ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡಲು ಆಗ್ರಹಿಸಿ ರೈತರಿಂದ ಮನವಿ ಸಲ್ಲಿಕೆ

| Published : Sep 11 2025, 12:03 AM IST

ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡಲು ಆಗ್ರಹಿಸಿ ರೈತರಿಂದ ಮನವಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಏತ ನೀರಾವರಿ ಬದಲು ರಾಜಕಾಲುವೆ ಒತ್ತುವರಿ ತೆರವುಗೊಳಿಸಿದಲ್ಲಿ ನೈಸರ್ಗಿಕ ಮಳೆ ನೀರನ್ನು ಕ್ರೋಢೀಕರಿಸಿ ಪ್ರತಿ ಜಿಲ್ಲೆಗೆ 40 ಟಿಎಂಸಿ ಮಳೆಯ ನೀರನ್ನು ಸಂಗ್ರಹಿಸಿದಂತಾಗುತ್ತದೆ. ರಾಜ್ಯದಲ್ಲಿ 1250 ಟಿಎಂಸಿ ನೀರನ್ನು ಮಳೆಯಿಂದಾಗಿ ಸಂಗ್ರಹಿಸಬಹುದು. ರಾಜ್ಯದ 40 ಲಕ್ಷ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಜಿಲ್ಲೆಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡಿ, ಕಬ್ಬಿನ ಹೆಚ್ಚುವರಿ ದರ ನಿಗದಿಪಡಿಸಲು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದವರು ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ನೂರಾರು ಕೆರೆಗಳಿದ್ದು ಕೆಲವು ಸ್ಥಳೀಯ ಬಲಾಢ್ಯರ ಒತ್ತುವರಿಯಿಂದ ಕೆರೆಗಳಿಗೆ ನೀರಿನ ಮೂಲ ನಿಂತು ಹೋಗಿದೆ. ಇದರಿಂದ ಅಂತರ್ಜಲ ಕುಸಿತವಾಗುತ್ತಿದೆ. ಸುಮಾರು 80 ವರ್ಷಗಳಿಂದ ಕೆರೆಗಳಲ್ಲಿ ಹೂಳು ತುಂಬಿ ಅಂತರ್ಜಲ ಕುಸಿತವಾಗಿದ್ದು, ಹೂಳು ತುಂಬಿದ ಕೆರೆಗಳ ಮಣ್ಣನ್ನು ಬೇಸಿಗೆಯಲ್ಲಿ ರೈತರ ಜಮೀನಿಗೆ ಉಚಿತವಾಗಿ ಸರಬರಾಜು ಮಾಡಿದಲ್ಲಿ ಕೃಷಿ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಇದರಿಂದ ಸರ್ಕಾರ ನೀಡುವ ಡಿಎಪಿ, ಯೂರಿಯಾ ಗೊಬ್ಬರವನ್ನು ರೈತರಿಗೆ ಉಚಿತವಾಗಿ ನೀಡಿದಂತಾಗುತ್ತದೆ ಎಂದರು.

ಏತ ನೀರಾವರಿ ಬದಲು ರಾಜಕಾಲುವೆ ಒತ್ತುವರಿ ತೆರವುಗೊಳಿಸಿದಲ್ಲಿ ನೈಸರ್ಗಿಕ ಮಳೆ ನೀರನ್ನು ಕ್ರೋಢೀಕರಿಸಿ ಪ್ರತಿ ಜಿಲ್ಲೆಗೆ 40 ಟಿಎಂಸಿ ಮಳೆಯ ನೀರನ್ನು ಸಂಗ್ರಹಿಸಿದಂತಾಗುತ್ತದೆ. ರಾಜ್ಯದಲ್ಲಿ 1250 ಟಿಎಂಸಿ ನೀರನ್ನು ಮಳೆಯಿಂದಾಗಿ ಸಂಗ್ರಹಿಸಬಹುದು. ರಾಜ್ಯದ 40 ಲಕ್ಷ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಅರಣ್ಯದ ಒಳಗೆ ಹಾಗೂ ಅಂಚಿನಲ್ಲಿ ಇರುವ ಕೆರೆಗಳ ಪುನರುಜ್ಜೀವನದಿಂದ ಕೆರೆಗಳಲ್ಲಿ ನೀರು ಸಂಗ್ರಹವಾಗಿ ಬೇಸಿಗೆಯಲ್ಲಿ ಪ್ರಾಣಿಗಳು ನಾಡಿಗೆ ಬರುವುದು ತಪ್ಪುತ್ತದೆ ಎಂದು ಹೇಳಿದರು.

