ಮೈಕ್ರೋಫೈನಾನ್ಸ್ ಕಿರುಕುಳ ತಪ್ಪಿಸುವಂತೆ ರೈತಸಂಘ ಆಗ್ರಹ

| Published : Jan 28 2025, 12:46 AM IST

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಒಳಗೆರೆ ಮೆಣಸ ಗ್ರಾಮದಲ್ಲಿಂದು ರೈತ ಯುವಕನೊಬ್ಬ ಖಾಸಗಿ ಸಾಲದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ತಾಲೂಕು ಆಡಳಿತದ ಬೇಜಾಬ್ದಾರಿ ನೀತಿಯೇ ಕಾರಣ. ತಾಲೂಕಿನಲ್ಲಿ ಯಾವ ಯಾವ ಮೈಕ್ರೋ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅವು ಸಾಲ ವಸೂಲಾತಿಗೆ ಅನುಸರಿಸುತ್ತಿರುವ ಕ್ರಮಗಳೇನು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಸಭೆ ಕರೆದು ಸಾಲಗಾರರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸುವಂತೆ ತಾಲೂಕು ರೈತಸಂಘ ಆಗ್ರಹಿಸಿದೆ.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಭೆ ನಡೆಸಿದ ರೈತಸಂಘದ ಕಾರ್ಯಕರ್ತರು ತಾಲೂಕು ಮಟ್ಟದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಅಧಿಕಾರಿಗಳ ಸಭೆ ಕರೆದು ಕಿರುಕುಳ ತಪ್ಪಿಸಲು ಕ್ರಮ ವಹಿಸುವಂತೆ ಆಗ್ರಹಿಸಿದರು.

ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ತಾಲೂಕಿನ ಒಳಗೆರೆ ಮೆಣಸ ಗ್ರಾಮದಲ್ಲಿಂದು ರೈತ ಯುವಕನೊಬ್ಬ ಖಾಸಗಿ ಸಾಲದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ತಾಲೂಕು ಆಡಳಿತದ ಬೇಜಾಬ್ದಾರಿ ನೀತಿಯೇ ಕಾರಣ. ತಾಲೂಕಿನಲ್ಲಿ ಯಾವ ಯಾವ ಮೈಕ್ರೋ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಅವು ಸಾಲ ವಸೂಲಾತಿಗೆ ಅನುಸರಿಸುತ್ತಿರುವ ಕ್ರಮಗಳೇನು. ಎಷ್ಟು ಪ್ರಮಾಣದ ಬಡ್ಡಿ ವಸೂಲಾಗುತ್ತಿದೆ ಎನ್ನುವ ಯಾವುದೇ ಮಾಹಿತಿ ಇಲ್ಲ. ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲೆ ನಿಗಾ ವಹಿಸಬೇಕಾದ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಆಗುತ್ತಿರುವ ಕಿರುಕುಳದ ಯಾವುದೇ ವಿವರ ಕಲೆ ಹಾಕಿ ಕ್ರಮ ವಹಿಸುತ್ತಿಲ್ಲ.

ತಕ್ಷಣವೇ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಉಪ ವಿಭಾಗಾಧಿಕಾರಿಗಳು, ಡಿ.ವೈ.ಎಸ್.ಪಿ, ತಹಸೀಲ್ದಾರ್ ಮತ್ತು ಸಹಕಾರ ಇಲಾಖೆಯ ಅಡಿಷನಲ್ ರಿಜಿಸ್ಟಾರ್ ಅವರ ಸಮ್ಮುಖದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಅಧಿಕಾರಿಗಳ ಸಬೆ ನಡೆಸಬೇಕು. ಸರ್ಕಾರಿ ನಿಯಮಗಳನ್ನು ಮೀರಿ ಅಧಿಕ ಬಡ್ಡಿ ವಸೂಲು ಮಾಡುತ್ತಿರುವ ಕಂಪನಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಲು ಕ್ರಮ ವಹಿಸುವಂತೆ ಒತ್ತಾಯಿಸಿದರು.

ನಬಾರ್ಡ್ ವಿರುದ್ಧ ಆಕ್ರೋಶ:

ನಬಾರ್ಡ್ ಸಾಲದ ಪ್ರಮಾಣವನ್ನು ಕಡಿತ ಮಾಡಿರುವುದರಿಂದ ರೈತರು ಅಧಿಕ ಬಡ್ಡಿ ತೆತ್ತು ಖಾಸಗಿಯವರಿಂದ ಮತ್ತು ವಾಣಿಜ್ಯ ಬ್ಯಾಂಕುಗಳ ಮೂಲಕ ಸಾಲ ಪಡೆಯಬೇಕಾಗಿದೆ. ಕೇಂದ್ರ ಸರ್ಕಾರದ ಹುನ್ನಾರವನ್ನು ಹಿಮ್ಮೆಟ್ಟಿಸಬೇಕು ಮತ್ತು ಸಹಕಾರಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಜ.೨೯ ರ ರಿಸರ್ವ್ ಮುತ್ತಿಗೆಯ ಮೂಲಕ ರಾಜ್ಯ ರೈತಸಂಘ ಹೋರಾಟವನ್ನು ಆರಂಭಿಸುತ್ತಿದೆ. ರೈತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ರಾಜ್ಯ ರೈತಸಂಘದ ಮುಖಂಡರಾದ ಎಂ.ವಿ.ರಾಜೇಗೌಡ, ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಖಂಡರಾದ ನಾಗೇಗೌಡ, ಕೃಷ್ನಾಪುರ ರಾಜಣ್ಣ, ನಾರಾಯಣಸ್ವಾಮಿ, ಕೇಶವಮೂರ್ತಿ, ಹಿರೀಕಳಲೆ ಬಸವರಾಜು, ನಗರೂರು ಕುಮಾರ್, ಕರೋಟಿ ತಮ್ಮಯ್ಯ, ಮರಡಹಳ್ಳಿ ರಾಮೇಗೌಡ, ಚೌಡೇನಹಳ್ಳಿ ಕೃಷ್ಣೇಗೌಡ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.