ವಾಣಿಜ್ಯ ಬೆಳೆ ಬೆಳೆಯಲು ರೈತರು ಆದ್ಯತೆ ನೀಡಬೇಕು: ಕೆ.ಎಂ.ಉದಯ್

| Published : Feb 28 2025, 12:46 AM IST

ಸಾರಾಂಶ

ರೈತರು ಕೇವಲ ಕಬ್ಬು, ಭತ್ತ ಬೆಳಗೆ ಜೊತು ಬಿದ್ದು ಮಳೆ ಕೊರತೆಯಾದಾಗ ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಕೃಷಿಕರು ಹೈನುಗಾರಿಕೆ ಜೊತೆಗೆ ತೋಟಗಾರಿಕೆ ಬೆಳೆಗಳಿಗೂ ಹೆಚ್ಚಿನ ಆಸಕ್ತಿ ವಹಿಸಬೇಕು. ಇದರಿಂದ ಅಲ್ಪ ಪ್ರಮಾಣದಲ್ಲಿ ಆರ್ಥಿಕವಾಗಿ ಸಬಲರಾಗುವ ಜೊತೆಗೆ ಕುಟುಂಬ ನಿರ್ವಹಣೆಗೆ ಕಿಂತಾದರೂ ಸಹಕಾರವಾಗುತ್ತದೆ.

ಕನ್ನಡಪ್ರಭ ವಾರ್ತೆ ಮದ್ದೂರು

ರೈತರು ವಾಣಿಜ್ಯ ಬೆಳೆ ಬೆಳೆಯಲು ಹೆಚ್ಚಿನ ಆದ್ಯತೆ ನೀಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಪಟ್ಟಣದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಪ್ರಸಕ್ತ ಸಾಲಿನ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿ ರೈತರಿಗೆ ತರಕಾರಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ರೈತರು ಕೇವಲ ಕಬ್ಬು, ಭತ್ತ ಬೆಳಗೆ ಜೊತು ಬಿದ್ದು ಮಳೆ ಕೊರತೆಯಾದಾಗ ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಕೃಷಿಕರು ಹೈನುಗಾರಿಕೆ ಜೊತೆಗೆ ತೋಟಗಾರಿಕೆ ಬೆಳೆಗಳಿಗೂ ಹೆಚ್ಚಿನ ಆಸಕ್ತಿ ವಹಿಸಬೇಕು. ಇದರಿಂದ ಅಲ್ಪ ಪ್ರಮಾಣದಲ್ಲಿ ಆರ್ಥಿಕವಾಗಿ ಸಬಲರಾಗುವ ಜೊತೆಗೆ ಕುಟುಂಬ ನಿರ್ವಹಣೆಗೆ ಕಿಂತಾದರೂ ಸಹಕಾರವಾಗುತ್ತದೆ ಎಂದರು.

ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರಿಗೆ ಇಲಾಖೆ ಯೋಜನೆಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು. ಅಗತ್ಯ ಬಿತ್ತನೆ ಬೀಜ, ಕೀಟನಾಶಕ ವಿತರಣೆ, ತೋಟಗಾರಿಕೆ ಪರಿಕರಗಳನ್ನು ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಸೂಚನೆ ನೀಡಿದರು.

ಈ ವೇಳೆ ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಭಾರತಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಕೆ.ಎಂ., ರೇಖಾ, ತೋಟಗಾರಿಕೆ ಅಧಿಕಾರಿಗಳಾದ ಸಂಪತ್ ಕುಮಾರ್, ಶಿವಪ್ರಸಾದ್, ಸಹಾಯಕರಾದ ಪದ್ಮ, ದಿವ್ಯ, ನಿತಿನ್ ಮತ್ತಿತರರು ಇದ್ದರು.

ವಿದ್ಯುತ್ ಏಕಮುಖ ಮಾರ್ಗಕ್ಕೆ ಚಾಲನೆ, ಎಚ್ಚರ ವಹಿಸಲು ಸೂಚನೆ

ಕೆ.ಆರ್ ಪೇಟೆ: ತಾಲೂಕಿನ ಬೀರುವಳ್ಳಿಯಲ್ಲಿ ಉದ್ದೇಶಿತ 1x8 ಎಂವಿಎ, , 66/11 ಕೆ.ವಿ. ವಿದ್ಯುತ್ ಉಪ-ಕೇಂದ್ರಕ್ಕೆ ಇರುವ 66 ಕೆ.ವಿ. ದೊಡ್ದಹಳ್ಳಿ ಉಪ ಕೇಂದ್ರದಿಂದ ಉದ್ದೇಶಿತ ಸುಮಾರು 8.322 ಕಿ.ಮೀ. ವಿದ್ಯುತ್ ಏಕಮುಖ ಮಾರ್ಗವನ್ನು ಫೆ. 27 ರಂದು ಅಥವಾ ನಂತರ ಯಾವುದೇ ದಿನದಂದು ಚಾಲನೆಗೊಳಿಸಲಾಗುವುದು.(ವಿದ್ಯುತ್ ಹರಿಸಲಾಗುವುದು). 66 ಕೆ.ವಿ. ದೊಡ್ದಹಳ್ಳಿ ಉಪ ಕೇಂದ್ರದಿಂದ ಸಂಪರ್ಕಗೊಂಡು ದೊಡ್ಡಹಳ್ಳಿ, ಹಂಗರ ಮುದ್ದನಹಳ್ಳಿ, ಬೀಕನಹಳ್ಳಿ, ಚೌಡಸಮುದ್ರ, ಮಂಚಿಬೀಡು, ಮತ್ತು ಬೀರುವಳ್ಳಿ ಗ್ರಾಮಗಳ ಎಲ್ಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ 66/11 ಬೀರುವಳ್ಳಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ಪ್ರವಹಿಸಲಾಗುವುದು.

ಆದ್ದರಿಂದ ಸಾರ್ವಜನಿಕರು ಗೋಪುರಗಳಿಗೆ ದನಕರುಗಳನ್ನು ಕಟ್ಟುವುದಾಗಲೀ, ಲೋಹದ ಪಟ್ಟಿಯನ್ನು ತೆಗೆಯುವುದಾಗಲೀ, ಗೋಪುರಗಳನ್ನು ಹತ್ತುವುದಾಗಲಿ, ತಂತಿಗಳನ್ನು ಮುಟ್ಟುವುದಾಗಲಿ, ಗೋಪುರಗಳ ಕೆಳಗಡೆ ಮರಗಿಡಗಳನ್ನು ನೆಡುವುದಾಗಲೀ, ಗೋಪುರಗಳಿಗೆ ಬಳ್ಳಿ ಮತ್ತು ಹಗ್ಗ ಮುಂತಾದುವುಗಳನ್ನು ಎಸೆಯುವುದಾಗಲೀ, ಗಾಳಿಪಟವನ್ನು ಗೋಪುರದ ಹತ್ತಿರ ಹಾರಿಸುವುದಾಗಲೀ ಮಾಡುವುದು ತುಂಬಾ ಅಪಾಯಕಾರಿಯಾಗಿ ಹಾಗೂ ಪ್ರಾಣಹಾನಿ ಉಂಟಾಗುವ ಸಂಭವವಿದೆ.

ಸೂಚನೆ ಉಲ್ಲಂಘಿಸಿದಲ್ಲಿ ಉಂಟಾಗುವ ಯಾವುದೇ ತರಹದ ಅಪಘಾತ ಅಥವಾ ಪ್ರಾಣಹಾನಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಜವಾಬ್ದಾರರಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.