ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ರೈತರು ಬೆಳೆದ ಬೆಳೆಗಳನ್ನು ಸ್ಥಳೀಯ ಮಟ್ಟದಲ್ಲೇ ಮಾರಾಟ ವ್ಯವಸ್ಥೆ ಕಲ್ಪಿಸಿಕೊಂಡು ಉತ್ಪನ್ನಗಳಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಕೆಲಸ ಪ್ರಾರಂಭಿಸಿದಾಗ ಅರ್ಥಿಕವಾಗಿ ಸದೃಢರಾಗಬಹುದು ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಜಾಗೃತ ಕರ್ನಾಟಕ ವತಿಯಿಂದ ನಡೆದ ಕೃಷಿ ಮತ್ತು ಗ್ರಾಮೀಣ ಭಾಗಗಳು ಎಲ್ಲಾ ರೀತಿಯಲ್ಲಿಯೂ ನಗಣ್ಯವಾಗುತ್ತಿರುವಾಗ ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂಬ ವಿಚಾರಗೋಷ್ಠಿಯಲ್ಲಿ ಗ್ರಾಮ ಮತ್ತು ಕೃಷಿ ಪ್ರಧಾನವಾದ ಮಂಡ್ಯದ ಅಭಿವೃದ್ಧಿಗೆ ಹೊಸ ದಾರಿಗಳು ಎಂಬ ವಿಚಾರವಾಗಿ ಮಾತನಾಡಿದರು.
ರೈತರಿಗೆ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸುವುದು ಹಾಗೂ ಬೆಂಬಲ ಬೆಲೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ನಾವು ಬೆಳೆದ ಬೆಳೆಗಳಿಗೆ ನಾವೇ ಮಾರುಕಟ್ಟೆ ಸೃಷ್ಟಿ ಮಾಡಿಕೊಳ್ಳುವ ಕೆಲಸವನ್ನು ಮಾಡಬೇಕಿದೆ ತಿಳಿವಳಿಕೆ ನೀಡಿದರು.ಕೃಷಿ ಪ್ರಧಾನ ಜಿಲ್ಲೆ ಮಂಡ್ಯದ ಮಕ್ಕಳೆಲ್ಲ ತಮ್ಮ ಊರುಗಳಿಗೆ ಬಂದು ಕೃಷಿಯನ್ನು ಆರಂಭಿಸಬೇಕು. ಕೃಷಿಯನ್ನು ಉಳಿಸಿ ಬೆಳೆಸಬೇಕು ಎಂದರೆ ಮೊದಲು ನಮ್ಮ ಭೂಮಿ ಫಲವತ್ತತೆಯನ್ನು ಅರ್ಥ ಮಾಡಿಕೊಳ್ಳಬೇಕು. ಬೆಳೆ ಬೆಳೆಯುವ ಪದ್ಧತಿ ಬದಲಾಗಬೇಕು. ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳುವುದನ್ನು ಕಲಿಯಬೇಕು ಎಂದರು.
