ರಾಮನಗರದಲ್ಲಿ ಸಾಧಾರಣ ಮಳೆ: ರೈತರ ಮೊಗದಲ್ಲಿ ಮಂದಹಾಸ

| Published : Aug 02 2024, 12:47 AM IST

ಸಾರಾಂಶ

ಮಳೆ ಕೊರತೆಯಿಂದಾಗಿ ಕಳೆದ ವರ್ಷ ರಾಮನಗರ ಜಿಲ್ಲೆಯ 5 ತಾಲೂಕುಗಳಲ್ಲಿ ಬರ ಆವರಿಸಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆ - ರೇಷ್ಮೆನಗರಿಯಲ್ಲಿ ಬಿತ್ತನೆಗೆ ಭೂಮಿ ಸಿದ್ಧತೆ, ಬಿತ್ತನೆ ಕಾರ್ಯ ಪ್ರಗತಿಯಲ್ಲಿ

- ವಾಡಿಕೆ ಮಳೆ 333 ಮಿ.ಮೀ ಪೈಕಿ ವಾಸ್ತವ 339 ಮಿ.ಮೀ ಮಳೆಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಮಳೆ ಕೊರತೆಯಿಂದಾಗಿ ಕಳೆದ ವರ್ಷ ಜಿಲ್ಲೆಯ 5 ತಾಲೂಕುಗಳಲ್ಲಿ ಬರ ಆವರಿಸಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಕಳೆದ 15 ದಿನಗಳಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ವಾಡಿಕೆ ಪ್ರಮಾಣವನ್ನು ತಲುಪಿದೆ. ಭೂಮಿಯಲ್ಲಿ ತೇವಾಂಶ ಇರುವುದರಿಂದ ಕೃಷಿ ಚಟುವಚಿಕೆ ಕಾರ್ಯ ಚುರುಕು ಪಡೆಯಲಿದೆ.

ಜಿಲ್ಲೆಯಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳ ಮೊದಲ ಎರಡು ವಾರಗಳಲ್ಲಿ ರೈತರು ಬಿತ್ತನೆ ಕಾರ್ಯ ನಡೆಸುತ್ತಾರೆ. ಕಳೆದ ವರ್ಷ ಮಳೆ ಕೊರತೆಯಿಂದಾಗಿ ನಿಗಧಿ ಪಡಿಸಿದ ಆಹಾರ ಧಾನ್ಯಗಳು ಬೆಳೆಯಲು ರೈತರಲು ಸಾಕಷ್ಟು ಕಷ್ಟ ಪಟ್ಟಿದ್ದರು. ಹಾಗಾಗಿ ರಾಜ್ಯ ಸರ್ಕಾರ ಜಿಲ್ಲೆಯ ಮೂರು ತಾಲೂಕುಗಳನ್ನು ತೀವ್ರ ಬರ ಪೀಡತ, ಉಳಿದ ಎರಡು ತಾಲೂಕುಗಳನ್ನು ಭಾಗಶಃ ಬರಪಿಡಿತವೆಂದು ಘೋಷಣೆ ಮಾಡಿತ್ತು. ಜತೆಗೆ, ಈ ವರ್ಷದ ಮಳೆಗಾಲದ ಆರಂಭದಲ್ಲಿ ಮಳೆ ಬೀಳದೆ ಮತ್ತೊಂದು ಸುತ್ತಿನ ಬರಗಾಲದತ್ತ ಜಿಲ್ಲೆ ದಾಪುಗಾಲು ಇಟ್ಟಿತ್ತು. ಆದರೆ, ಜೂನ್ ಅಂತ್ಯದಲ್ಲಿ ಮತ್ತು ಜುಲೈ ತಿಂಗಳ ಕೊನೆಯಲ್ಲಿ ಉತ್ತಮ ಮಳೆಯಾಗುತ್ತಿದೆ.

ಕೊರತೆ ನೀಗಿಸಿದ ಸಾಧಾರಣ ಮಳೆ:

ಜೂನ್ ತಿಂಗಳಲ್ಲಿ ವಾಡಿಕೆ 70 ಮಿ.ಮೀ ಪೈಕಿ 100 ಮಿ.ಮೀ ನಷ್ಟು ಮಳೆಯಾಗಿತ್ತು. ಆದರೆ, ಜುಲೈ ತಿಂಗಳಲ್ಲಿ ವಾಡಿಕೆ 83 ಮಿ.ಮೀ ಪೈಕಿ 82 ಮಿ.ಮೀನಷ್ಟು ಮಳೆ ಕೊರತೆ ಆಗಿತ್ತು.

