ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಹಾಗೂ ಅರ್ಜಿದಾರರು ಉಪವಿಭಾಗಧಿಕಾರಿ ಗೂಟೂರು ಶಿವಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಇಲ್ಲಿನ ರೆವಿನ್ಯೂ ಅಧಿಕಾರಿಗಳಿಗೆ ಹಣ ನೀಡದಿದ್ದಕ್ಕೆ ಜಮೀನು ಮಂಜೂರಾತಿ ಕೋರಿ ಅಕ್ರಮ ಸಕ್ರಮ ಯೋಜನೆ ಅಡಿ ಸಲ್ಲಿಸಿದ್ದ 15ಕ್ಕೂ ಹೆಚ್ಚು ಮಂದಿ ದಲಿತ ಬಡಪಾಯಿಗಳ ಅರ್ಜಿಗಳನ್ನು ವಜಾಗೊಳಿಸಿ ಅನ್ಯಾಯವೆಸಗಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಹಾಗೂ ಅರ್ಜಿದಾರರು ಉಪವಿಭಾಗಧಿಕಾರಿ ಗೂಟೂರು ಶಿವಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಜಿಲ್ಲಾ ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ತಾಲೂಕು ಕಸಬಾ ಹೋಬಳಿ ಕಣಿವೇನಹಳ್ಳಿ ಮತ್ತು ಐವಾರಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಯ ನಾಗಮ್ಮ,ಗೌರಮ್ಮ, ಹಮಾಲಿ ನರಸಪ್ಪ, ಹನುಮಂತರಾಯಪ್ಪ, ಗೋವಿಂದಪ್ಪ,ರಾಮಕ್ಕ ಇವರು ಕಳೆದ 40ವರ್ಷಗಳಿಂದ ಸರ್ವೆ ನಂ.130ರಲ್ಲಿ ತಲಾ 2ಎಕರೆಯಂತೆ ಜಮೀನು ಉಳಿಮೆ ಮಾಡಿ ಅದರಲ್ಲಿ ಬಂದ ಫಸಲಿನಲ್ಲಿ ಜೀವನ ನಡೆಸುತ್ತಿದ್ದಾರೆ. ಇವರೆಲ್ಲಾ ಜಮೀನಿನ ಸ್ವಾಧೀನಾನುಭವದಲ್ಲಿದ್ದು, ಸಾಗುವಳಿ ಮಂಜೂರಾತಿ ಕೋರಿ ಸರ್ಕಾರದ ನಿಯಮನುಸಾರ ಬಗರ್ ಹುಕ್ಕಂನಲ್ಲಿ ಫಾರಂ ನಂ 50,53 ಮತ್ತು 57 ರ ಅಕ್ರಮ ಸಕ್ರಮ ಯೋಜನೆ ಅಡಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಗ್ರಾಮಲೆಕ್ಕಾಧಿಕಾರಿ ಹಾಗೂ ಸರ್ವೆಯರ್ ಇತರೆ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡದಿದ್ದಕ್ಕೆ ಅರ್ಜಿಗಳನ್ನು ವಜಾ ಮಾಡಿ ಅನ್ಯಾಯವೆಸಗಿದ್ದಾರೆ. ಇದೇ ಯೋಜನೆ ಅಡಿ ಅರ್ಜಿ ಸಲ್ಲಿಸಿ ಹಣ ನೀಡಿದ್ದ ಅಕ್ಕಪಕ್ಕದ ರೈತರಿಗೆ ಬಗರುಹುಕುಂನಲ್ಲಿ ಜಮೀನಿನ ಸಾಗುವಳಿ ಮಂಜೂರಾತಿ ಪತ್ರ ನೀಡಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ಯಾವುದೇ ನೋಟೀಸ್ ಅಥವಾ ಖುದ್ದು ಕರೆಯಿಸಿ ವಿಚಾರಣೆ ಮಾಡಿಲ್ಲ. ಹಣ ಹಾಗೂ ಗಣ್ಯ ವ್ಯಕ್ತಿಗಳ ತಾಳಕ್ಕೆ ಕುಣಿಯುವ ಈ ಅಧಿಕಾರಿಗಳು ಬಡವರ ಅರ್ಜಿಗಳನ್ನು ತಿರಸ್ಕಾರಿಸಿದ್ದಾರೆ. ಈ ಅನ್ಯಾಯದ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.ತಾಲೂಕಿನ ಐವಾರಹಳ್ಳಿ ಗ್ರಾಮದ ಸರ್ವೆ ನಂ 6ರಲ್ಲಿ ಶಾಂತಮ್ಮ, ತಿಪ್ಪಣ್ಣ, ಶೇಖರ್ ಇತರರು ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದು ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಹಾಗೂ ಸರ್ವೆಯರ್‌ಗಳಿಗೆ ಹಣ ಕೊಡದಿದ್ದಕ್ಕೆ ಜಮೀನು ಮಂಜೂರಾತಿ ಬಿಡುಗಡೆಗೆ ತಡೆಯೊಡ್ಡಿ ಅರ್ಜಿ ವಜಾಗೊಳಿಸುವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದರು.ಈ ಹಿನ್ನಲೆಯಲ್ಲಿ ಉಪವಿಭಾಗಧಿಕಾರಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ್ದೇವೆ. ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಿ ಜಮೀನು ಮುಂಜೂರು ಮಾಡಿಸಿಕೊಡಬೇಕೆಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಸಕಾರತ್ಮಕ ಸ್ಪಂಧನೆ ನೀಡಿದ ಎಸಿ ಇನ್ನೂ ವಾರದೊಳಗೆ ಸಮಸ್ಯೆ ನಿವಾರಿಸಿ ಅರ್ಜಿ ಸಲ್ಲಿಸಿದ ಬಡವರಿಗೆ ಜಮೀನು ಸಾಗುವಳಿ ಚೀಟಿ ವಿತರಿಸುವ ಭರವಸೆ ವ್ಯಕ್ತಪಡಿಸಿರುವುದಾಗಿ ಹೇಳಿದರು.
ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಶಿವು,ಜಿಲ್ಲಾ ಕಾರ್ಯದರ್ಶಿ ರಾಮಾಂಜಿನಪ್ಪ,ಪೂಜಾರಿ ಚಿತ್ತಯ್ಯ,ಸದಾಶಿವಪ್ಪ,ಗೋವಿಂದಪ್ಪ,ರಮೇಶ್ ಕುಮಾರ್ , ನಾಗರಾಜಪ್ಪ ಇತರರಿದ್ದರು.