ಹವಾಮಾನ ಬದಲಾವಣೆಯಿಂದ ಅತಿವೃಷ್ಟಿ, ಅನಾವೃಷ್ಟಿಗೆ ನಿಜವಾಗಿ ತೊಂದರೆಗೆ ಒಳಗಾಗುತ್ತಿರುವವರು ರೈತರು ಮಾತ್ರ. ಸಮಸ್ಯೆಗಳಿಗೆ ಸವಾಲೊಡ್ಡುವ ಕೆಲಸ ರೈತರಿಂದ ಆಗಬೇಕು. ಕೃಷಿಯನ್ನು ಕಸುಬು ಎಂದು ಮಾಡುತ್ತಿರುವ ರೈತರು ಇಂದು ಸಂಕಷ್ಟದಲ್ಲಿದ್ದಾರೆ. ದುಡ್ಡು ಮಾಡುವ ಉದ್ದೇಶದಿಂದ ಕೃಷಿ ಮಾಡುತ್ತಿರುವವರು ಸ್ಥಿತಿಯೇ ಬೇರೆಯೇ ರೀತಿ ಇದೆ. ರೈತರು ಜಾತಿ ಧರ್ಮವನ್ನು ಮರೆತು ಒಗ್ಗಟ್ಟಾಗಿ ರಾಜಕೀಯವಾಗಿ ಪ್ರಜ್ಞಾವಂತರಾಗಿ ಮುನ್ನೆಲೆಗೆ ಬರಬೇಕೆಂದರು.ಜಾಗೃತ ಕರ್ನಾಟಕದ ರಾಜ್ಯ ಸಂಚಾಲಕ ಡಾ.ಎಚ್.ವಿ.ವಾಸು ಮಾತನಾಡಿ, 20ನೇ ಶತಮಾನದಲ್ಲಿದ್ದ ಸಂಘಟನೆ, ಚಳವಳಿ ಹಾಗೂ ಹೋರಾಟದ ಸ್ವರೂಪ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿದೆ. ದೆಹಲಿಯಲ್ಲಿ ರೈತರು ಕೃಷಿ ಕಾಯ್ದೆಗಳ ವಿರುದ್ಧವಾಗಿ ನಡೆಸಿದ ಹೋರಾಟದ ರೀತಿಯಲ್ಲಿ ರೈತರ ಪರವಾಗಿ ಹೋರಾಟಗಳು ಸಜ್ಜುಗೊಳ್ಳಬೇಕಿದೆ ಎಂದರು.
ರಾಜಕೀಯ ಅಧಿಕಾರ ಎಂಬುದು ಮೇಲ್ನೋಟಕ್ಕೆ ಸಾಮಾಜಿಕ ಕಳಕಳಿ ಇರುವಂತೆ ಕಂಡರೂ ಕೂಡ ವ್ಯವಹಾರಿಕ ಹಾಗೂ ವೈಯಕ್ತಿಕ ಹಿತಾಸಕ್ತಿಯ ಹಿನ್ನಲೆಯಿಂದಲೇ ನಡೆದುಕೊಂಡು ಬರಲಾಗುತ್ತಿದೆ. ಜನರು ಜಾಗೃತರಾಗಿ ಹೊಸ ರಾಜಕೀಯ ಸ್ವರೂಪದ ಸಂಘಟನೆಗಳ ಪಾಲ್ಗೊಳ್ಳುವಿಕೆಯನ್ನು ವಿಭಿನ್ನವಾಗಿ ಮಾಡಬೇಕಿದೆ ಎಂದರು.ಜಾತಿ ವೈರುಧ್ಯ, ಕೋಮು ಸಂಬಂಧಿತ ವಿಚಾರಗಳನ್ನು ಜನರ ಮೇಲೇರಿ ಅಧಿಕಾರ ಪಡೆಯುವ ಕೆಲಸ ಮಾಡುತ್ತಿರುವ ಆರ್ ಎಸ್ ಎಸ್ ಮತ್ತು ಬಿಜೆಪಿಯನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿಡುವ ಕೆಲಸವನ್ನು ಪ್ರಸ್ತುತ ನಾವೆಲ್ಲರೂ ಜಾಗೃತರಾಗಿ ಮಾಡಬೇಕಿದೆ ಎಂದರು.
ರೈತ ಮಹಿಳೆ ಕಿರಣಪಾಲ್ತಾಡಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಭೂಮಿ ಸತ್ವ ಕಡಿಮೆಯಾಗಿ, ಹವಾಮಾನ ವೈಪರೀತ್ಯ ಹೆಚ್ಚಾಗುತ್ತಿವೆ. ರೈತರು ಸಹಜ ಬೇಸಾಯಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಘನಿಖಾನ್, ಜಾಗೃತ ಕರ್ನಾಟಕದ ನಾಗೇಶ್, ಜಗದೀಶ್, ಸಂತೋಷ್ ಸೇರಿದಂತೆ ಇತರರು ಇದ್ದರು.