ಜಿಲ್ಲೆಯಲ್ಲಿ ಜನವರಿ 1 ರಿಂದ ಆಗಸ್ಟ್ 1ರವರೆಗೆ 333 ಮಿ.ಮೀಟರ್ ವಾಡಿಕೆ ಮಳೆಗೆ 339 ಮಿ.ಮೀಟರ್ ವಾಸ್ತವ ಮಳೆಯಾಗಿದೆ. ಆ ಮೂಲಕ ಜಿಲ್ಲೆಯಲ್ಲಿ ಶೇ.2ರಷ್ಟು ಹೆಚ್ಚುವರಿ ಮಳೆ ಆಗಿದೆ. ಇನ್ನು ಹಾರೋಹಳ್ಳಿ ತಾಲೂಕು 24 ರಷ್ಟು ಮಳೆ ಕೊರತೆ ಅನುಭವಿಸಿದೆ. ಚನ್ನಪಟ್ಟಣ ತಾಲೂಕು ಶೇ.3ರಷ್ಟು ಹಾಗೂ ಕನಕಪುರ ತಾಲೂಕು ಶೇ.14ಮಳೆ ಕೊರತೆ ಅನುಭವಿಸಿದೆ. ಬಾಕಿ ಉಳಿದಂತೆ ರಾಮನಗರ ತಾಲೂಕಿನಲ್ಲಿ ಶೇ.10ರಷ್ಟು ಮಳೆ ಹೆಚ್ಚಾಗಿದೆ. ಮಾಗಡಿ ತಾಲೂಕಿನ ಶೇ.13ರಷ್ಟು ಹೆಚ್ಚು ಮಳೆಯಾಗಿದೆ.

ಇನ್ನು ಜುಲೈ ತಿಂಗಳ ಅಂತ್ಯಕ್ಕೆ ಶೇ.1ರಷ್ಟು ಮಳೆಕೊರತೆಯಾಗಿದೆ. ಇನ್ನೊಂದೆಡೆ ಮಾನ್ಸೂನ್ ಲೆಕ್ಕದಲ್ಲಿ ಜಿಲ್ಲೆಯಲ್ಲಿ ಶೇ.20ರಷ್ಟು ಮಳೆ ಹೆಚ್ಚಾಗಿದೆ. ಜೂನ್ 1 ರಿಂದ ಆಗಸ್ಟ್ 1ರವರೆಗೆ 155ಮಿ.ಮೀಟರ್ ವಾಡಿಕೆ ಮಳೆಗೆ 195 ಮಿ.ಮೀಟರ್ ವಾಸ್ತವ ಮಳೆಯಾಗಿದೆ. ಈ ಮಾನ್ಸೂನ್ ಲೆಕ್ಕದಲ್ಲಿಯು ಹಾರೋಹಳ್ಳಿ ತಾಲೂಕಿನಲ್ಲಿ ಶೇ.1ರಷ್ಟು ಮಳೆ ಕೊರತೆ ಉಂಟಾಗಿದೆ. ಬಾಕಿ ಉಳಿದಂತೆ ಬೇರೆಲ್ಲಾ ತಾಲೂಕಿನಲ್ಲಿ ವಾಡಿಕೆಗಿಂತ ವಾಸ್ತವ ಮಳೆ ಹೆಚ್ಚಾಗಿದೆ.

ಶೇ.45.5ರಷ್ಟು ಬಿತ್ತನೆ ಕಾರ್ಯ:

2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಗೆ ಒಟ್ಟು 91108 ಹೆಕ್ಟೇರ್ ಬಿತ್ತನೆ ಗುರಿ ನಿಗಧಿಪಡಿಸಿದ್ದು ಇದುವರೆವಿಗೂ ಒಟ್ಟು 41449 ಹೆಕ್ಟೇರ್ ಪ್ರದೇಶದಲ್ಲಿ ರಾಗಿ (36585 ಹೆ.) ಎಳ್ಳು-(900 ಹೆ.), ಅಲಸಂದೆ -(724 ಹೆ), ತೊಗರಿ -(1258 ಹೆ.) ಅವರೆ -(612 ಹೆ), ಹುರುಳಿ -(371 ಹೆ.), ನೆಲಗಡಲೆ -(301 ಹೆ.), ಹರಳು-(77 ಹೆ.), ಹುಚ್ಚೆಳ್ಳು (10 ಹೆ.), ಸಾಸಿವೆ (20 ಹೆ.) ಹಾಗೂ ಕಬ್ಬು (156 ಹೆ.) ಬಿತ್ತನೆಯಾಗಿದೆ. ಪ್ರಸ್ತುತ ಉತ್ತಮ ಮಳೆಯಾಗುತ್ತಿರುವುದರಿಂದ ಮುಂಗಾರು ಹಂಗಾಮಿನ ಬೆಳೆಗಳ ಬಿತ್ತನೆಗೆ ಭೂಮಿ ಸಿದ್ಧತೆ ಹಾಗೂ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ.ಬೆಳೆ ಪರಿಸ್ಥಿತಿ :

