ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸದ ಮುಂದೆ ಧರಣಿ ನಡೆಸುವುದರ ಜತೆಗೆ ಹುಬ್ಬಳ್ಳಿ ನಗರದಾದ್ಯಂತ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು.
ಹಳಿಯಾಳ: ಸ್ವಾಮಿನಾಥನ್ ಆಯೋಗದ ಸಮಗ್ರ ವರದಿಯ ಪ್ರಮುಖ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನಿಗದಿಪಡಿಸಬೇಕು ಹಾಗೂ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕೆಜಿಗೆ ಕನಿಷ್ಠ ₹60ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಸೆ. 29ರಂದು ಹುಬ್ಬಳ್ಳಿಯಲ್ಲಿ ಬೃಹತ್ ರೈತರ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಕರೆ ನೀಡಿದ್ದಾರೆ.
ಪಟ್ಟಣದ ಮರಾಠಾ ಭವನದಲ್ಲಿ ಶನಿವಾರ ನಡೆದ ತಾಲೂಕು ಕಬ್ಬು ಬೆಳೆಗಾರರ ಹಾಗೂ ರೈತರ ಸಭೆಯಲ್ಲಿ ಮಾತನಾಡಿದ ಅವರು ತಮ್ಮ ಮುಂದಿನ ಧರಣಿಯ ರೂಪುರೇಷೆಗಳನ್ನು ವಿವರಿಸಿದರು.ಈ ಹೋರಾಟದಲ್ಲಿ ದೇಶದ ವಿವಿಧ ಭಾಗಗಳಿಂದ 10 ಲಕ್ಷಕ್ಕೂ ಅಧಿಕ ರೈತರು ಭಾಗವಹಿಸುವ ನಿರೀಕ್ಷೆಯಿದೆ ಎಂದ ಅವರು, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ನಿವಾಸದ ಮುಂದೆ ಧರಣಿ ನಡೆಸುವುದರ ಜತೆಗೆ ಹುಬ್ಬಳ್ಳಿ ನಗರದಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಕೃಷಿಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ, ಔಷಧ, ಕೂಲಿ, ಯಂತ್ರೋಪಕರಣ, ಇಂಧನ ಸೇರಿದಂತೆ ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿದೆ. ಆದರೆ ರೈತರು ಬೆಳೆದ ಬೆಳೆಗೆ ಅದಕ್ಕೆ ಅನುಗುಣವಾದ ಲಾಭದಾಯಕ ಬೆಲೆ ಸಿಗುತ್ತಿಲ್ಲ. ರೈತನ ಉತ್ಪಾದನಾ ವೆಚ್ಚ ಮತ್ತು ಪರಿಶ್ರಮಕ್ಕೆ ನ್ಯಾಯ ದೊರಕಬೇಕಾದರೆ ಕೃಷಿ ಉತ್ಪನ್ನಗಳ ಬೆಲೆ ನಿಗದಿಯಲ್ಲಿ ವೈಜ್ಞಾನಿಕ ಮಾನದಂಡ ಅನುಸರಿಸಬೇಕಾಗಿದೆ ಎಂದು ಪೂಜಾರಿ ಪ್ರತಿಪಾದಿಸಿದರು.ರೈತ ಸಂಘಟನೆಗಳು ಸ್ವಾಮಿನಾಥನ್ ಆಯೋಗದ ಸಮಗ್ರ ಶಿಫಾರಸುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸುತ್ತಿದ್ದು, ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ, ರೈತರ ಆದಾಯ ಭದ್ರತೆ ಮತ್ತು ಕೃಷಿ ಕ್ಷೇತ್ರದ ದೀರ್ಘಕಾಲೀನ ರಕ್ಷಣೆಗೆ ಇನ್ನಷ್ಟು ಕ್ರಮಗಳು ಅಗತ್ಯವೆಂದು ಎಂದು ಪೂಜಾರಿ ಹೇಳಿದರು.
₹5,500 ನೀಡಲು ಆಗ್ರಹ: ಕಬ್ಬು ಬೆಳೆಗಾರರು ಎದುರಿಸುತ್ತಿರುವ ಉತ್ಪಾದನಾ ವೆಚ್ಚದ ಏರಿಕೆಯನ್ನು ಪರಿಗಣಿಸಿ ಪ್ರತಿ ಟನ್ ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಬೇಕು ಎಂಬುದು ರೈತ ಸಂಘದ ಪ್ರಮುಖ ಬೇಡಿಕೆಯಾಗಿದೆ. ಕಬ್ಬು ಬೆಳೆಯಲು ತಿಂಗಳುಗಟ್ಟಲೆ ಶ್ರಮಿಸುವ ರೈತರಿಗೆ ಉತ್ಪಾದನಾ ವೆಚ್ಚಕ್ಕೆ ಅನುಗುಣವಾದ ಬೆಲೆ ದೊರೆಯಬೇಕು. ರೈತರು ಸಾಲದ ಸುಳಿಗೆ ಸಿಲುಕದಂತೆ ಕೃಷಿಯನ್ನು ಲಾಭದಾಯಕವಾಗಿಸುವ ನೀತಿ ರೂಪಿಸಬೇಕೆಂದು ಪೂಜಾರಿ ಆಗ್ರಹಿಸಿದರು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿವಿಧ ರೈತ ಮುಖಂಡರು ರೈತರು, ತಮ್ಮ ಹಕ್ಕುಗಳು ಮತ್ತು ಕೃಷಿಯ ಭವಿಷ್ಯಕ್ಕಾಗಿ ಸಂಘಟಿತರಾಗಿ ಹೋರಾಟದಲ್ಲಿ ಭಾಗವಹಿಸಬೇಕು. ಸೆ. 29ರ ಹುಬ್ಬಳ್ಳಿ ಹೋರಾಟವನ್ನು ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಬೃಹತ್ ವೇದಿಕೆಯನ್ನಾಗಿಸಬೇಕು ಎಂದು ರೈತ ಮುಖಂಡರು ಕರೆ ನೀಡಿದರು.
ರೈತ ಮುಖಂಡರಾದ ಪ್ರಕಾಶ ನಾಯ್ಕ, ಕಿಶನ ನಂದಿ, ತಾಲೂಕಿನ ಕಬ್ಬು ಬೆಳೆಗಾರರ ಮುಖಂಡರಾದ ನಾಗೇಂದ್ರ ಜಿವೋಜಿ, ಸಂದೀಪಕುಮಾರ ಬೊಬಾಟಿ, ಶಂಕರ ಕಾಜಗಾರ, ಭರತೇಶ ಪಾಟೀಲ ಕೋಗಿಲಗೇರಿ ಹಾಗೂ ಸುರೇಶ ಶಿವಣ್ಣವರ ಹಾಗೂ ಇತರರು ಉಪಸ್ಥಿತರಿದ್ದರು.