ಟನ್ ಕಬ್ಬಿಗೆ 4500 ರಿಂದ 5 ಸಾವಿರ ರು.ಗೆ ಹೆಚ್ಚಿಸಲು ರೈತ ಸಂಘ ಆಗ್ರಹ

| Published : Jul 10 2025, 12:46 AM IST

ಟನ್ ಕಬ್ಬಿಗೆ 4500 ರಿಂದ 5 ಸಾವಿರ ರು.ಗೆ ಹೆಚ್ಚಿಸಲು ರೈತ ಸಂಘ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೋಜನ್ ಘಟಕಗಳನ್ನು ಹೊಂದಿರುವ ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರ ನಿಗಧಿ ಪಡಿಸಿದ ಎಫ್.ಆರ್.ಪಿ ದರಕ್ಕಿಂತ ಹೆಚ್ಚು ಹಣವನ್ನು ರೈತರ ಪ್ರತಿ ಟನ್ ಕಬ್ಬಿಗೆ ನೀಡಬೇಕು. ಆದರೆ, ಹೇಮಗಿರಿ ಕಾರ್ಖಾನೆ ರೈತರಿಗೆ ಲಾಭಾಂಶದ ಅಲ್ಪ ಪಾಲನ್ನು ನೀಡುತ್ತಿಲ್ಲ. ಇದಕ್ಕೆ ಅಂಟಿಕೊಳ್ಳದೆ ಪ್ರತಿ ಟನ್ ಕಬ್ಬಿಗೆ 4500 ರಿಂದ 5 ಸಾವಿರ ರು. ಬೆಲೆ ನಿಗಧಿ ಪಡಿಸಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಮಾಕವಳ್ಳಿ ಹೇಮಗಿರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನ ಕಬ್ಬಿನ ದರವನ್ನು ಪ್ರತಿ ಟನ್ ಗೆ 3291 ರು. ನಿಗಧಿ ಪಡಿಸಿದ್ದು, ಇದನ್ನು ಕನಿಷ್ಠ 4500 ರಿಂದ 5 ಸಾವಿರ ರು. ವರೆಗೆ ಹೆಚ್ಚಿಸುವಂತೆ ತಾಲೂಕು ರೈತಸಂಘ ಆಗ್ರಹಿಸಿದೆ.

ಈ ಕುರಿತು ಲಿಖಿತ ಪತ್ರಿಕಾ ಹೇಳಿಕೆ ನೀಡಿರುವ ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಕಾರ್ಖಾನೆಯ ಹೆಸರು ಕಾಲ ಕಾಲಕ್ಕೆ ಬದಲಾದರೂ ಆಡಳಿತ ನೀತಿಯಲ್ಲಿ ಬದಲಾವಣೆಯಾಗಿಲ್ಲ. ಹೇಮಗಿರಿ ಕಾರ್ಖಾನೆ ಇದುವರೆಗೂ ಕೇಂದ್ರ ಸರ್ಕಾರ ನಿಗಧಿ ಪಡಿಸಿದ ಎಫ್.ಆರ್.ಪಿ ದರ ಮೀರಿ ರೈತರಿಗೆ ಬೆಲೆ ನಿಗಧಿ ಪಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಜನ್ ಘಟಕಗಳನ್ನು ಹೊಂದಿರುವ ಸಕ್ಕರೆ ಕಾರ್ಖಾನೆಗಳು ಕೇಂದ್ರ ಸರ್ಕಾರ ನಿಗಧಿ ಪಡಿಸಿದ ಎಫ್.ಆರ್.ಪಿ ದರಕ್ಕಿಂತ ಹೆಚ್ಚು ಹಣವನ್ನು ರೈತರ ಪ್ರತಿ ಟನ್ ಕಬ್ಬಿಗೆ ನೀಡಬೇಕು. ಆದರೆ, ಹೇಮಗಿರಿ ಕಾರ್ಖಾನೆ ರೈತರಿಗೆ ಲಾಭಾಂಶದ ಅಲ್ಪ ಪಾಲನ್ನು ನೀಡುತ್ತಿಲ್ಲ. ಇದಕ್ಕೆ ಅಂಟಿಕೊಳ್ಳದೆ ಪ್ರತಿ ಟನ್ ಕಬ್ಬಿಗೆ 4500 ರಿಂದ 5 ಸಾವಿರ ರು. ಬೆಲೆ ನಿಗಧಿ ಪಡಿಸುವಂತೆ ಆಗ್ರಹಿಸಿದ್ದಾರೆ.

