ಸಾರಾಂಶ
ಕಾರಟಗಿ: ರೈತರಿಂದ ಬತ್ತ ಖರೀದಿಸಿ ಮೂರು ವರ್ಷಗಳಿಂದ ಹಣ ನೀಡದೆ ಸತಾಯಿಸುತ್ತಿದ್ದ ದಲಾಲಿ ವರ್ತಕನ ಮನೆ ಮುಂದೆ ನೊಂದ ರೈತರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ.
ಇಲ್ಲಿನ ಪನ್ನಾಪುರ ರಸ್ತೆಯಲ್ಲಿನ ವರ್ತಕ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತ ರಾಜುಗೌಡ ಚಂದ್ರಶೇಖರಗೌಡರ ಮನೆಯ ಮುಂದೆ ಶುಕ್ರವಾರ ಬೆಳಗ್ಗೆ ನೊಂದ ರೈತರು ₹೧೩ ಲಕ್ಷ ಹಣ ಪಾವತಿಸುವಂತೆ ಒತ್ತಾಯಿಸಿ, ಹಲಗೆ ಬಾರಿಸಿ ಒತ್ತಾಯಿಸಿದರು.ರಾಜುಗೌಡ ಮೂರು ವರ್ಷಗಳ ಹಿಂದೆ ಸಿಂಧನೂರು ತಾಲೂಕಿನ ಏಳು ಮೈಲು ಕ್ಯಾಂಪಿನ ರೈತ ಮಹಿಳೆ ಶಿವಮ್ಮ ಪೂಜಾರಿ ಸೇರಿದಂತೆ ಮೂವರು ರೈತರ ಬಳಿ ಒಟ್ಟು ೧೩೧೦ ಚೀಲ ಬತ್ತ ಖರೀದಿಸಿದ್ದರು. ಅದರ ಒಟ್ಟು ಮೊತ್ತ ₹೧೩ ಲಕ್ಷಗಳನ್ನು ವರ್ತಕ ರೈತರಿಗೆ ಪಾವತಿಸಬೇಕಾಗಿತ್ತು. ಆದರೆ ಇಲ್ಲಿಯವರೆಗೂ ರೈತರಿಗೆ ಪಾವತಿಸಿಲ್ಲ. ಹೀಗಾಗಿ ಆಕ್ರೋಶಗೊಂಡ ರೈತರು ವರ್ತಕನ ವಿರುದ್ಧ ಸಿಡಿದೆದ್ದಿದ್ದಾರೆ.
ಈ ವೇಳೆ ಮಾತನಾಡಿದ ಶಿವಮ್ಮ ಪೂಜಾರಿ ಮತ್ತು ನಾಗರಾಜ್ ಹಂಚಿನಾಳ ಅವರು, ವರ್ತಕ ರಾಜುಗೌಡ ಬತ್ತ ಖರೀಸಿದ ಸುಮಾರು ₹೧೩ ಲಕ್ಷ ಹಣ ನೀಡಬೇಕು. ನನ್ನ ಬಳಿ ಹಣವಿಲ್ಲ, ನನಗೆ ಬಿಜೆಪಿ, ಆರ್‌ಎಸ್‌ಎಸ್ ಪ್ರಭಾವಿಗಳ ಸಂಪರ್ಕವಿದೆ, ನನ್ನನ್ನೂ ಏನೂ ಮಾಡಿಕೊಳ್ಳಲು ಆಗದು, ಯಾರಿಗೆ ಬೇಕಾದರೂ ಹೇಳಿ ಎಂದು ಧಮ್ಕಿ ಹಾಕುತ್ತಿದ್ದಾನೆ ಎಂದು ಆರೋಪಿಸಿದರು.ಇಂಥ ಪ್ರಭಾವಿಗಳು ರೈತರನ್ನು ವಂಚಿಸಿದರೆ ರೈತರು ಎಲ್ಲಿಗೆ ಹೋಗಬೇಕು? ನಮಗೆ ಯಾರು ನ್ಯಾಯ ಕೊಡುತ್ತಾರೆ ಎಂದು ಹೇಳುತ್ತ ಶಿವಮ್ಮ ಪೂಜಾರಿ ಕಣ್ಣೀರಿಟ್ಟರು.
