Farmers should take care to ensure that water is not wasted.

-ಸಂಸದ ರಾಘವೇಂದ್ರ ಸಲಹೆ। ಗಾಳಿ ಆಂಜನೇಯ ಸ್ವಾಮಿ ದೇಗುಲದ ಬನ್ನಿ ಮಂಟಪದಲ್ಲಿ ದಸರಾ ಉತ್ಸವಕನ್ನಡಪ್ರಭ ವಾರ್ತೆ ಶಿಕಾರಿಪುರ

ಬರದ ತೀವ್ರತೆಯಿಂದಾಗಿ ರೈತ ಸಂಕಷ್ಟ ಎದುರಿಸುತ್ತಿದ್ದು, ನೂರಾರು ಕೋಟಿ ವೆಚ್ಚದ ಏತ ನೀರಾವರಿ ಯೋಜನೆಯ ಪ್ರಯೋಜನ ಪ್ರತಿಯೊಬ್ಬರಿಗೂ ದೊರೆಯಬೇಕು. ಈ ದಿಸೆಯಲ್ಲಿ ರೈತರು ನೀರು ಪೋಲಾಗದಂತೆ ಜಾಗ್ರತೆಯಿಂದ ಬಳಸಿಕೊಳ್ಳುವಂತೆ ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.

ತಾಲೂಕು ಆಡಳಿತ ಮತ್ತು ಗ್ರಾ.ಪಂ ಬೇಗೂರು ಹಾಗೂ ವಿವಿಧ ದೇವಸ್ಥಾನ ಉಸ್ತುವಾರಿ ಸಮಿತಿಯಿಂದ ತಾಲೂಕಿನ ಬೇಗೂರು ಮರಡಿ ತಾಂಡಾದಲ್ಲಿನ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದ ಬನ್ನಿ ಮಂಟಪದಲ್ಲಿ ದಸರಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ನಾಡ ಹಬ್ಬ ದಸರಾ ಪ್ರಸಿದ್ಧ, ಅಸುರ ಮಹಿಷಾಸುರನನ್ನು ದೇವಿ ಚಾಮುಂಡೇಶ್ವರಿ ಸತತ 10 ದಿನ ಸುದೀರ್ಘ ಹೋರಾಟದ ಮೂಲಕ ಮರ್ಧಿಸಿದ ವಿಜಯದ ದಿನ ಎಂದರು.

ಶ್ರೀರಾಮಚಂದ್ರ ವನವಾಸದಿಂದ ಅಯೋಧ್ಯೆಗೆ ವಾಪಸಾಗಿದ್ದು ಹಾಗೂ ವಿಜಯನಗರದಲ್ಲಿ ಹಿಂದೂ ಸಾಮ್ರಾಜ್ಯಕ್ಕೆ ಸಂಕಲ್ಪದ ಅತ್ಯಂತ ಶುಭ ಸಂದರ್ಭ ಎಂದು ತಿಳಿಸಿದರು.

ಪ್ರಸ್ತುತ ಎಲ್ ನಿನೋ ಪರಿಣಾಮದಿಂದ ಕಳೆದ 75 ವರ್ಷಗಳಿಂದ ಕಂಡರಿಯದ ಭೀಕರ ಬರಗಾಲ ದೇಶ ಎದುರಿಸುತ್ತಿದೆ ಎಂದ ಅವರು ಮಳೆಗಾಲ, ಚಳಿಗಾಲವಿಲ್ಲದೆ ವಿಪರೀತ ಬೇಸಿಗೆಯಿಂದ ಜಾಗತಿಕ ತಾಪಮಾನ 3.5 ಡಿಗ್ರಿ ಹೆಚ್ಚಾಗಿ ಆರೋಗ್ಯಕ್ಕೆ ದುಷ್ಪರಿಣಾಮ ಬೀರುತ್ತಿದೆ. ಸತತ 2 ವರ್ಷ ಇಂತಹ ಭೀಕರ ದುಸ್ಥಿತಿಯನ್ನು ಎದುರಿಸಬೇಕಾದ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡಿದ್ದಾರೆ ಎಂದರು.

ಭೀಕರ ಬರಗಾಲದಿಂದ ರೈತ ಸಮುದಾಯ ತೀವ್ರ ಸಂಕಷ್ಟ ಎದುರಿಸಬೇಕಾಗಿದೆ ಎಂದ ಅವರು ಭೂಮಿಯ ಆರೋಗ್ಯ ಹಾಳಾಗುತ್ತಿದ್ದು ಮೆಕ್ಕೆಜೋಳ ಸಹಿತ ಫಸಲು ನಾಶವಾಗುತ್ತಿದೆ. ಏತ ನೀರಾವರಿ ಯೋಜನೆಯ ಪೈಪ್ ಲೈನ್ ಹಾಳಾಗದಂತೆ ಮೇಲ್ಭಾಗದ ರೈತರು ಬೇಕಾಬಿಟ್ಟಿ ನೀರು ಹಾಯಿಸಿ ಉಳಿದವರಿಗೆ ತೊಂದರೆಯಾಗದಂತೆ ತಾಲೂಕಿನ ಆಸ್ತಿಯನ್ನು ಕಾಪಾಡಿ ಎಂದು ಅವರು ಮನವಿ ಮಾಡಿದರು.

