್ತದೆ ಎಂದರು ರೈತರು ತಮ್ಮ ಇರುವ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದರು.

ರೈತರು ತಮ್ಮ ಜಮೀನಿನ ದಾಖಲೆಗಳನ್ನು ಆಗಾಗ್ಗೆ ಪರಿಶೀಲಿಸುತ್ತಿರಬೇಕು. ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಪಹಣಿ ಪಡೆದುಕೊಂಡು ಪರೀಕ್ಷಿಸಬೇಕು. ಪಹಣಿಯಲ್ಲಿರುವ ಹೆಸರಿನವರು ಮೃತಪಟ್ಟರೆ ನಂತರದ ವಾರಸುದಾರರು ಖಾತೆ ಬದಲಾವಣೆ ಮಾಡಿಸಿ ಪಹಣಿಯಲ್ಲಿ ಹೆಸರು ಬದಲಾಯಿಸಿಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ದೊರಕುವ ಅನೇಕ ಯೋಜನೆಗಳ ಫಲ, ಸಬ್ಸಿಡಿ ದೊರಕುವುದಿಲ್ಲ. ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು, ಆಡಳಿತಾಧಿಕಾರಿಗಳು, ನಿಮ್ಮ ಮನೆಗೆ ಬಂದು ಮಾಹಿತಿ ಪಡೆದುಕೊಳ್ಳುತ್ತಾರೆ. ಅವರಿಗೆ ಸರಿಯಾದ ಮಾಹಿತಿ ನೀಡಿ ಖಾತೆ ಪಹಣಿ ಬದಲಾಯಿಸಿಕೊಳ್ಳಿ. ಈಗ ಮರಣ ಪ್ರಮಾಣಪತ್ರ ಇಲ್ಲದಿದ್ದರೂ ಖಾತೆ ಬದಲಾಯಿಸಿಕೊಳ್ಳಲು ಸರಳೀಕರಿಸಲಾಗಿದೆ ಎಂದರು.

ಬೆಳಿಗ್ಗೆ ೧೧ ಗಂಟೆಗೆ ತಾಲೂಕಿನ ಬಿಳಿಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಒಟ್ಟು ೧೦೧ ಅರ್ಜಿಗಳು ಸಾರ್ವಜನಿಕರಿಂದ ಸ್ವೀಕೃತವಾದವು. ಅದರಲ್ಲಿ ಕಂದಾಯ ಇಲಾಖೆಗೆ ೩೬ ಅರ್ಜಿಗಳು ಸ್ವೀಕೃತವಾಗಿವೆ. ತಾ.ಪಂಚಾಯಿತಿಗೆ ೨೭ ಅರ್ಜಿಗಳು, ರಾಷ್ಟ್ರೀಯ ಹೆದ್ದಾರಿ ೧೮, ಸರ್ವೆ ಇಲಾಖೆ ೫, ಆರೋಗ್ಯ ೪, ಕೃಷಿ ೩, ಅರಣ್ಯ ಮತ್ತು ಶಿಕ್ಷಣ ಇಲಾಖೆ ತಲಾ ೨ಅರ್ಜಿಗಳು ಸ್ವೀಕೃತವಾದವು. ಸಂಜೆ ೪ಗಂಟೆಗೆ ತಿಪಟೂರಿನ ತಾಲೂಕು ಕಚೇರಿಯಲ್ಲಿ ನಡೆದ ಎರಡನೇ ಜನಸಂಪರ್ಕ ಸಭೆಯಲ್ಲಿ ೧೩೪ ಅರ್ಜಿಗಳು ಸ್ವೀಕೃತವಾಗಿದ್ದು ತಿಪಟೂರು ತಾಲೂಕಿನ ಎರಡೂ ಜನಸಂಪರ್ಕ ಸಭೆಗಳಿಂದ ೨೩೪ ಅರ್ಜಿಗಳು ಸಾರ್ವಜನಿರಿಂದ ಸ್ವೀಕೃತವಾಗಿವೆ.

ಸಭೆಯಲ್ಲಿ ಉಪವಿಭಾಗಾಧಿಕಾರಿ ಸಪ್ತಶ್ರೀ ಬಿ.ಕೆ., ತಹಸೀಲ್ದಾರ್ ಮೋಹನ್‌ಕುಮಾರ್.ಜಿ.ವಿ., ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಸುದರ್ಶನ್.ಎಚ್.ಎಂ., ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.