ರಾಜುಗೌಡ ಕುಟುಂಬದವರು ಈ ಹಿಂದೆ ಮಾನವಿ, ಸಿಂಧನೂರಿನಲ್ಲಿ ಬತ್ತ ಖರೀದಿಸಿ ಅನೇಕ ರೈತರಿಗೆ ವಂಚಿಸಿದ್ದಾರೆ. ಅದು ಅಲ್ಲದೇ ಕಾರಟಗಿ ಮಾರುಕಟ್ಟೆಯಲ್ಲಿ ಕೆಲವು ವರ್ತಕರು ಪ್ರತಿವರ್ಷ ರೈತರಿಗೆ ಹೀಗೆ ಹಣ ಪಾವತಿಸದೆ ವಂಚಿಸುವುದು ಮಾಮೂಲು ಆಗಿದೆ. ಇಂತಹ ಸಮಸ್ಯೆಗೆ ಕೊನೆ ಹಾಡುವ ಉದ್ದೇಶದಿಂದ ರೈತರೆಲ್ಲ ಸೇರಿ ವರ್ತಕರ ಮನೆ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದೇವೆ ಎಂದು ರೈತರು ಹೇಳಿದರು.ಹಣ ನೀಡುವ ವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಹಾಸಿಗೆ, ಅಡುಗೆ ಸರಂಜಾಮು ಜತೆ ಆಗಮಿಸಿದ್ದಾರೆ. ಹನುಮೇಶ ಪೂಜಾರಿ, ಶ್ಯಾಮಣ್ಣ ಪೂಜಾರಿ, ನಿಂಗಪ್ಪ ಹಂಚಿನಾಳ, ನಿಂತಪ್ಪ ಮೆತ್ತಿನಾಳ, ಸಂಜೀವಕುಮಾರ್ ಮತ್ತು ಶ್ಯಾವಮ್ಮ ಧರಣಿಯಲ್ಲಿದ್ದಾರೆ. ರೈತರು ಧರಣಿ ನಡೆಸಲು ತಮ್ಮ ಮನೆಗೆ ಬರುತ್ತಿರುವ ಸುದ್ದಿ ತಿಳಿದ ವರ್ತಕನ ಕುಟುಂಬದ ಸದಸ್ಯರು ಮನೆಗೆ ಬೀಗ ಹಾಕಿ ಜಾಗ ಖಾಲಿ ಮಾಡಿದ್ದಾರೆ.
ಪ್ರಕರಣ: ರಾಜುಗೌಡ ಮೂರು ವರ್ಷಗಳ ಹಿಂದೆ ರೈತರಿಂದ ಸುಮಾರು ₹೧೩ ಲಕ್ಷ ಮೌಲ್ಯದ ಬತ್ತ ಖರೀದಿಸಿದ್ದರು. ಹಣ ನೀಡದೆ ಸತಾಯಿಸುತ್ತಿದ್ದರು. ನೊಂದ ರೈತರು ಮೇ 19ರಂದು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮೇ 21ರಂದು ಠಾಣೆಯ ಮುಂದೆ ರೈತ ಸಂಘಟನೆ ಆಶ್ರಯದಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಮಣಿದ ಪೊಲೀಸರು ರಾಜುಗೌಡ ಅವರನ್ನು ಬಂಧಿಸಿ, ಪ್ರಕರಣ ದಾಖಲಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಮೂರು ದಿನಗಳ ಬಳಿಕ ರಾಜುಗೌಡ ಜಾಮೀನು ಮೇಲೆ ಬಿಡುಗಡೆಯಾಗಿದ್ದು, ರೈತರು ವರ್ತಕನ ಮನೆಯ ಮುಂದೆ ಶುಕ್ರವಾರ ಧರಣಿ ಆರಂಭಿಸಿದ್ದಾರೆ.