ಬೆಳೆ ಹಾನಿ ಮಾಹಿತಿಯನ್ನು ಸರಿಯಾಗಿ ಕಳಿಸಿಲ್ಲವೆಂದು ಎಂದು ಆರೋಪಿಸಿದ ರೈತರು ಸೋಮವಾರ ಪಟ್ಟಣದ ಕೃಷಿ ಇಲಾಖೆಗೆ ಭೇಟಿ ನೀಡಿ ಅಧಿಕಾರಿಗೆ ದಿಗ್ಭಂದನ ಹಾಕಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ನರಗುಂದ

ಬೆಳೆ ಹಾನಿ ಮಾಹಿತಿಯನ್ನು ಸರಿಯಾಗಿ ಕಳಿಸಿಲ್ಲವೆಂದು ಎಂದು ಆರೋಪಿಸಿದ ರೈತರು ಸೋಮವಾರ ಪಟ್ಟಣದ ಕೃಷಿ ಇಲಾಖೆಗೆ ಭೇಟಿ ನೀಡಿ ಅಧಿಕಾರಿಗೆ ದಿಗ್ಭಂದನ ಹಾಕಿ ಪ್ರತಿಭಟಿಸಿದರು.

ಮುಂಗಾರು ಹಂಗಾಮಿನಲ್ಲಿ ತಾಲೂಕಿನ ರೈತರು ಅಲ್ಪಸ್ವಲ್ಪ ಮಳೆಗೆ ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ಸೂರ್ಯಕಾಂತಿ, ತೊಗರಿ, ಈರಳ್ಳಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ನಂತರ ದಿನಗಳಲ್ಲಿ ವಾಡಿಕೆ ಮಳೆಯಾಗದೆ ಬಿತ್ತನೆ ಮಾಡಿದ ಬೆಳೆ ತೇವಾಂಶ ಕೊರತೆಯಿಂದ ಸಂಪೂರ್ಣ ಹಾನಿಯಾಗಿವೆ. ಆದರೆ ಕೃಷಿ ಇಲಾಖೆಯವರು ಮಳೆಯ ಮಾಹಿತಿಯನ್ನು ಸರಿಯಾಗಿ ಕಳಸದ್ದರಿಂದ ಇಂದು ರೈತರಿಗೆ ಬೆಳೆ ವಿಮೆ ಬಂದಿಲ್ಲ ಎಂದು ತಾಲೂಕಿನ ಹಿರೇಕೊಪ್ಪ, ಬೆನಕನಕೊಪ್ಪ, ಅರಶಿಣಗೋಟಿ, ಗ್ರಾಮಗಳ ಸೇರಿ ವಿವಿಧ ಗ್ರಾಮಗಳ ರೈತರು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ರೈತರು ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನ ಮಂತ್ರಿ ಬಿಮಾ ಫಸಲ್‌ ಯೋಜನೆ ಅಡಿಯಲ್ಲಿ ವಿಮೆ ಮಾಡಿಸಿದ್ದಾರೆ. ಸೆಟ್‌ಲೈಟ್‌ ಮೂಲಕ ಮಳೆ ಮಾಪನ ಮಾಡಿದ್ದು ಅವೈಜ್ಞಾನಿಕವಾಗಿದೆ. ಈ ವರದಿಯಲ್ಲಿ ಈ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದರಿಂದ ಇಂದು ರೈತರಿಗೆ ಬೆಳೆ ವಿಮೆ ಸಿಗದಂತಾಗಿದೆ. ಆದ್ದರಿಂದ ಈ ರೀತಿ ಮಾಹಿತಿ ಸರ್ಕಾರಕ್ಕೆ ಹೋದರೂ ಸಹ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರು ಮೌನವಾಗಿದ್ದಾರೆಂದು ಆರೋಪಿಸಿದರು.

ಕೃಷಿ ಅಧಿಕಾರಿ ಎಸ್.ಎಫ್. ಬೆಳವಟಿಗೆ ಮಾತನಾಡಿ, ಈ ತಾಲೂಕಿನ ಮಳೆ ಮಾಪನವನ್ನು ಮುಂಬೈಯಿಂದ ಸೆಟಲೈಟ್‌ ಮೂಲಕ ಮಾಪನ ಮಾಡಿ ಜಿಲ್ಲಾಧಿಕಾರಿಗೆ ಕಳಿಸಿದ್ದರಿಂದ ನಾವು ಏನು ಮಾಡಲು ಬರುವುದಿಲ್ಲ. ಮೇಲಾಗಿ ನಾನು ಈ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ ಎಂದು ಮೇಲಾಧಿಕಾರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಈ ಸಂದರ್ಭ ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಬಸವರಡ್ಡಿ ರಾಯರಡ್ಡಿ, ಗಿರೀಶ ನೀಲರಡ್ಡಿ, ವಿಜಯ ಕೋತಿನ, ಸಂಗನಗೌಡ ಹಾಲಗೌಡ್ರ, ಪ್ರಕಾಶ ಕೆಂಚರಡ್ಡಿ, ಹನಮರಡ್ಡಿ ರಿತ್ತಿ, ಬಾಬು ಲಿಂಗದಾಳ, ಕೃಷ್ಣರಡ್ಡಿ ದ್ಯಾವನಗೌಡ್ರ, ನಾಗಪ್ಪ ಬೆನ್ನುರ, ಶಿದ್ದಪ್ಪ ಮರ್ಚಪ್ಪನವರ ಸೇರಿದಂತೆ ಮುಂತಾದವರು ಇದ್ದರು.