ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸದಸ್ಯರಿಗೂ ಉಚಿತವಾಗಿ ಆರೋಗ್ಯ, ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸುವ ಮೂಲಕ ವಿಶೇಷವಾಗಿ ವಾರ್ಷಿಕ ಮಹಾಸಭೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸದಸ್ಯರಿಗೂ ಉಚಿತವಾಗಿ ಆರೋಗ್ಯ, ಕಣ್ಣಿನ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸುವ ಮೂಲಕ ವಿಶೇಷವಾಗಿ ವಾರ್ಷಿಕ ಮಹಾಸಭೆ ನಡೆಸಲಾಯಿತು.ತಾಲೂಕಿನ ಮಾದಾಪುರ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಹಕಾರ ಸಂಘ, ಮೈಸೂರಿನ ವಿಸ್ತರಾ ಅಸ್ಪತ್ರೆ, ಮೈಸೂರಿನ ನವನೀತಾ ನೇತ್ರಾಲಯ, ಮರಿಯಾಲ ಬಸವರಾಜೇಂದ್ರ ಅಸ್ಪತ್ರೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮವನ್ನು ಸಂಘ ಅಧ್ಯಕ್ಷ ಡಿ.ನಾಗೇಂದ್ರ ಸ್ವತಃ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಚಾಲನೆ ನೀಡಿದರು.
ಬಳಿಕ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನದ ವರೆಗೆ ಮೂರು ಶಿಬಿರಗಳು ಯಶಸ್ವಿಯಾಗಿ ನಡೆಯಿತು. ೭೫ ಮಂದಿ ರೈತರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ೫೦ ಮಂದಿ ಕಣ್ಣಿನ ತಪಾಸಣೆಗೊಳ್ಳಪಟ್ಟು, ೧೦ ಮಂದಿ ಕಣ್ಣಿನ ಪೊರೆಯುಳ್ಳವರಿಗೆ ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು. ನಂತರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಿ. ನಾಗೇಂದ್ರ ಮಾತನಾಡಿ, ಪ್ರತಿ ವರ್ಷವು ಸಹ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆ ಸಾಲಿನ ವರ್ಷದ ಲೆಕ್ಕಪತ್ರವನ್ನು ಮಂಡಿಸಿ, ಸದಸ್ಯರಿಂದ ಸಹಿ ಪಡೆದುಕೊಳ್ಳುತ್ತಿದ್ದೇವೆ. ಈ ವರ್ಷ ವಿಶೇಷವಾಗಿ ಸದಸ್ಯರ ಆರೋಗ್ಯ ಬಗ್ಗೆ ಕಾಳಜಿ ವಹಿಸಿ, ಮೈಸೂರಿನಿಂದ ತಜ್ಞ ವೈದ್ಯರ ತಂಡವನ್ನು ಆಹ್ವಾನಿಸಿ, ಉಚಿತ ಆರೋಗ್ಯ, ಕಣ್ಣಿನ ತಪಾಸಣೆ ಶಿಬಿರವನ್ನು ಏರ್ಪಡಿಸಿದ್ದೇವೆ. ಜೊತೆಗೆ ರಕ್ತದಾನ ಪವಿತ್ರ ದಾನವಾಗಿದೆ ಎಂದರು.ಸಂಘವು ಉತ್ತಮವಾಗಿ ವಹಿವಾಟು ನಡೆಸುತ್ತಿದ್ದು, ಸದಸ್ಯ ರೈತರು ಪಡೆದುಕೊಂಡ ಸಾಲ ವನ್ನು ಸಕಾಲದಲ್ಲಿ ಮರು ಪಾವತಿ ಮಾಡಿದರೆ ಮತ್ತೊಬ್ಬ ಸದಸ್ಯರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ಸರ್ಕಾರದ ರಿಯಾಯಿತಿ ಮತ್ತು ಸಹಾಯಧನವನ್ನು ಸಹ ಲಭಿಸುತ್ತಿದೆ. ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟರು ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದು, ಮುಂದಿನ ದಿನಗಳಲ್ಲಿ ಸಂಘದ ಕಟ್ಟಡ ದುರಸ್ತಿಗೆ ಅನುದಾನ ನೀಡುವ ಜೊತೆಗೆ ಕೃಷಿ ಸಾಲವನ್ನು ಹೆಚ್ಚು ಮಂಜೂರು ಮಾಡಿಸಿಕೊಡುವ ಭರವಸೆ ನೀಡಿದ್ದಾರೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ವಾರ್ಷಿಕ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಪುಟ್ಟಮಾದಯ್ಯ, ನಿರ್ದೇಶಕರಾದ ಮಲ್ಲೇಶ್, ಶಿವರುದ್ರಸ್ವಾಮಿ, ಜಿ.ಕೆ. ಮಹೇಶ್, ಬಿಳಿಗಿರಿರಂಗನಾಯಕ, ಕೆ.ಎಂ. ರೂಪೇಶ್, ಜಾನ್ ಸ್ಪೀಫನ್, ಸಿದ್ದರಾಜಮ್ಮ, ರತ್ನಮ್ಮ, ಎನ್. ಮಹದೇವಪ್ಪ ಮಾಜಿ ಅಧ್ಯಕ್ಷರಾದ ಪು.ಶ್ರೀನಿವಾಸನಾಯಕ, ಪುಟ್ಟನಂಜಪ್ಪ, ರಾಜಶೇಖರ್, ನೌಕರ ಪಿ.ಅಜಯಕುಮಾರ್, ಸರ್ವ ಸದಸ್ಯರು ಇದ್ದರು.