ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ರೈತರು ಒಂದೇ ಬೆಳೆ ಆಧರಿಸಿ ಕೃಷಿ ಚಟುವಟಿಕೆಯನ್ನು ಮಾಡದೆ, ಪರ್ಯಾಯವಾಗಿ ಇತರೆ ಬೆಳೆಗಳನ್ನು ಬೆಳೆಯುವುದರ ಕುರಿತು ಹೆಚ್ಚಿನ ಆದ್ಯತೆ ನೀಡಬೇಕು. ಆದ್ಯತೆ ನೀಡಿದ್ದಲ್ಲಿ ರೈತರ ಕುಟುಂಬಗಳು ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಹೇಳಿದರು.ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಜಿಲ್ಲಾಡಳಿತ, ಜಿಪಂ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಇವರುಗಳ ಸಹಯೋಗದಲ್ಲಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಬೆಳವಣಿಗೆಗೆ ಹೊಸ ದೃಷ್ಟಿಕೋನ ಕುರಿತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ಜಿಲ್ಲೆಯಲ್ಲಿ ಬಹು ಕೃಷಿ ಚಟುವಟಿಕೆಗಳಿಗಿಂತ ಏಕ ಬೆಳೆ ಆಧಾರಿತ ಕೃಷಿ ಚಟುವಟಿಕೆ ಅವಲಂಬನೆ, ಕೃಷಿ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗಿಲ್ಲ. ಆದರೆ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳನ್ನು ಗಮನಿಸಿದಾಗ ಅಲ್ಲಿಯ ನೀರಿನ ಕೊರತೆಯ ಮಧ್ಯೆಯು ಹೆಚ್ಚಿನ ಮಟ್ಟದಲ್ಲಿ ತರಕಾರಿ, ಹೂವು ಹಾಗೂ ಹೈನುಗಾರಿಕೆಯಲ್ಲಿ ಬಹುದೊಡ್ಡ ಸಾಧನೆ ಮಾಡಲಾಗಿದೆ ಎಂದರು.ಜಿಲ್ಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತರುವ ಸಲುವಾಗಿ ಈ ಸಂವಾದ ಅತ್ಯಂತ ಮುಖ್ಯವಾಗಿದೆ. ಸಮಗ್ರ ಯೋಜನೆಯ ಮೂಲಕ ಜಿಲ್ಲೆಯಲ್ಲಿ ಪರ್ಯಾಯ ಕೃಷಿ ಸಂಬಂಧಿ ಚಟುವಟಿಕೆಗಳ ಯಶಸ್ಸಿಗೆ ಸರ್ಕಾರದಿಂದ ಎಲ್ಲಾ ನೆರವು ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನಕ್ಕೆ ನಾನು ಮತ್ತು ಸಂಸದರು ಕಾರ್ಯನಿರ್ವಾಹಣೆ ಮಾಡಲಾಗುವುದು. ಸಂಬಂಧಪಟ್ಟ ಇಲಾಖೆಗಳು ಮತ್ತು ವಿಷಯಗಳಲ್ಲಿ ಪರಿಣಿತಿ ಹೊಂದಿದ ತಜ್ಞರು, ಉತ್ತಮ ಯೋಜನೆಯ ಮೂಲಕ ಜಿಲ್ಲೆಯಲ್ಲಿ ಲಾಭದಾಯಕ ಕೃಷಿ ಹಾಗೂ ಸಂಬಂಧಿಸಿದ ಕೃಷಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಂಡ್ವೆ ರಾಹುಲ್ ತುಕಾರಂ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ. ಹನುಮಂತಪ್ಪ ಸೇರಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಪ್ರಗತಿ ಪರ ರೈತರು ಇದ್ದರು.ಹಿಂದುಳಿದ ಹಣೆಪಟ್ಟಿ ಅಳಿಸಲು ದೂರದೃಷ್ಟಿ ಯೋಜನೆ ಅಗತ್ಯ: ಸಂಸದ
ಸಂಸದ ಜಿ.ಕುಮಾರ್ ನಾಯಕ ಮಾತನಾಡಿ, ಯೋಜನೆಗೆ ಸಂಬಂಧಿಸಿ ಅತ್ಯಂತ ನಿಖರ ಮತ್ತು ಅನುಷ್ಠಾನ ಪ್ರಾಯೋಗಿಕ ಸಲಹೆ ಸೂಚನೆಗಳನ್ನು ನೀಡುವಂತೆ ಕೇಳಿದರು. ಜೇನು ಅಭಿವೃದ್ಧಿ ಸೇರಿದಂತೆ ಇತರ ಕೃಷಿ ಸಂಬಂಧಿತ ಚಟುವಟಿಕೆ ಯಾವ ರೀತಿಯಲ್ಲಿ ಮಾಡಬೇಕು. ಇದಕ್ಕಿರುವ ಅನುಕೂಲತೆ ಹಾಗೂ ಸರ್ಕಾರದಿಂದ ಅಗತ್ಯತೆಯ ಬಗ್ಗೆ ಸಮಾಜದಲ್ಲಿ ಸಮಗ್ರ ಮಾಹಿತಿ ನೀಡುವಂತೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಕೋರಿದ ಅವರು ಈ ಮೂಲಕ ಜಿಲ್ಲೆಯ ಹಿಂದುಳಿದ ಹಣೆಪಟ್ಟಿ ಅಳಿಸಲು ದೂರದೃಷ್ಟಿ ಯೋಜನೆ ಅಗತ್ಯವೆಂದರು.