ಸೊಯಾಬಿನ್ ಖರೀದಿ ನೋಂದಣಿ ವಿಸ್ತರಣೆಗೆ ಆಗ್ರಹ

| Published : Oct 23 2024, 12:34 AM IST

ಸೊಯಾಬಿನ್ ಖರೀದಿ ನೋಂದಣಿ ವಿಸ್ತರಣೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಮಳೆ ಬೀಳುತ್ತಿರುವುದರಿಂದ ಸೊಯಾಬಿನ್ ರಾಶಿಗಳು ಮಂದಗತಿ ಯಲ್ಲಿ ನಡೆದಿವೆ. ಸಂಪೂರ್ಣವಾಗಿ ರಾಶಿಗಳು ಮುಗಿದಿಲ್ಲ. ಆದರೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ನಿಲ್ಲಿಸಿದ್ದಾರೆ. ಇದನ್ನು ಇನ್ನೂ ಒಂದು ತಿಂಗಳು ವಿಸ್ತರಣೆ ಮಾಡಬೇಕು ಎಂದು ರೈತಸಂಘ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಬೀದರ್

ಜಿಲ್ಲೆಯಲ್ಲಿ ಬಹಳಷ್ಟು ರೈತರು ಸೊಯಾಬಿನ್ ರಾಶಿಯಾಗದ ಕಾರಣ ನೋಂದಣಿ ಮಾಡಿಲ್ಲ. ಆದಕಾರಣ ಸೊಯಾಬಿನ್ ನೋಂದಣಿ ದಿನಾಂಕ ಇನ್ನೂ ಒಂದು ತಿಂಗಳವರೆಗೆ ವಿಸ್ತರಣೆ ಮಾಡಬೇಕು ಎಂದು ಜಿಲ್ಲಾ ರೈತ ಸಂಘ ಆಗ್ರಹಿಸಿದೆ.ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರೆದ ಮನವಿ ಜಿಲ್ಲಾಡಳಿತಕ್ಕೆ ಸಲ್ಲಿಸಿ ಜಿಲ್ಲೆಯಲ್ಲಿ ಮಳೆ ಬೀಳುತ್ತಿರುವುದರಿಂದ ಸೊಯಾಬಿನ್ ರಾಶಿಗಳು ಮಂದಗತಿ ಯಲ್ಲಿ ನಡೆದಿವೆ. ಸಂಪೂರ್ಣವಾಗಿ ರಾಶಿಗಳು ಮುಗಿದಿಲ್ಲ. ಆದರೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ನಿಲ್ಲಿಸಿದ್ದಾರೆ. ಇದನ್ನು ಇನ್ನೂ ಒಂದು ತಿಂಗಳು ವಿಸ್ತರಣೆ ಮಾಡಬೇಕು. ಉದ್ದಿನ ರಾಶಿ ಮಾಡುವ ಸಮಯದಲ್ಲಿ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಬಂದಿರುವುದರಿಂದ ಉದ್ದಿನ ಬೆಳೆ ನಾಶವಾಗಿದ್ದು, ಕೈಗೆ ಬಂದಂ ತಹ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ. ಆದ ಕಾರಣ ಸರ್ಕಾರದಿಂದ ಸರ್ವೆ ಮಾಡಿ, ಉದ್ದಿನ ಬೆಳೆ ಹಾನಿಯಾದಂತಹ ರೈತರಿಗೆ ಎಕರೆಗೆ 25 ಸಾವಿರ ರು. ಪರಿಹಾರ ಕೊಡಬೇಕು. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಇರುವುದರಿಂದ ತಮ್ಮ ನೇತೃತ್ವದಲ್ಲಿ ಜಿಲ್ಲೆಯ ಕಬ್ಬಿನ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ರೈತ ಸಂಘದ ಪದಾಧಿಕಾರಿಗಳ ಸಭೆ ಕರೆದು, ಪರಸ್ಪರ ಚರ್ಚೆ ಮಾಡಿ, ತಾವು ಮಧ್ಯಸ್ತಿಕೆ ವಹಿಸಿ, ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿನಲ್ಲಿ ಯೋಗ್ಯ ವಾದಂತಹ ಲಾಭದಾಯಕ ಕಬ್ಬಿಗೆ ಬೆಲೆ ಒದಗಿಸಿಕೊಡಬೇಕು ಹಾಗೂ ಬಿ.ಎಸ್.ಎಸ್.ಕೆ. ಕಾರ್ಖಾನೆ ಹಾಗೂ ಚಿಂಚೋಳಿಯ ಸಿದ್ದಶ್ರೀ ಕಾರ್ಖಾನೆ ಮುಚ್ಚಿರುವು ದರಿಂದ ಜಿಲ್ಲೆಯಲ್ಲಿ ಉಳಿದ ಕಾರ್ಖಾನೆಗೆ ಕಬ್ಬು ನುರಿಸಲು ಸಮಸ್ಯೆ ಆಗುತ್ತದೆ. ಆದಕಾರಣ ಜಿಲ್ಲೆಯ ಉಳಿದ ಕಾರ್ಖಾನೆಗಳು ಶೀಘ್ರದಲ್ಲಿ ಪ್ರಾರಂಭಿಸಲು ಆದೇಶ ಮಾಡಬೇಕು. ಬೀದರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ಮಾರಾಟ ಮಾಡಲು ತೆಗೆದುಕೊಂಡು ಹೋದಂತಹ ದವಸ-ಧಾನ್ಯಗಳಿಗೆ ಖಡಿ ಛನ್ನಿ ಹಾಗೂ ಅಡ್ಡ ಛನ್ನಿ ಹೀಗೆ ಎರಡೂ ಛನ್ನಿ ಮಾಡಿದರೂ ಕೂಡ ಪ್ರತಿ ಕ್ವಿಂಟಲ್‌ಗೆ 1.5 ಕೆ.ಜಿ. ಕಡತ ತೆಗೆದುಕೊಂಡು, ಶೇಕಡಾವಾರು 2 ರು. ನಗದದು ಹೆಸರಿನಲ್ಲಿ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೆಕಡಿವಾಣ ಹಾಕಿ, ರೈತರ ಹಿತ ಕಾಪಾಡಬೇಕು ಎಂದೂ ಅಲವತ್ತುಗೊಂಡಿದ್ದಾರೆ.