ದೊಡ್ಡ ರ್‍ಯಾಂಪ್‌ ನಿರ್ಮಾಣ:

ಮುಂದಿನ ದಸರಾದಲ್ಲಿ ದೊಡ್ಡ ರ್‍ಯಾಂಪ್‌ ನಿರ್ಮಿಸಿ ಪಟಾಕಿ ಸಿಡಿಸಿ ತಡರಾತ್ರಿ ವರೆಗೆ ಜನತೆ ಸ್ಥಳದಲ್ಲಿದ್ದು ಸಂಭ್ರಮಿಸುವ ರೀತಿ ವಾತಾವರಣ ನಿರ್ಮಿಸಲಾಗುವುದು ಎಂದು ತಿಳಿಸಿದರು.

ತಾ.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜಗೌಡ ಮಾತನಾಡಿ, ಭೀಕರ ಬರದಿಂದ ಅಂತರ್ಜಲ ಮಟ್ಟ ಕುಸಿದಿದ್ದು ತೋಟ, ಜಮೀನು ರಕ್ಷಣೆಗೆ ರೈತರು ಹರಸಾಹಸ ಪಡುತ್ತಿದ್ದಾರೆ. ಜನಜಾನುವಾರುಗಳಿಗೆ ನೀರಿನ ಅಭಾವ ತಲೆದೋರುತ್ತಿದೆ. ನಿತ್ಯ 10-12 ಟ್ರಾನ್ಸ್ ಫಾರ್ಮರ್ ಹಾಳಾಗುತ್ತಿದೆ ಎಂದರು.

ತಾಯಿ ಚಾಮುಂಡೇಶ್ವರಿ ಪ್ರತಿಯೊಬ್ಬರಿಗೂ ನೆಮ್ಮದಿ ಜೀವನ ಕರುಣಿಸಲಿ ಎಂದು ಪ್ರಾರ್ಥಿಸಿದರು. ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಮಾತ್ರ ಆದ್ಯತೆ ನೀಡುತ್ತಿದ್ದು, ಗುರುಹಿರಿಯರನ್ನು ಗೌರವಿಸುವ ಸಂಸ್ಕಾರ ಸಂಪ್ರದಾಯ ಪಾಲಿಸುವ ಬಗ್ಗೆ ತಿಳಿಹೇಳಬೇಕಾಗಿದೆ ಎಂದರು.

ತಹಸೀಲ್ದಾರ್ ವಾಣಿ ಅಂಬುಚ್ಚೇಧಗೊಳಿಸಿ ದಸರಾ ಬನ್ನಿ ಮುಡಿವ ಕಾರ್ಯಕ್ಕೆ ಚಾಲನೆ ನೀಡಿದರು. ರಾಜ್ಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ನಗರದ ಮಹಾದೇವಪ್ಪ, ಆರಾಧನಾ ಸಮಿತಿ ಸದಸ್ಯೆ ವೀಣಾ ಮಾತನಾಡಿದರು.

ವೇದಿಕೆಯಲ್ಲಿ ವಿವಿಧ ದೇವಸ್ಥಾನ ಸಮಿತಿ ಅಧ್ಯಕ್ಷ ವೀರೇಶ್, ನಗರದ ಅಶೋಕಣ್ಣ, ಚಾರಗಲ್ಲಿ ಪರಶುರಾಮ, ಹಳ್ಳೆಣ್ಣೆ ಗಿಡ್ಡಪ್ಪ, ಕೃಷ್ಣೋಜಿರಾವ್, ಸುಧೀರರಾವ್, ಭೀಮರಾವ್, ನಾಗಪ್ಪ, ಲಕ್ಷ್ಮಣರಾವ್ ಇದ್ದರು.

ಫೋಟೋ

ಶಿಕಾರಿಪುರದ ಬೇಗೂರು ಮರಡಿ ತಾಂಡಾದಲ್ಲಿನ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬನ್ನಿ ಮಂಟಪದಲ್ಲಿ ದಸರಾ ಉತ್ಸವಕ್ಕೆ ಸಂಸದ ರಾಘವೇಂದ್ರ ಚಾಲನೆ ನೀಡಿದರು.