ಸಾರಾಂಶ
ಕುರುಗೋಡು: ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿದ್ಯುತ್ ಸುರಕ್ಷತೆಯ ಮೇಲೆ ಜಾಗೃತಿ ಮೂಡಿಸುವ ಬೀದಿನಾಟಕ ಪ್ರದರ್ಶನ ಸೋಮವಾರ ಜರುಗಿತು.
ಬಳ್ಳಾರಿಯ ಸಂಭ್ರಮ ಇವೆಂಟ್ಸ್ ತಂಡದ ವಿನೋದ್ ಮತ್ತು ಸಹ ಕಲಾವಿದರು ಬೀದಿ ನಾಟಕ ಪ್ರದರ್ಶನ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದರು.ಅನಿರೀಕ್ಷಿತ ಸಂದರ್ಭಗಳಲ್ಲಿ ಸಂಭವಿಸುವ ವಿದ್ಯುತ್ ಅವಘಡಗಳ ಮೇಲೆ ಬೆಳಕು ಚೆಲ್ಲುವ ಸನ್ನಿವೇಶಗಳನ್ನು ಪ್ರದರ್ಶಿಸಿ, ಜನರಲ್ಲಿ ಜಾಗೃತಿ ಮೂಡಿಸಿದರು. ವಿದ್ಯುತ್ ಕಂಬಗಳನ್ನು ಮಳೆ, ಗುಡುಗು, ಸಿಡಿಲು ಸಂದರ್ಭದಲ್ಲಿ ಸ್ಪರ್ಶಿಸಬೇಡಿ, ಮುರಿದುಬಿದ್ದ ತಂತಿಯನ್ನು ಬರಿಗೈಯಲ್ಲಿ ಮುಟ್ಟಬೇಡಿ, ವಿದ್ಯುತ್ ಸುರಕ್ಷತೆ ಇಲ್ಲದ ಜೀವನ ಆಪತ್ತಿಗೆ ಆಹ್ವಾನ, ಇಲಾಖೆಗೆ ತಿಳಿಸದೆ ಸ್ವಯಂ ವಿದ್ಯುತ್ ದುರಸ್ತಿ ಮಾಡಬೇಡಿ ಎನ್ನುವ ಫಲಕಗಳನ್ನು ಪ್ರದರ್ಶಿಸಿದರು.
ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಹೊಲ-ಗದ್ದೆಗಳಲ್ಲಿ ವಿದ್ಯುತ್ ತಂತಿಗಳಾಗಲಿ ಅಥವಾ ಟಿಸಿ (ವಿದ್ಯುತ್ ಪರಿವರ್ತಕ) ಗಳ ಸಮಸ್ಯೆಗಳು ಬಂದಲ್ಲಿ ರೈತರು ತಾವೇ ದುರಸ್ತಿ ಕೆಲಸಗಳು ಮಾಡದೇ ಜೆಸ್ಕಾಂ ಸಿಬ್ಬಂದಿ ಬರುವ ವರೆಗೂ ಕಾದು ಅವರಿಂದಲೇ ದುರಸ್ತಿ ಮಾಡಿಸಿಕೊಂಡು ರೈತರು ತಮ್ಮ ಸುರಕ್ಷತೆ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಎಂದರು.ವಿದ್ಯುತ್ ಸಮಸ್ಯೆ ಉಂಟಾದಲ್ಲಿ ರೈತರು ತಾಳ್ಮೆಯಿಂದ ವರ್ತಿಸಬೇಕು. ಇಲಾಖೆಗೆ ತಿಳಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆದುಕೊಳ್ಳಬೇಕು. ಅವಸರಪಟ್ಟರೆ ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜೆಸ್ಕಾಂನ ಗ್ರಾಮೀಣ ಉಪವಿಭಾಗದ ಕಾರ್ಯ ಮತ್ತು ಪಾಲನಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನ್ ಬಾಬು ಮಾತನಾಡಿ, ವಿದ್ಯುತ್ ಬಗ್ಗೆ ಯಾರೂ ಲಘುವಾಗಿ ಪರಿಗಣಿಸಬಾರದು. ಎಚ್ಚರ ತಪ್ಪಿದರೆ ಪ್ರಾಣಕ್ಕೆ ಹಾನಿಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ರೈತರಿಗೆ ವಿದ್ಯುತ್ ಬಗ್ಗೆ ಅರಿವಿಲ್ಲದೆ ಬಹಳಷ್ಟು ಅನಾಹುತಗಳಾಗಿವೆ. ವಿದ್ಯುತ್ ಸಂಬಂಧಿತ ಯಾವುದೇ ಪರಿಸ್ಥಿತಿಯಲ್ಲಿ ೧೯೧೨ಗೆ ಕರೆ ಮಾಡಿ, ಮಾಹಿತಿ ನೀಡಬಹುದು ಹಾಗೂ ದೂರು ದಾಖಲಿಸಬಹುದು ಎಂದು ಹೇಳಿದರು.ಎಒ ಸುಕುಮಾರ, ಲೆಕ್ಕಾಧಿಕಾರಿ ಜಯಮ್ಮ, ಬಳ್ಳಾರಿ ಗ್ರಾಮೀಣ ಎಇಇ ಮೊಹನಬಾಬು, ಕುರುಗೋಡು ಎಇಇ ರಾಜೇಂದ್ರ ಪ್ರಸಾದ್, ಎಇಇ ಉಮೇಶ್, ಎಇಇ ದುರ್ಗಾಪ್ರಸಾದ್, ಎಇಪಿ ಮಂಜುನಾಥ, ಎಇಪಿ ಶಿಲ್ಪಾ, ಎಇಪಿ ಗೌಸ್, ಎಇಪಿ ನಾಗಶ್ರೀ, ಎಇಇ ಸಿಂಧೂ, ಎಇಇ ನೆಹರೂ, ಎಇಇ ಗಾಧಿಲಿಂಗ, ಎಇ ಪ್ರಿಯಾಂಕ, ಸೆಕ್ಷನ್ ಆಫೀಸರ್ ಜಗ್ಗನಾಯಕ, ಸೆಕ್ಷನ್ ಆಫೀಸರ್ ಬಸವರಾಜ ಹಾಗೂ ಕುರುಗೋಡು ಸಬ್ ಡಿವಿಜನ್ ಸಿಬ್ಬಂದಿ ಇದ್ದರು.