ರೈತರ ಎಲ್ಲಾ ಸಮಸ್ಯೆಗಳು ಅತೀ ಶೀಘ್ರದಲ್ಲಿ ಬಗೆಹರಿಸಿ, ರೈತರ ಹಿತ ಕಾಪಾಡಬೇಕು, ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕವು ಮನವಿಯಲ್ಲಿ ಎಚ್ಚರಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರಧಾನ.ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಶಂಕರೆಪ್ಪ ಪಾರಾ, ಶೇಷರಾವ ಕಣಜಿ, ಚಂದ್ರಶೇಖರ ಜಮಖಂಡಿ, ಸುವರ್ಣಾ ಬಳತೆ, ಮಹಾನಂದಾ ದೇಶಮುಖ, ಶೋಭಾವತಿ ಕಾರಭಾರಿ, ಸುಭಾಷ ರಗಟೆ, ಪ್ರವೀಣ ಕುಲಕರ್ಣಿ, ಬಾಬುರಾವ ಜೋಳದಾಬಕಾ, ರೇವಣಸಿದ್ದಪ್ಪ ಯರಬಾಗ, ನಾಗಯ್ಯಾ ಸ್ವಾಮಿ, ಪ್ರಕಾಶ ಬಾವಗೆ, ಶಿವಾನಂದ ಹುಡಗೆ, ಮಲ್ಲಿಕಾರ್ಜುನ ಚಕ್ಕಿ, ಸುಮಂತ ಗ್ರಾಮಲೆ, ಉಮಾಕಾಂತ ತೋರಣಾ, ಝರಣಪ್ಪ ದೇಶಮುಖ, ಧೂಳಪ್ಪಾ ಸೋರಳ್ಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬೆಳೆ ಹಾನಿ ಸಮಿಕ್ಷೆ ಮಾಡಿ

ಬೀದರ್ ಕೆ.ಎಂ.ಎಫ್.ನವರು ಜ.1 ರಿಂದ ಅ.1ರವರೆಗೆ ಅಂದರೆ 10 ತಿಂಗಳಲ್ಲಿ ರೈತರು ಕೆ.ಎಂ.ಎಫ್.ಗೆ ಮಾರಾಟ ಮಾಡುತ್ತಿರುವ ಹಾಲಿಗೆ ಪ್ರತಿ ಲೀಟರ್‌ಗೆ ಮೊದಲಿನ ದರಕ್ಕಿಂತ 7 ರು. ಕಡಿಮೆ ಮಾಡಿ, ರೈತರಿಗೆ ಅನ್ಯಾಯ ಮಾಡಿದ್ದಾರೆ. ಈ ವಿಷಯವನ್ನೂ ಗಂಭೀರವಾಗಿ ಪರಿಗಣಿಸಿ, ರೈತರಿಗೆ ಮೊದಲಿನ ದರಕ್ಕಿಂತ ಸರ್ಕಾರಿ 2 ರು. ಹೆಚ್ಚಿಗೆ ಕೊಡಿಸಬೇಕು. ಬೀದರ್ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ಬೆಳೆ ಹಾನಿಯಾಗಿ ರುವುದರಿಂದ ಸರಿಯಾಗಿ ಸಮೀಕ್ಷೆ ಮಾಡಿ, ಬೆಳೆ ವಿಮೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.