ರಾಜ್ಯಾದ್ಯಂತ ಗ್ರಾಮೀಣ ಭಾಗದಲ್ಲಿ ಇರುವ ಕೆರೆಗಳಿಗೆ ಗ್ರಾಮಗಳ ಚರಂಡಿಯ ಗಲೀಜು ನೀರು ಹೋಗಿ ಜಾನುವಾರಗಳಿಗೆ ಕುಡಿಯಲು ಯೋಗ್ಯವಾಗಿಲ್ಲ. ಹೀಗಾಗಿ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಇದನ್ನು ಸರಿಪಡಿಸಬೇಕು. ಕೆರೆಗಳ ಅಭಿವೃದ್ಧಿಗೆ ಸರ್ಕಾರ ವಿಶೇಷವಾಗಿ ಹೆಚ್ಚು ಅನುದಾನ ನೀಡಲು ಯೋಜನೆ ರೂಪಿಸುವಂತೆ ಅವರು ಒತ್ತಾಯಿಸಿದರು.

ಜಿಲ್ಲೆಯ ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಟನ್‌ ಗೆ 3295 ರು. ನೀಡುತ್ತಿದ್ದು, ಕಬ್ಬು ಉತ್ಪಾದನೆ ವೆಚ್ಚಕ್ಕೆ ಸರಿಯಾಗಿಲ್ಲ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದು ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆಯಂತೆ ಎಸ್‌ಎಪಿ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.

ತೋಟಗಾರಿಕೆ ಇಲಾಖೆಯಿಂದ ಬಾಳೆ ಬೆಳೆಗಾರರಿಗೆ ಬರುತ್ತಿದ್ದ ಅನುದಾನ ಕಳೆದ ಒಂದು ವರ್ಷದಿಂದ ಬರುತ್ತಿಲ್ಲ, ಕೂಡಲೇ ಕ್ರಮ ಕೈಗೊಳ್ಳಬೇಕು. ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಿಂದ ಮೂರನೇ ದರ್ಜೆಯ ಬಾಳೆಕಾಯಿ ಮೈಸೂರು ಮಾರುಕಟ್ಟೆಗೆ ಬರುತ್ತಿತ್ತು. ಇದರಿಂದ ಸ್ಥಳೀಯ ರೈತರಿಗೆ ನಷ್ಟವಾಗುತ್ತಿದ್ದು, ಬೆಲೆ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ, ಬಾಳೆ ಬೆಳೆಗಾರರು, ವ್ಯಾಪಾರಸ್ಥರು, ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ನವೆಂಬರ್ ತಿಂಗಳ ಮೊದಲ ವಾರದಲ್ಲೇ ಭತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಮುಖಂಡರಾದ ಬರಡನಪುರ ನಾಗರಾಜ್, ವರಕೂಡು ನಾಗೇಶ್, ಲಕ್ಷ್ಮೀಪುರ ವೆಂಕಟೇಶ್, ಕುರುಬೂರು ಸಿದ್ದೇಶ್, ದೇವನೂರು ವಿಜಯೇಂದ್ರ, ಮಾರ್ಬಳ್ಳಿ ನೀಲಕಂಠಪ್ಪ, ಬನ್ನೂರು ಸೂರಿ, ಕಾಟೂರು ನಾಗೇಶ್, ಗಿರೀಶ್, ಸಾತಗಳ್ಳಿ ಬಸವರಾಜ, ದೇವನೂರು ಮಹದೇವಪ್ಪ, ಸತೀಶ್, ಕೂರ್ಗಳ್ಳಿ ರವಿಕುಮಾರ್, ಶಿವಪ್ರಸಾದ್, ರಂಗರಾಜು, ವಾಜಮಂಗಲ ಮಹದೇವು, ನಾಗೇಂದ್ರ, ಕಮಲಮ್ಮ, ವಿಜಯಮ್ಮ, ಪುಷ್ಪಾ ಮೊದಲಾದವರು ಇದ್ದರು.