ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ತಾವರಗೇರಾದಿಂದ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ವರೆಗೆ ರೈತರು ಪಾದಯಾತ್ರೆ ನಡೆಸಿದರು.

ಕುಷ್ಟಗಿ: ಸರಿಯಾದ ಮಳೆಯಿಲ್ಲ, ಹೊಲದಲ್ಲಿ ಬೆಳೆ ಇಲ್ಲ, ಹಾಕಿದ ಬಂಡವಾಳ ಕೈಗೆ ಬರುತ್ತಿಲ್ಲ. ಸಾಲದ ಹೊರೆ ಮಾತ್ರ ಹೆಚ್ಚುತ್ತಿದೆ. ಬೆಳೆ ಉಳಿಯುವ ಭರವಸೆಯೂ ಇಲ್ಲದ ಸ್ಥಿತಿಯಲ್ಲಿ ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು, ಮಂಗಳವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ತಾವರಗೇರಾದಿಂದ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ವರೆಗೆ ರೈತರು ಆರಂಭಿಸಿರುವ ಪಾದಯಾತ್ರೆ ಕುಷ್ಟಗಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಪ್ರತಿಭಟನೆ ನಡೆಯಿತು.

ಬಿಸಿಲಿನ ತಾಪವನ್ನೂ ಲೆಕ್ಕಿಸದೆ ನೂರಾರು ರೈತರು ಹಾಗೂ ಮಹಿಳೆಯರು ರಸ್ತೆಯಲ್ಲೇ ಕುಳಿತು ಧರಣಿ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೂಡಲೇ ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ರಸ್ತೆ ತಡೆಯಿಂದ ಬಸವೇಶ್ವರ ವೃತ್ತ ಹಾಗೂ ಸುತ್ತಮುತ್ತಲಿನ ಪ್ರಮುಖ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

ನಿಡಶೇಸಿ ಮಠದ ಅಭಿನವ ಕರಿಬಸವ ಶ್ರೀಗಳು ಮಾತನಾಡಿ, ಕುಷ್ಟಗಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರ ಹಿತ ರಕ್ಷಿಸಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಬರ ಘೋಷಣೆ ಅನಿವಾರ್ಯವಾಗಿದೆ. ಒಂದು ಬಾರಿ ಬರಗಾಲ ಬಂದರೆ ರೈತರ ಬದುಕು ಹತ್ತು ವರ್ಷ ಹಿಂದಕ್ಕೆ ಹೋಗುತ್ತದೆ. ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸವೂ ಆಗಬೇಕು ಎಂದು ಒತ್ತಾಯಿಸಿದರು. ಇದು ಯಾವುದೇ ಪಕ್ಷದ ಪರ ಅಥವಾ ವಿರೋಧದ ಹೋರಾಟವಲ್ಲ. ರೈತರ ಬದುಕಿನ ಪ್ರಶ್ನೆಯಾಗಿರುವುದರಿಂದ ಪಕ್ಷಾತೀತವಾಗಿ ಹೋರಾಟ ನಡೆಸಲಾಗುತ್ತಿದೆ. ಸ್ಥಳೀಯ ಶಾಸಕರು ಹಾಗೂ ಮಾಜಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಬರ ಘೋಷಣೆ ಮಾಡಿಸಬೇಕು ಎಂದು ಆಗ್ರಹಿಸಿದರು.

ಸಮಾಜಸೇವಕ ರವಿಕುಮಾರ್ ಹಿರೇಮಠ ಮಾತನಾಡಿ, ತಾಲೂಕಿನಲ್ಲಿ ಭೀಕರ ಬರದ ಛಾಯೆ ಆವರಿಸಿದೆ. ಸರ್ಕಾರ ತಂತ್ರಜ್ಞಾನ ಆಧಾರಿತವಾಗಿ ಬರ ನಿರ್ಧರಿಸುವ ಪ್ರಕ್ರಿಯೆ ನಡೆಸಿದ್ದರೂ ಕುಷ್ಟಗಿಯನ್ನು ಬರಪೀಡಿತ ಎಂದು ಘೋಷಿಸಿಲ್ಲ. ಇದರಲ್ಲಿ ರಾಜಕಾರಣ ಬೆರೆತಿರಬಹುದೆಂಬ ಅನುಮಾನವಿದೆ. ಆದರೆ ರೈತರಿಗೆ ಅನ್ಯಾಯವಾಗಬಾರದು. ರಾಜ್ಯ ಸರ್ಕಾರ ಕೂಡಲೇ ಬರ ಘೋಷಿಸಬೇಕು ಎಂದು ಒತ್ತಾಯಿಸಿದರು. ಬರ ಘೋಷಣೆಯಾಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ರೈತ ಮುಖಂಡ ನಜೀರಸಾಬ್ ಮೂಲಿಮನಿ ಮಾತನಾಡಿ, ಎಕರೆಗೆ ₹25 ಸಾವಿರ ಖರ್ಚು ಮಾಡಿದ್ದರೂ ನಿರೀಕ್ಷಿತ ಬೆಳೆ ಬಂದಿಲ್ಲ. ಬರದ ಪರಿಣಾಮ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಮಾಜಿ ಶಾಸಕರು ಸೆ. 24ರಂದು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ರೈತರ ಪರ ಧ್ವನಿ ಎತ್ತಬೇಕು. ಸರ್ಕಾರ ಬರ ಘೋಷಿಸಿ ಬೆಳೆ ನಷ್ಟಕ್ಕೆ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಒನಕೆ ಓಬವ್ವನಂತೆ ಹೋರಾಟ ಮಾಡಬಹುದು. ಬರ ಘೋಷಣೆ ಮಾಡದಿದ್ದರೆ ತಾಲೂಕಿನಾದ್ಯಂತ ರೈತರನ್ನು ಸಂಘಟಿಸಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಮಹೇಶ್ವರಸ್ವಾಮಿ ಹಿರೇಮಠ, ದೇವರಾಜ ಹಜಾಳದ, ಮಲ್ಲಿಕಾರ್ಜುನ ದೋಟಿಹಾಳ, ಬಸವರಾಜ ಗಾಣಿಗೇರ, ಹನುಮೇಶ ನಾಯಕ, ಸಣ್ಣಈರಪ್ಪ ರಾಠೋಡ, ಮಹಾಂತೇಶ ಬಂಡೇರ, ಆರ್.ಕೆ. ದೇಸಾಯಿ, ವಸಂತ ಮೇಲಿನಮನಿ, ರಮೇಶ ಮೇಲಿನಮನಿ, ಅರುಣ ನಾಲತ್ವಾಡ, ಕಂದಕೂರಪ್ಪ ಕಂದಕೂರು, ದೊಡ್ಡಬಸವ ಸುಂಕದ, ಪ್ರಭುಶಂಕ್ರಗೌಡ ಪಾಟೀಲ್‌, ಶಶಿಧರ ಪಾಟೀಲ್‌, ಮಹಾಂತಯ್ಯ ಅರಳೇಲಿಮಠ, ಉಮೇಶ ಮಂಗಳೂರು ಪಾಲ್ಗೊಂಡಿದ್ದರು. ಇದಕ್ಕೂ ಮುಂಚೆ ಪ್ರತಿಭಟನಕಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.