ಪ್ರಸಕ್ತ ಮುಂಗಾರಿನಲ್ಲಿ ಬಿತ್ತನೆಯಾಗಿರುವ ಎಳ್ಳು ಹೂಕಾಯಿ ಬಲಿಯುವ ಹಂತದಲ್ಲಿದ್ದು, ಅಲಸಂದೆ ಹೂ, ಕಾಯಿ ಬಿಡುವ ಹಂತದಲ್ಲಿದೆ. ಅವರೆ, ತೊಗರಿ ಬೆಳೆಗಳು ಬೆಳವಣಿಗೆ ಹಂತದಲ್ಲಿದೆ. ರಾಗಿ ಬಿತ್ತನೆಗೆ ಭೂಮಿ ಸಿದ್ದತೆ ಕಾರ್ಯ ಪ್ರಗತಿಯಲ್ಲಿರುತ್ತದೆ.

ರಸಗೊಬ್ಬರ ದಾಸ್ತಾನು ಮತ್ತು ವಿತರಣೆ

ಮುಂಗಾರು ಹಂಗಾಮಿನಲ್ಲಿ ವಿವಿಧ ರಸಗೊಬ್ಬರಗಳ ಜಿಲ್ಲೆಯ ಬೇಡಿಕೆ 28047 ಮೆ.ಟನ್ ಗಳಷ್ಟು ಗುರಿ ನಿಗಧಿಪಡಿಸಲಾಗಿದೆ. ಆಗಸ್ಟ್ ಮಾಹೆಯ ಅಂತ್ಯದವರೆಗೆ 23026 ಮೆ.ಟನ್ ನಿಗಧಿಯಾಗಿದ್ದು ಪ್ರಸ್ತುತ ಮೂಲ ದಾಸ್ತಾನು ಸೇರಿ 18089 ಮೆ.ಟನ್ ಗಳಷ್ಟು ಸರಬರಾಜು ಆಗಿದ್ದು, 11029 ಮೆ.ಟನ್ ವಿತರಣೆಯಾಗಿದ್ದು 7060 ಮೆ.ಟನ್‌ಗಳಷ್ಟು ದಾಸ್ತಾನು ಲಭ್ಯವಿದೆ. ಪ್ರಸ್ತುತ ಯಾವುದೇ ರಸಗೊಬ್ಬರದ ಕೊರತೆಯಿರುವುದಿಲ್ಲ.

ಬಿತ್ತನೆ ಬೀಜ ದಾಸ್ತಾನು ಮತ್ತು ವಿತರಣೆ:

ಮುಂಗಾರು ಹಂಗಾಮಿಗೆ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಿಸಲು ವಿವಿಧ ಬೆಳೆಗಳ ಒಟ್ಟು 2307 ಕ್ವಿಂಟಾಲ್ ಗಳಷ್ಟು ಗುರಿ ನಿಗಧಿಪಡಿಸಲಾಗಿದೆ. ಪ್ರಸ್ತುತ ತೊಗರಿ, ಅಲಸಂದೆ, ರಾಗಿ, ಭತ್ತ, ಮುಸುಕಿನಜೋಳ ಮತ್ತು ನೆಲಗಡಲೆ ಬೆಳೆಗಳ ಒಟ್ಟು 2069.3 ಕ್ವಿಂಟಾಲ್ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು ಇದುವರೆಗೂ 1605.6 ಕ್ವಿಂಟಾಲ್ ವಿತರಣೆ ಮಾಡಲಾಗಿ 463.6 ದಾಸ್ತಾನು ಉಳಿಕೆಯಾಗಿದೆ. ಬಿತ್ತನೆ ಸಮಯಕ್ಕೆ ಹಾಗೂ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ಮುಂದಿನ ದಿನಗಳಲ್ಲಿ ದಾಸ್ತಾನು ಮಾಡಲಾಗುವುದು ಎಂದು ಕೃಷಿ ಅಧಿಕಾರಿ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

ಮಳೆ ಪ್ರಮಾಣ ಜನವರಿ 1 ರಿಂದ ಆಗಸ್ಟ್ 1ರ ಅಂತ್ಯಕ್ಕೆ (ಮಿ.ಮೀ)ತಾಲೂಕುವಾಡಿಕೆವಾಸ್ತವಶೇಕಡ

ಚನ್ನಪಟ್ಟಣ334.1325.6-3

ಕನಕಪುರ324.8277.9-14

ಮಾಗಡಿ390.2442.513

ರಾಮನಗರ357.4392.110

ಹಾರೋಹಳ್ಳಿ331.7253.5-24ಒಟ್ಟು3333392