ಸಾರಾಂಶ
ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತರ ಖಾತೆಗೆ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರದ ಬರ ಪರಿಹಾರ ಮೊತ್ತ ಜಮಾ ಮಾಡುವಂತೆ ರೈತ ಹೋರಾಟ ಸಮಿತಿ ಸದಸ್ಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಬ್ಯಾಡಗಿ: ಬರಗಾಲದಿಂದ ತತ್ತರಿಸಿರುವ ರಾಜ್ಯದ ರೈತರ ಖಾತೆಗೆ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರದ ಬರ ಪರಿಹಾರ ಮೊತ್ತ ಜಮಾ ಮಾಡುವಂತೆ ರೈತ ಹೋರಾಟ ಸಮಿತಿ ಸದಸ್ಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ರೈತರ ಹೋರಾಟ ಸಮಿತಿ ಗೌರವಾಧ್ಯಕ್ಷ ಮುರಿಗೆಪ್ಪ ಶೆಟ್ಟರ್, ಕಳೆದ ನೂರು ವರ್ಷಗಳಲ್ಲಿ ಹಿಂದೆಂದೂ ಕಂಡಿರದ ಭೀಕರ ಬರಗಾಲವನ್ನು ರಾಜ್ಯದ ಜನತೆ ಎದುರಿಸುತ್ತಿದ್ದಾರೆ. ರೈತರು ಬೆಳೆಯಿಲ್ಲದೇ ಕಂಗಾಲಾಗಿ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರ ಸರಕಾರ ಈಗಾಗಲೇ 3 ಸಾವಿರ ಕೋಟಿಗೂ ಅಧಿಕ ಬರಪರಿಹಾರ ಮೊತ್ತವನ್ನು ನೀಡಿದರೂ ಸಹ ರಾಜ್ಯ ಸರ್ಕಾರ ಮಾತ್ರ 2 ಸಾವಿರ ಪರಿಹಾರ ಹಾಕಿ, ಉಳಿದ ಹಣವನ್ನು ರೈತರ ಖಾತೆಗೆ ಜಮಾ ಮಾಡದೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.ಶಂಕರಗೌಡ ಪಾಟೀಲ ಮಾತನಾಡಿ, ಲೋಕಸಭೆ ಚುನಾವಣೆ, ಪೆನ್‌ಡ್ರೈವ್ ಹಗರಣದಲ್ಲಿ ಮುಳುಗಿರುವ ರಾಜ್ಯ ಸರಕಾರದ ನಾಯಕರಿಗೆ ರಾಜ್ಯದ ಜನರ ಬವಣೆ ತಿಳಿದಿದ್ದರೂ ಸಹ ಕಣ್ಣು ಮುಚ್ಚಿ ಕುಳಿತಿದ್ದಾರೆ. ರೈತರ ಹಾಗೂ ರಾಜ್ಯ ಜನರ ಹಿತ ಮರೆತಿರುವ ಇವರಿಂದ ನ್ಯಾಯ ಸಿಗಲು ಸಾಧ್ಯವೇ?, ಈಗಾಗಲೇ ಮಳೆ ಆರಂಭವಾಗಿದ್ದು ವಿಮೆ ಹಣವನ್ನಾದರೂ ಶೀಘ್ರದಲ್ಲಿ ರೈತರ ಖಾತೆಗೆ ಜಮಾ ಮಾಡಿದಲ್ಲಿ ರೈತರು ಬಿತ್ತನೆ ಕಾರ‍್ಯಕ್ಕೆ ಅನುಕೂಲವಾಗಲಿದೆ ಎಂದು ಅಲವತ್ತುಕೊಂಡರು.
ಈ ಸಂದರ್ಭದಲ್ಲಿ ಅರ್ಜುನಪ್ಪ ಲಮಾಣಿ, ನೀಲಗಿರಿಯಪ್ಪ ಕಾಕೋಳ ನಿಂಗಪ್ಪ ಮಾಗೋಡ, ಈರಪ್ಪ ಸಂಕಣ್ಣನವರ, ಪರಮೇಶಪ್ಪ ಗಡಿ ಗೋಳ, ಚಂದ್ರಪ್ಪ ಮಾಗೋಡ, ರುದ್ರಪ್ಪ ಹೊಸಮನಿ, ಸದಾನಂದ ಶಿರೂರ ಮಲಕಪ್ಪ ಸಂಕಣ್ಣನವರ, ಶಂಭು ಸುಣಗಾರ, ಬಸನಗೌಡ ತೋಟದ ಸೇರಿದಂತೆ ಹಲವು ಭಾಗವಹಿಸಿದ್ದರು.