ಸಾರಾಂಶ
ಕಳೆದ ಎರಡು ವರ್ಷಗಳಲ್ಲಿ ಕ್ವಿಂಟಲ್‌ಗೆ 10-13 ಸಾವಿರ ರು. ಇದ್ದ ಶುಂಠಿ ಬೆಲೆ ಪಾತಾಳಕ್ಕೆ ಕುಸಿದಿದೆ. ಕ್ವಿಂಟಲ್‌ಗೆ 800 ರು.ಗೆ ಕುಸಿದಿದೆ. ಸಾಲ ಮಾಡಿಕೊಂಡು ಬೇಸಾಯ ಮಾಡುತ್ತಿರುವ ರೈತರ ಸಂಕಷ್ಟ ಕೇಳುವವರು ಇಲ್ಲವಾಗಿದೆ. ಎಕರೆಗೆ 4 ರಿಂದ 5 ಲಕ್ಷ ರು. ಖರ್ಚು ಮಾಡಿ ಕೇವಲ 1 ರಿಂದ 2 ಲಕ್ಷ ರು. ಪಡೆಯಬೇಕಿದೆ. ಎಕರೆಗೆ ಕನಿಷ್ಠ 3 ಲಕ್ಷ ರು. ನಷ್ಟವಾಗುತ್ತಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸತತವಾಗಿ ಕುಸಿಯುತ್ತಿರುವ ಶುಂಠಿ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ರೈತ ಮುಖಂಡ ಗೋವಿಂದನಹಳ್ಳಿ ನ್ಯಾಯಬೆಲೆ ಸೋಮಣ್ಣ ತಿಳಿಸಿದರು.ಜಿಲ್ಲಾಧಿಕಾರಿ ಡಾ.ಕುಮಾರ ಅವರ ಕಚೇರಿಗೆ ರೈತರ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸಿ ಮಾತನಾಡಿ, ಶುಂಠಿ ಬೆಲೆ ಕುಸಿತದಿಂದ ರೈತರು ಅತಂತ್ರವಾಗಿದ್ದಾರೆ ಎಂದರು.
ಕಳೆದ ಎರಡು ವರ್ಷಗಳಲ್ಲಿ ಕ್ವಿಂಟಲ್‌ಗೆ 10-13 ಸಾವಿರ ರು. ಇದ್ದ ಶುಂಠಿ ಬೆಲೆ ಪಾತಾಳಕ್ಕೆ ಕುಸಿದಿದೆ. ಕ್ವಿಂಟಲ್‌ಗೆ 800 ರು.ಗೆ ಕುಸಿದಿದೆ. ಸಾಲ ಮಾಡಿಕೊಂಡು ಬೇಸಾಯ ಮಾಡುತ್ತಿರುವ ರೈತರ ಸಂಕಷ್ಟ ಕೇಳುವವರು ಇಲ್ಲವಾಗಿದೆ. ಎಕರೆಗೆ 4 ರಿಂದ 5 ಲಕ್ಷ ರು. ಖರ್ಚು ಮಾಡಿ ಕೇವಲ 1 ರಿಂದ 2 ಲಕ್ಷ ರು. ಪಡೆಯಬೇಕಿದೆ. ಎಕರೆಗೆ ಕನಿಷ್ಠ 3 ಲಕ್ಷ ರು. ನಷ್ಟವಾಗುತ್ತಿದೆ ಎಂದರು.ರೈತ ಸಂಕಷ್ಟದಲ್ಲಿದಾಗ ರಕ್ಷಿಸಲು ವಿವಿಧ ಯೋಜನೆಗಳಿವೆ. 2012-13ರಲ್ಲಿ ಅರಿಷಿಣ ಬೆಲೆ ಕುಸಿದಾಗ ಎಂಐಸಿ ಯೋಜನೆ ಜಾರಿ ಮಾಡಲಾಗಿದೆ. 2016-17ರಲ್ಲಿ ಅರುಣಾಚಲ ಪ್ರದೇಶದಲ್ಲಿ ಶುಂಠಿ ಬೆಲೆ ಕುಸಿತವಾದಾಗ ಅಲ್ಲಿನ ಸರ್ಕಾರ ಎಂಐಎಸ್ ಯೋಜನೆಯಡಿಯಲ್ಲಿ ಶುಂಠಿ ಖರೀದಿಸಿದೆ. ಮಿಜೋರಾಂನಲ್ಲಿ 2024ರಲ್ಲಿ ಕ್ವಿಂಟಲ್ ಶುಂಠಿಗೆ ಬೆಂಬಲ ಬೆಲೆಯಾಗಿ 5 ಸಾವಿರ ರು. ನೀಡಿದೆ ಎಂದರು.
ರಾಜ್ಯದ ರೈತರು ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವಾಗ ಸರ್ಕಾರ ಮಧ್ಯ ಪ್ರವೇಶ ಮಾಡಿ (ಎಂಐಎಸ್)ಅಡಿಯಲ್ಲಿ ಶುಂಠಿ ಖರೀದಿಸಿ ಕನಿಷ್ಠ ಕ್ವಿಂಟಲ್‌ಗೆ 7 ಸಾವಿರ ರು. ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಹಾಗೂ ಒತ್ತಾಯ ಮಾಡಿಲು ಜಿಲ್ಲಾಧಿಕಾರಿಗಳು ವಾಸ್ತವ ಸ್ಥಿತಿಯನ್ನು ಸರ್ಕಾರಕ್ಕೆ ತಿಳಿಸಬೇಕು ಎಂದರು.ಈ ವೇಳೆ ತಾಪಂ ಮಾಜಿ ಸದಸ್ಯ ಶ್ಯಾಮಣ್ಣ, ಮಾರ್ಗೋನಹಳ್ಳಿ ಸಿ.ದಯಾನಂದ, ಗೋವಿಂದ, ಆನೆಗೊಳ ಶಂಭುಗೌಡ ಮತ್ತಿತರರಿದ್ದರು.