ಸಾರಾಂಶ
ಹುಣಸೂರು: ಗ್ರಾಮೀಣ ಭಾಗಗಳಲ್ಲಿ ಕೆರೆಕಟ್ಟೆಗಳನ್ನು ಉಳಿಸಿಕೊಂಡು ಅಭಿವೃದ್ಧಿಪಡಿಸುವ ಪುಣ್ಯ ಕಾರ್ಯದಲ್ಲಿ ರೈತರು ಪಾಲ್ಗೊಳ್ಳಬೇಕೆಂದು ಉಯಿಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷ ದೇವರಾಜ್ ಮನವಿ ಮಾಡಿದರು. ಜಿಪಂ ಮೈಸೂರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಭಗೀರಥ ಸಂಸ್ಥೆಯ ಸಹಯೋಗದೊಂದಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕಲ್ಯಾಣಿ ಪುನಶ್ಚೇತನ ಕಾರ್ಯಕ್ರಮದಡಿ ತಾಲೂಕಿನ ಉಯಿಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಕುಡಿನೀರು ಮುದ್ದನಹಳ್ಳಿ ಗ್ರಾಮದ ಪಟ್ಟಲದಮ್ಮನ ಕಲ್ಯಾಣಿ (ದೊಡ್ಡ ಆಲದ ಮರದ ಕಲ್ಯಾಣಿ) ಯನ್ನು ಐಇಸಿ/ಎಚ್‌ಆರ್.ಡಿ ಚಟುವಟಿಕೆಗಳ ಅಡಿ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನೀರು ಅತ್ಯಮೂಲ್ಯ ವಸ್ತುವಾಗಿದ್ದು, ಕೆರೆಕಟ್ಟೆಗಳ ನಿರ್ವಹಣೆಯಿಂದ ಅಂತರ್ಜಲ ಹೆಚ್ಚಾಗುವ ಮೂಲಕ ರೈತರಿಗೆ ನೀರಿನ ಸಂಪನ್ಮೂಲ ಭರಪೂರವಾಗಿ ಸಿಗಲಿದೆ. ನೀರಿನ ಮೂಲಗಳನ್ನು ಉಳಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಮತ್ತು ಜೀವನವನ್ನು ನೀಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಗ್ರಾಮೀಣರು, ರೈತರು ಹೆಚ್ಚಿನ ಆಸಕ್ತಿ ವಹಿಸಿ ಕೆರೆಕಟ್ಟೆಗಳನ್ನು ಉಳಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕೆಂದರು. ಗ್ರಾಪಂ ಸದಸ್ಯರಾದ ಆಯುಬ್ ಪಾಷ, ಇಕ್ಬಾಲ್ ಪಾಷಾ, ರಾಧಾ, ಪಿಡಿಒ ತೇಜೇಂದ್ರ ವರಪ್ರಸಾದ್, ಜಲ ಜೀವನ್ ಮಿಷನ್ ಯೋಜನೆಯ ಜಿಲ್ಲಾ ತಂಡದ ಮಹೇಶ್, ತಾಲೂಕು ಸಂಯೋಜಕ ಆನಂದ್, ರಾಜು ಇದ್ದರು.