ಕಬ್ಬು ಬೆಳೆಗಾರರು ರಸಗೊಬ್ಬರ, ಕೂಲಿ ಹೆಚ್ಚಳ, ಕಬ್ಬು ಕಟಾವು ಸೇರಿ ಕಬ್ಬು ಕೃಷಿ ಉತ್ಪನ್ನ ವೆಚ್ಚದಲ್ಲಿ ಭಾರಿ ಹೆಚ್ಚಳವಾಗಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಬ್ಬು ಬೆಳೆದ ರೈತ ಸಾಲಗಾರರಾದರೆ, ಕಬ್ಬು ಅರೆಯುವ ಕಾರ್ಖಾನೆಗಳ ಮಾಲೀಕರು ಶ್ರೀಮಂತರಾಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ವೈಜ್ಞಾನಿಕ ಬೆಲೆ ನಿಗಧಿ ಪಡಿಸುವಂತೆ ರೈತಸಂಘ ನಿರಂತರ ಹೋರಾಟ ನಡೆಸುತ್ತಿದ್ದರೂ ರೈತರ ಬಗ್ಗೆ ಕಿಂಚಿತ್ತೂ ಯೋಚಿಸುತ್ತಿಲ್ಲ. ಸಕ್ಕರೆ ಇಳುವರಿ ಪ್ರಮಾಣದಲ್ಲಿ ಹೆಚ್ಚಿದ್ದರೂ ಕಾರ್ಖಾನೆಗಳು ಕಡಿಮೆ ಇಳುವರಿ ತೋರಿಸಿ ರೈತರನ್ನು ವಂಚಿಸುತ್ತಿವೆ ಎಂದು ದೂರಿದ್ದಾರೆ.

ಸರ್ಕಾರ ತಕ್ಷಣ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಮತ್ತು ರೈತರ ಸಭೆ ಕರೆದು ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಮುಖಾಮುಖಿ ಚರ್ಚಿಸಬೇಕು. ಕಾರ್ಖಾನೆಗಳ ಸಕ್ಕರೆ ಇಳುವರಿ ರೈತರ ಸಮ್ಮುಖದಲ್ಲಿಯೇ ಪರಿಶೀಲಿಸಬೇಕು. ಕಬ್ಬು ಕಟಾವು ಮತ್ತು ಸಾಗಣಿಕೆ ಜವಾಬ್ದಾರಿಯನ್ನು ಸಕ್ಕರೆ ಕಾರ್ಖಾನೆಗಳೇ ನಿರ್ವಹಿಸುವಂತೆ ನೂತನ ಸಕ್ಕರೆ ನೀತಿ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.

ತಾಲೂಕಿನ ಹೇಮಗಿರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನ ಕಬ್ಬಿನ ದರವನ್ನು ಹೆಚ್ಚಿಸಬೇಕು. ಕಬ್ಬು ಕಟಾವು ಮತ್ತು ಸಾಗಣಿಕೆ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಇಲ್ಲಿದ್ದರೆ ಕಬ್ಬು ಬೆಳೆಗಾರರ ಹಿತ ರಕ್ಷಣೆಗಾಗಿ ರೈತಸಂಘ ಹೋರಾಟಕ್ಕಿಳಿಯಲಿದೆ ಎಂದು ಎಚ್ಚರಿಸಿದ್ದಾರೆ.