ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಕೃಷಿಕ ಸಮಾಜ: ಸಚಿವ ಚಲುವರಾಯಸ್ವಾಮಿ

| Published : Nov 09 2025, 02:45 AM IST

ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಕೃಷಿಕ ಸಮಾಜ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಕ ಸಮಾಜವು ರಾಷ್ಟ್ರ ಮಟ್ಟದಲ್ಲಿ ಎಲ್ಲ ರಾಜ್ಯದಲ್ಲಿಯೂ ಒಳಗೊಂಡಿದೆ.

ಬಳ್ಳಾರಿ: ಕೃಷಿಕ ಸಮಾಜವು ರಾಷ್ಟ್ರ ಮಟ್ಟದಲ್ಲಿ ಎಲ್ಲ ರಾಜ್ಯದಲ್ಲಿಯೂ ಒಳಗೊಂಡಿದೆ. ರಾಜ್ಯದಲ್ಲಿ ಸರ್ಕಾರದೊಂದಿಗೆ ಸದಾ ಸಂಪರ್ಕದಲ್ಲಿದ್ದುಕೊಂಡು ಅತ್ಯಂತ ಚುರುಕಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಜಿಲ್ಲಾ ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜಗಳ ಸಹಯೋಗದಲ್ಲಿ ನಗರದ ಹಳೇ ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಬಳ್ಳಾರಿ ಘಟಕ ಕೃಷಿಕ ಸಮಾಜದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರೈತರ ಸಮಸ್ಯೆಗಳನ್ನು ಕೃಷಿ ಇಲಾಖೆಯ ಮೂಲಕ ಸರ್ಕಾರದ ಗಮನ ಸೆಳೆಯುವ ಸಂಪರ್ಕ ಕೊಂಡಿಯಾಗಿ ಕೃಷಿಕ ಸಮಾಜವು ಕೆಲಸ ನಿರ್ವಹಿಸುತ್ತಿದೆ. ಸ್ವತಂತ್ರ ಪೂರ್ವದಲ್ಲೇ ಪ್ರಾರಂಭವಾದ ಕೃಷಿಕ ಸಮಾಜವು ತನ್ನದೇ ಆದ ಇತಿಹಾಸ ಹೊಂದಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅವರಿಗಾಗಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿಯೂ ಕೃಷಿಕ ಸಮಾಜ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದರು.

ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರ್ಕಾರ ರೈತರಿಗೆ ತಾರತಮ್ಯ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರವು ರೈತರ ಪರ ಕಾಳಜಿ ಹೊಂದಿದೆ. ಕೊಟ್ಟ ಮಾತಿನಂತೆ ಎಲ್ಲ ಸಚಿವರು, ಶಾಸಕರ ಸಹಕಾರದಲ್ಲಿ ಶೀಘ್ರದಲ್ಲಿ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲಾಗುವುದು. ಇದರಿಂದ ಹೊಸಪೇಟೆ, ಬಳ್ಳಾರಿ, ಕಂಪ್ಲಿ ಮತ್ತು ಹಗರಿ ಬೊಮ್ಮನಹಳ್ಳಿ ಭಾಗದ ರೈತರಿಗೆ ಅನುಕೂಲವಾಗಲಿದೆ. ರೈತರನ್ನು ಸಮಾನ ದೃಷ್ಟಿಯಿಂದ ಕಾಣುವ ಏಕೈಕ ಸರ್ಕಾರ ನಮ್ಮದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಖಂಡ ಬಳ್ಳಾರಿ ಜಿಲ್ಲೆಯ 8 ತಾಲೂಕುಗಳಲ್ಲಿ ಸಂಸದರ ಅನುದಾನದಲ್ಲಿ ಪ್ರತಿ ತಾಲೂಕಿಗೆ ₹2 ಲಕ್ಷ ಮೌಲ್ಯದ ಅತ್ಯಾಧುನಿಕ ಕಂಪ್ಯೂಟರ್, ಪ್ರೊಜೆಕ್ಟರ್ ಗಳನ್ನು ರೈತ ಸಂಪರ್ಕ ಕೇಂದ್ರಗಳಿಗೆ ನೀಡಲಾಗಿದೆ. ಇದರಿಂದ ವೈಜ್ಞಾನಿಕ ಬೆಳೆ ಪದ್ಧತಿ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರ ಕುರಿತು ರೈತರಿಗೆ ತರಬೇತಿ ನೀಡಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ನಮ್ಮಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ರೈತರನ್ನು ಮುನ್ನೆಲೆಗೆ ತರಲು ಹಾಗೂ ನಾಡನ್ನು ಕಟ್ಟುವ ಕೆಲಸ ಮಾಡೋಣ ಎಂದು ಸಂಸದ ಈ.ತುಕಾರಾಂ ತಿಳಿಸಿದರು.

ಜಂಟಿ ಕೃಷಿ ನಿದೇರ್ಶಕ ಸೋಮಸುಂದರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ, ಬಳ್ಳಾರಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಗಾದೆಪ್ಪ, ಉಪಾಧ್ಯಕ್ಷ ಎಸ್.ಕೆ. ವಿಶಾಲಾಕ್ಷಿ ಕುಮಾರಸ್ವಾಮಿ, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಸುರೇಶ್ ನಂದಿ, ಉಪ ಕೃಷಿ ನಿರ್ದೇಶಕ ಮಂಜುನಾಥ್ ಎಸ್.ಎನ್ ಸೇರಿದಂತೆ ಪಾಲಿಕೆ ಸದಸ್ಯರು, ಕೃಷಿ ಸಮಾಜದ ವಿವಿಧ ತಾಲೂಕುಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ರೈತ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮ ಆರಂಭ ಮುನ್ನ ಕೃಷಿ ಸಚಿವರು ಆಧುನಿಕ ಕೃಷಿ ಯಂತ್ರೋಪಕರಣಗಳು, ಸಾವಯವ ರಸ-ಗೊಬ್ಬರ, ಕೃಷಿ ಪರಿಕರಗಳು, ಪಿಎಂಎಫ್‌ಎಂಇ ಯೋಜನೆಯಡಿ ಅನುಷ್ಠಾನಗೊಂಡ ಆಹಾರ ಸಂಸ್ಕರಣಾ ಘಟಕಗಳ ಆಹಾರ ಉತ್ಪನ್ನ ಮಳಿಗೆ, ವಿವಿಧ ಯೋಜನೆಗಳ ಮಾಹಿತಿಗಳನ್ನೊಳಗೊಂಡ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಕಾರ್ಯಾಗಾರ, ವಿನೂತನ ತಾಂತ್ರಿಕತೆಗಳ ಕುರಿತು ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ರೈತರೊಂದಿಗೆ ಸಚಿವ ಚಲುವರಾಯಸ್ವಾಮಿ ಚರ್ಚಿಸಿದರು.