ವಿವಿಧ ಬೇಡಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೆರೂರ ಘಟಕ ನೇತೃತ್ವದಲ್ಲಿ ನೂರಾರು ರೈತರು ಬಾದಾಮಿ ಕ್ರಾಸ್ನಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ನಂತರ ವಿವಿಧ ಘೋಷಣೆ ಕೂಗುತ್ತ ರಾಷ್ಟ್ರೀಯ ಹೆದ್ದಾರಿ 218 ರ ಮೂಲಕ ಸಂಚರಿಸಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಧರಣಿ ಆರಂಭಿಸಿದರು.
ಕನ್ನಡಪ್ರಭ ವಾರ್ತೆ ಕೆರೂರ
ವಿವಿಧ ಬೇಡಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೆರೂರ ಘಟಕ ನೇತೃತ್ವದಲ್ಲಿ ನೂರಾರು ರೈತರು ಬಾದಾಮಿ ಕ್ರಾಸ್ನಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ನಂತರ ವಿವಿಧ ಘೋಷಣೆ ಕೂಗುತ್ತ ರಾಷ್ಟ್ರೀಯ ಹೆದ್ದಾರಿ 218 ರ ಮೂಲಕ ಸಂಚರಿಸಿ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಧರಣಿ ಆರಂಭಿಸಿದರು. ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಾಡಿದ ಸಾಲ ಮನ್ನಾ, ಬೆಳೆಗೆ ಬೆಂಬಲ ಬೆಲೆ ಘೋಷಣೆ, ಕೈನಕಟ್ಟಿ ಹಾಗೂ ಕೆರೂರ ಏತ ನೀರಾವರಿ ಪ್ರಾರಂಭಿಸಬೇಕು ಹಾಗೂ ಕೆರೂರ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಕೆರೂರ ಕೆರೆಗೆ ನೀರು ತುಂಬಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರುವಂತೆ ಆಗ್ರಹಿಸಿದರು.ಧರಣಿ ಸ್ಥಳಕ್ಕೆ ತಹಸೀಲ್ದಾರ ಭೇಟಿ: ಬಾದಾಮಿ ತಹಸೀಲ್ದಾರ ಅಮರೇಶ ಪಮ್ಮಾರ ಮತ್ತು ಕೆಬಿಜೆಎನ್ಎಲ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಶ್ವನಾಥ ಮೇಲನ್ನವರ ಧರಣಿ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.
ರೈತರು ತಮ್ಮ ಬೇಡಿಕೆಗಳ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವದಿಲ್ಲ ಎಂದು ಪಟ್ಟು ಹಿಡಿದರು. ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕೆರೂರ ಘಟಕದ ಗೌರವಾಧ್ಯಕ್ಷ ಹುಸೇನಸಾಬ ಮಾಲದಾರ, ಅಧ್ಯಕ್ಷ ಗೋವಿಂದಪ್ಪ ಬೆಳಗಂಟಿ, ಉಪಾಧ್ಯಕ್ಷ ಕುಮಾರ ದೇಸಾಯಿ, ಕಾರ್ಯದರ್ಶಿ ರಾಮಚಂದ್ರ ಮೈಲಾರಿ, ರೈತ ಪ್ರಮುಖರಾದ ಸುರೇಶ ಪೂಜಾರ ಸಂಗಪ್ಪ ಹಿರೇಮನಿ, ಈರಣ್ಣ ಅಕ್ಕಿ ಭೀಮಪ್ಪ ಮಾದರ, ರಮೇಶ ಬೇಪಾರಿ, ರಾಮಣ್ಣ ಪೂಜಾರ, ನಿಂಗವ್ವ ಹೊನ್ನನಾಯ್ಕರ, ಮಮತಾಜ ಮುಜಾವರ, ಶಿವನಗೌಡ ಪಾಟೀಲ, ಬಿ.ಎಸ್. ಗೋನಾಳ ಸೇರಿದಂತೆ ಅನೇಕ ರೈತರಿದ್ದರು.