ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸ್ತಾವನೆ ಪತ್ರ ಹಾಗೂ ಇ-ಸ್ವತ್ತು ಇಲ್ಲದ 11ಎ ಮತ್ತು 11ಬಿ ಅಸೆಸ್‌ಮೆಂಟ್‌ಗಳನ್ನು ರದ್ದುಪಡಿಸುವ ಸರ್ಕಾರದ ಆದೇಶ ಖಂಡಿಸಿ, ಅ. 7ರಂದು ಎನ್.ಆರ್.ಪುರ ತಾಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ನಿರ್ಧರಿಸಿದೆ.
ಅ. 7ರಂದು ಎನ್.ಆರ್.ಪುರ ತಾಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ
ಕನ್ನಡಪ್ರಭ ವಾರ್ತೆ ಕೊಪ್ಪಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸ್ತಾವನೆ ಪತ್ರ ಹಾಗೂ ಇ-ಸ್ವತ್ತು ಇಲ್ಲದ 11ಎ ಮತ್ತು 11ಬಿ ಅಸೆಸ್‌ಮೆಂಟ್‌ಗಳನ್ನು ರದ್ದುಪಡಿಸುವ ಸರ್ಕಾರದ ಆದೇಶ ಖಂಡಿಸಿ, ಅ. 7ರಂದು ಎನ್.ಆರ್.ಪುರ ತಾಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಲು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ನಿರ್ಧರಿಸಿದೆ.ಕೊಪ್ಪದ ರೈತ ಒಕ್ಕೂಟದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಗೌರವಾಧ್ಯಕ್ಷ ಶೆಟ್ಟಿಗದ್ದೆ ರಾಮಸ್ವಾಮಿ ಹಾಗೂ ಕಾರ್ಯಾಧ್ಯಕ್ಷ ಅದ್ದಡ ಸತೀಶ್, ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶ ಅವೈಜ್ಞಾನಿಕವಾಗಿದ್ದು, ಜನ ಸಾಮಾನ್ಯರಿಗೆ ತೊಂದರೆ ಉಂಟುಮಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಪಂ ವ್ಯಾಪ್ತಿಯಲ್ಲಿ ಹಲವು ದಶಕಗಳಿಂದ ಕಂದಾಯ ಪಾವತಿಸುತ್ತಿರುವ ಬಡ ಕುಟುಂಬಗಳು, ಗಿರಿಜನರು ಹಾಗೂ ಕೂಲಿ ಕಾರ್ಮಿಕರು ಈ ಆದೇಶದಿಂದ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆಶ್ರಯ, ಇಂದಿರಾ ಆವಾಸ್ ಮತ್ತು ಅಂಬೇಡ್ಕರ್ ವಸತಿ ಯೋಜನೆಗಳಡಿ ಮನೆ ನಿರ್ಮಿಸಿಕೊಂಡಿರುವವರ ಅಸೆಸ್‌ಮೆಂಟ್‌ಗಳು ರದ್ದಾದರೆ, ಅವರಿಗೆ ಸರ್ಕಾರಿ ಸೌಲಭ್ಯ ಪಡೆಯಲು ತೊಂದರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಪಂಚಾಯತ್‌ರಾಜ್ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸದಿರುವುದರಿಂದ ಗ್ರಾಮೀಣಾಭಿವೃದ್ಧಿ ಕುಂಠಿತಗೊಂಡಿದೆ ಎಂದು ಆರೋಪಿಸಿದ ಮುಖಂಡರು, ಅರಣ್ಯದಂಚಿನ ನಿವಾಸಿಗಳನ್ನು ಒಕ್ಕಲೆಬ್ಬಿಸಿ ಕಸ್ತೂರಿರಂಗನ್ ವರದಿ ಜಾರಿಗೊಳಿಸುವ ಉದ್ದೇಶ ಈ ಆದೇಶದ ಹಿಂದೆ ಇರಬಹುದೆಂಬ ಶಂಕೆಯನ್ನೂ ವ್ಯಕ್ತಪಡಿಸಿದರು. ಪಿಡಿಒ ಪರಿಶೀಲನೆ ಹಾಗೂ ಸಿಇಒ ಮೇಲ್ಮನವಿ ಪ್ರಕ್ರಿಯೆಗಳು ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗಲಿವೆ ಎಂದರು.ಸರ್ಕಾರ ಕೂಡಲೇ ಆದೇಶ ಹಿಂಪಡೆಯಬೇಕು. ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಅ. 7ರಂದು ನಡೆಯುವ ಪ್ರತಿಭಟನೆಗೆ ಎಲ್ಲ ರಾಜಕೀಯ ಪಕ್ಷಗಳು, ರೈತಪರ ಹಾಗೂ ಸಾರ್ವಜನಿಕ ಸಂಘಟನೆಗಳು ಪಕ್ಷಾತೀತವಾಗಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ರಾಘವೇಂದ್ರ ಹಂಚಿನಮನೆ, ಉಪಾಧ್ಯಕ್ಷರಾದ ಅನುಪ್ ನಾರ್ವೆ, ಜಯಂತ್, ಕಸಬಾ ಹೋಬಳಿ ಅಧ್ಯಕ್ಷ ಪ್ರದೀಪ್ ಹಾಗೂ ತಾಲೂಕು ಕಾರ್ಯದರ್ಶಿ ಪೂರ್ಣಚಂದ್ರ ಉಪಸ್ಥಿತರಿದ್ದರು.
