ಸಾರಾಂಶ
ಹುಳಿಯಾರು: ವಾರದ ಸಂತೆಗೆ ಮೂಲ ಸೌಕರ್ಯಗಳನ್ನು ಒದಗಿಸದ ಪಟ್ಟಣ ಪಂಚಾಯಿತಿ ವಿರುದ್ಧ ರೈತರಿಂದ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ. ಈ ಹಿಂದೆ ನಡೆದಿದ್ದ ಹೋರಾಟದ ವೇಳೆ ಅಧಿಕಾರಿಗಳು 15 ದಿನಗಳಲ್ಲಿ ಮೂಲ ಸೌಕರ್ಯಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ರಾಜ್ಯ ರೈತ ಸಂಘದ ಹೊಸಳ್ಳಿ ಚಂದ್ರಣ್ಣ ನೇತೃತ್ವದಲ್ಲಿ ವಾರದ ಸಂತೆಯಲ್ಲಿ ಯಾರು ಸಹ ಕರ ನೀಡಬಾರದು ಎಂದು ಕರಪತ್ರಗಳನ್ನು ಹಂಚಿದರು. ಈ ವೇಳೆ ಮಾತನಾಡಿದ ಮುಖಂಡರು, ಗ್ರಾಮ ಪಂಚಾಯಿತಿಯಿಂದ ಹಿಡಿದು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದರೂ ಸಹ ದಶಕಗಳಿಂದ ವಾರದ ಸಂತೆ ಹರಾಜು ಪ್ರಕ್ರಿಯೆ ನಡೆದುಕೊಂಡು ಬರುತ್ತಿದ್ದು ಈ ಬಗ್ಗೆ ಹರಾಜುದಾರರು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಿದ್ದೇವು. ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಧರಣಿ ಆರಂಭಿಸಿದ ಬೆನ್ನಲ್ಲೇ ಅಧಿಕಾರಿಗಳು 15 ದಿನಗಳ ಗಡುವಿನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇವೆ ಎಂದು ಧರಣಿ ನಿರತರನ್ನು ಮನವೊಲಿಸಿ ಧರಣಿ ಹಿಂತೆಗೆದುಕೊಳ್ಳುವಂತೆ ಹೇಳಿದ್ದರು. ಅಧಿಕಾರಿಗಳ ಹೇಳಿಕೆ ಬರಿ ಹೇಳಿಕೆಗೆ ಸೀಮಿತವಾಗಿದ್ದು 15 ದಿನಗಳ ಕಳೆದರೂ ಸಹ ಭರವಸೆ ಈಡೇರದ ಹಿನ್ನೆಲೆಯಲ್ಲಿ ರೈತ ಸಂಘದ ಮುಖಂಡರು ರೈತರು ಮತ್ತು ವರ್ತಕರು ಯಾವುದೇ ರೀತಿಯ ಸುಂಕ ನೀಡಬಾರದೆಂದು ಕರಪತ್ರಗಳನ್ನು ಹಂಚುವ ಮೂಲಕ ಪಟ್ಟಣ ಪಂಚಾಯಿತಿ ಮುಂದೆ ಅಹೋರಾತ್ರಿ ಧರಣಿಯನ್ನು ಮತ್ತೆ ಆರಂಭಿಸಿದ್ದೇವೆ ಎಂದರು. ಈ ವೇಳೆ ಪೊಲೀಸರು, ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು.