ಟ್ರ್ಯಾಕ್ಟರ್ ಮೂಲಕ ಔಷಧಿ ಸಿಂಪರಣೆ ಆರಂಭ

| Published : Aug 26 2024, 01:36 AM IST / Updated: Aug 26 2024, 01:37 AM IST

ಸಾರಾಂಶ

ದುಬಾರಿಯಾಗಿರುವ ಕೃಷಿಯಲ್ಲಿ ಯಾಂತ್ರೀಕರಣಕ್ಕೆ ರೈತರು ಒತ್ತು ನೀಡುತ್ತಿದ್ದಾರೆಂಬ ಮಾತಿಗೆ ಸಾಕ್ಷಿ ಎಂಬಂತೆ ಯುವ ರೈತ ಮಲ್ಲು ಚಂದ್ರಾಮಪ್ಪ ಕುಂಬಾರ ಅವರು ಟ್ರ್ಯಾಕ್ಟರ್ ಮೂಲಕ ಬೆಳೆಗಳಲ್ಲಿ ಕೀಟನಾಷಕ ಔಷಧಿ ಸಿಂಪರಣೆ ಕೈಗೊಳ್ಳುವ ಮೂಲಕ ದಿನದ ಶ್ರಮ ಮತ್ತು ಕೂಲಿಯಾಳಿನ ಖರ್ಚು ಉಳಿಸುವ ಮೊದಲಿಗರಾಗಿ ಗಮನ ಸೆಳೆದಿದ್ದಾರೆ.

ಕನ್ನಡಪ್ರಭ ವಾರ್ತೆ ಆಳಂದ

ತೊಗರಿ ಬೆಳೆಯಲ್ಲಿ ಟ್ರ್ಯಾಕ್ಟರ್ ಓಡಾಟ ಸಾಧ್ಯವಾಗದು ಎಂದಿದ್ದ ರೈತರಿಗೆ ಇದು ಸಾಧ್ಯವೆಂದು ತೋರಿಸಿದ್ದಾರೆ. ಟ್ರ್ಯಾಕ್ಟರ್ ಬಳಕೆ ಮೂಲಕ ದಿನಕ್ಕೆ 12 ಎಕರೆ ಪ್ರದೇಶಗಳಲ್ಲಿ ಬೆಳೆಗೆ ಔಷಧಿ ಸಿಂಪಡಿಸುವುದು ಸಾಧ್ಯವಾಗಿದೆ.

ಬಿತ್ತನೆ, ಔಷಧಿ ಸಿಂಪರಣೆ, ಗಳ್ಯಾ ಎಡೆ ಸಾಗು ಮಾಡಲು ಎತ್ತುಗಳು ಮತ್ತು ಆಳು ಕೂಲಿಗಿಂತ ಟ್ರ್ಯಾಕ್ಟರ್‌ನಿಂದ ರೈತರಿಗೆ ಉಳಿತಾಯವಿದೆ. 245 ಎಎಚ್‍ಪಿ ಜೆಒ ಈ ಟ್ರ್ಯಾಕ್ಟರ್‌ಗೆ 200 ಲೀಟರ್ ನೀರಿನ ಸಾಮರ್ಥ್ಯದ ಟ್ಯಾಂಕ್ ಅಳವಡಿಕೆಯಿದೆ. ಇದರಿಂದ ಎರಡುವರೆಯಿಂದ ಮೂರು ಎಕರೆ ಹೀಗೆ ಸುಮಾರು 8 ಟ್ಯಾಂಕ್‍ನಿಂದ ದಿನಕ್ಕೆ 25 ಎಕರೆ ಔಷಧಿ ಸಿಂಪರಣೆಯಾಗುತ್ತದೆ.

ಸರಾಸರಿ 20 ನಿಮಿಷದಲ್ಲಿ ಎರಡುವರೆ ಎಕರೆ ಔಷಧಿ ಕೇವಲ 800 ರುಪಾಯಿ ವೆಚ್ಚದಲ್ಲಿ ಸಿಂಪರಿಸಬಹುದಾಗಿದೆ. ಮಾನವ ಶ್ರಮದಿಂದಾದರೆ ಎರಡು ಎಕರೆಗೆ ಕನಿಷ್ಠ 1200 ರುಪಾಯಿ ಬೇಕಾಗುತ್ತದೆ. ಎರಡುವರೆ ಎಕರೆಗೆ ಸುಮಾರು 400 ರುಪಾಯಿ ಟ್ರ್ಯಾಕ್ಟರ್‌ನಿಂದ ಉಳಿತಾಯ ಮತ್ತು ಕಡಿಮೆ ಸಮಯದಲ್ಲಿ ಕೆಲಸ ಮುಗಿಯುತ್ತದೆ ಎಂದು ರೈತ ಮಲ್ಲು ಕುಂಬಾರ ಹೇಳಿದ್ದಾರೆ.