ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿದ್ದರೂ ನಾಲೆಗಳಿಗೆ ನೀರು ಹರಿಸದೆ ಸರ್ಕಾರ ರೈತರ ಬದುಕಿನ ಜತೆ ಚಲ್ಲಾಟವಾಡುತ್ತಿದೆ ಎಂದು ಆರೋಪಿಸಿ ರೈತರು ಪಟ್ಟಣದ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಮಂಗಳವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಸೇರಿದ ರೈತರು, ಸುಮಾರು 15 ನಿಮಿಷಗಳ ಕಾಲ ಹೆದ್ದಾರಿ ತಡೆದು ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿ ಆಕ್ರೋಶ ಹೊರಹಾಕಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದರು.
ಅಣೆಕಟ್ಟೆ ತುಂಬಿದ್ದರೂ ನಾಲೆಗಳಿಗೆ ನೀರು ಹರಿಸಿ ರೈತರ ಹಿತ ಕಾಪಾಡುವ ಕೆಲಸ ಮಾಡುತ್ತಿಲ್ಲ. ನಾಲೆ ಕಾಮಗಾರಿ ಆಧುನೀಕರಣದ ನೆಪದಲ್ಲಿ ನೀರು ಹರಿಸದೆ ರೈತರನ್ನು ಸಂಕಷ್ಟಕ್ಕೆ ದೂಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.ಕಟಾವು ಹಂತ ತಲುಪಿರುವ ಕಬ್ಬು ಒಣಗಿದರೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಾರೆ. ನೀರು ಹರಿಸುವಂತೆ ಕಳೆದ ಒಂದು ವಾರದಿಂದ ರೈತರು ಪ್ರತಿಭಟಿಸುತ್ತಿದ್ದರು. ಕಾವೇರಿ ನೀರಾವರಿ ನಿಗಮ ಮತ್ತು ಸರ್ಕಾರ ರೈತರ ಹೋರಾಟಕ್ಕೆ ಮನ್ನಣೆ ನೀಡಿಲ್ಲ. ಇಂದು ರಾತ್ರಿಯೊಳಗೆ ನಾಲೆಗೆ ನೀರು ಹರಿಸದಿದ್ದರೆ ಪಾಂಡವಪುರ ಬಂದ್‌ಗೆ ಕರೆ ಕೊಡಲಾಗುವುದು ಎಂದು ಎಚ್ಚರಿಸಿದರು.
ವಿಶ್ವೇಶ್ವರಯ್ಯ ಮತ್ತು ಸಿಡಿಎಸ್ ನಾಲೆಗಳಲ್ಲಿ ಹರಿಯುವ ನೀರಿನ ಮೇಲೆ ಲಕ್ಷಾಂತರ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಈ ನಾಲೆಗಳಲ್ಲಿ ತಕ್ಷಣಕ್ಕೆ ನೀರು ಹರಿಸಬೇಕು. ರೈತರ ಬದುಕು ಮತ್ತು ಹೋರಾಟಕ್ಕಿಂತ ನಾಲೆ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರನ ಹಿತವೇ ಸರ್ಕಾರಕ್ಕೆ ಮುಖ್ಯವಾಗಿದೆ ಎಂದು ಆರೋಪಿಸಿದರು.ಬಿಜೆಪಿ ರೈತ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಆರ್‌ಎಸ್ ಅಣೆಕಟ್ಟೆಗೆ ಬಾಗಿನ ಅರ್ಪಿಸಿದ ದಿನ ನಾಲೆಗಳಿಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದರು. ರೈತರ ಮುಂದೆ ನೀರು ಹರಿಸುವಂತೆ ಸೂಚನೆ ನೀಡಿ ಆನಂತರದಲ್ಲಿ ಬೇಡ ಎಂದಿರುವ ಬಗ್ಗೆ ಅನುಮಾನವಿದೆ ಎಂದು ದೂರಿದರು.
ಅಧಿಕಾರಿಗಳು ನೀರು ಹರಿಸದೆ ವಿಳಂಬ ಮಾಡುತ್ತಿದ್ದಾರೆ. ಅಧಿಕಾರಿಗಳು ಪ್ರತಿದಿನ ಒಂದಿಲ್ಲೊಂದು ಸಬೂಬು ಹೇಳಿಕೊಂಡು ರೈತರನ್ನು ಸಂಕಷ್ಟಕ್ಕೆ ದೂಡುವ ಕೆಲಸ ಮಾಡುತ್ತಿದ್ದಾರೆ. ಇಂದು ನಾಲೆಗೆ ನೀರು ಹರಿಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದರೂ ಸ್ಥಳಕ್ಕೆ ಪೊಲೀಸರು ಬಾರದೆ ವಾಹನ ಸವಾರರು ಕೆಲಕಾಲ ತೊಂದರೆಗೆ ಒಳಗಾದರು. ಪ್ರತಿಭಟನೆ ಕೈ ಬಿಟ್ಟ ನಂತರ ಸುಗಮ ಸಂಚಾರಕ್ಕೆ ಅವಕಾಶ ದೊರೆಯಿತು. ಪ್ರತಿಭಟನೆಯಲ್ಲಿ ಹೋರಾಟಗಾರ ಕೆನ್ನಾಳು ಚಿಕ್ಕಣ್ಣ, ಎಣ್ಣೆಹೊಳೆಕೊಪ್ಪಲು ನಿರಂಜನ್, ಹಿರೇಮರಳಿ ಶ್ರೀನಿವಾಸ್, ವಿಷ್ಣು ವಿಠಲ, ನೆಲಮನೆ ಪಿಎಸಿಎಸ್ ಅಧ್ಯಕ್ಷ ಶ್ರೀಕಂಠ, ಹೌಸಿಂಗ್ ಬೋರ್ಡ್ ನಿರ್ದೇಶಕ ಎನ್.ಭಾಸ್ಕರ್, ಪುಟ್ಟೇಗೌಡ ಇತರರು ಇದ್ದರು.