ಸಾರಾಂಶ
ರೈತರು ಉಳಿಸಿಕೊಂಡ ಗೃಹ ವಿದ್ಯುತ್ ಬಾಕಿ ಮನ್ನಾ ಮಾಡಿ, ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರೈತ ವಿರೋಧಿ ನೀತಿ ಕೈ ಬಿಡಬೇಕು ಹಾಗೂ ರೈತರ ಆತ್ಮಹತ್ಯೆ ತಡೆಗಟ್ಟಲು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ನೇತೃತ್ವದಲ್ಲಿ ರೈತ ಸಂಘದ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ರೈತರು, ಕೃಷಿ ಪಂಪ್ ಸೆಟ್ ವಿದ್ಯುತ್ ಸಂಪರ್ಕ ಪಡೆಯಲು ಸ್ವಂತ ವೆಚ್ಚವನ್ನು ರೈತರು ಭರಿಸಲು ಸಾಧ್ಯವಾಗುವುದಿಲ್ಲ, ಸರ್ಕಾರದ ಈ ತೀರ್ಮಾನ ರೈತರಿಗೆ ಹೊರೆಯಾಗಿದ್ದು, 2 - 3 ಲಕ್ಷ ರು. ದೊಡ್ಡ ಮೊತ್ತದ ವೆಚ್ಚವನ್ನು ರೈತರು ಭರಿಸಲು ಸಾಧ್ಯವಾಗುವುದಿಲ್ಲ. ಸರ್ಕಾರ ಈ ತೀರ್ಮಾನ ವಾಪಸ್ ಪಡೆದು ಹಿಂದಿನ ಪದ್ಧತಿ ಮುಂದುವರಿಸಬೇಕು ಇಲ್ಲದೆ ಹೋದರೆ ಕರ ನಿರಾಕರಣ ಚಳುವಳಿ ರೂಪಿಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರೈತರು ಉಳಿಸಿಕೊಂಡಿರುವ ಗೃಹ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಬೇಕು. ಕಳೆದ ವರ್ಷ ಏಪ್ರಿಲ್ ನಿಂದ ಇದುವರೆಗೆ 1182 ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ, ಈ ಆತ್ಮಹತ್ಯೆಗಳಲ್ಲಿ ಯುವಕರು ಹೆಚ್ಚು ಒಳಗಾಗಿರುವುದು ಆತಂಕ ವಿಷಯ ವಾಗಿದೆ. ಸರ್ಕಾರ ರೈತರ ಆತ್ಮಹತ್ಯೆ ತಡೆಗಟ್ಟಲು ರೈತ ಪರ ಕಾರ್ಯಕ್ರಮ ರೂಪಿಸಿ ರೈತ ಸಮುದಾಯಕ್ಕೆ ಆತ್ಮಸ್ಥೈರ್ಯ ತುಂಬಬೇಕು, ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಕೃಷಿ ಬೆಲೆ ಆಯೋಗವನ್ನು ಸಬಲೀಕರಣ ಗೊಳಿಸಿ, ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸಬೇಕು ಎಂದು ಆಗ್ರಹಿಸಿದ್ದಾರೆ.ಎಂದೆಂದೂ ಕಂಡರಿಯದ ಬರಗಾಲವನ್ನು ರಾಜ್ಯ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಇದನ್ನು ತಪ್ಪಿಸಲು ರೈತರ ರಕ್ಷಣೆಗೆ ಮುಂದಾಗಬೇಕು. ರೈತ ಹೋರಾಟಕ್ಕೆ ಸಂಬಂಧಿಸಿದ ಹಾಗೂ ರೈತರ ಮೇಲೆ ಹೂಡಲಾದ ಎಲ್ಲಾ ಮೊಕದ್ದಮೆಗಳನ್ನು ಬೇಷಾರತ್ತಾಗಿ ವಾಪಸ್ ಪಡೆಯಬೇಕು. ಕಾಡು ಪ್ರಾಣಿಗಳಿಂದ ಜೀವ ಹಾನಿಗೆ ಒಂದು ಕೋಟಿ ರು.ವರೆಗೂ ಪರಿಹಾರ ನೀಡಬೇಕು ಹಾಗೂ ಕಾಡುಪ್ರಾಣಿಗಳಿಂದ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ಭೂ ಸ್ವಾಧೀನ ಪುನರ್ ವಸತಿ ಕಾಯಿದೆ 2013ರಂತೆ ಭೂಮಿ ಪರಿಷ್ಕೃತ ದರ ಜಾರಿಗೊಳಿಸಬೇಕು. ವಿದ್ಯುತ್ ವಲಯದ ಖಾಸಗಿ ಮೀಟರ್ ಅಳವಡಿಸು ವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.
ರೈತರು ಮತ್ತು ಕೃಷಿ ಕಾರ್ಮಿಕರ ಸಮಗ್ರ ಸಾಲ ಮನ್ನಾ ಮಾಡಿ ಋಣಭಾರ ಮುಕ್ತಗೊಳಿಸಬೇಕು ಮತ್ತು ರೈತರ ಆತ್ಮಹತ್ಯೆ ತಡೆಗಟ್ಟಬೇಕು. ರೈತರ ಎಲ್ಲಾ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ವಿಸ್ತರಿಸಿ ಗ್ರಾಮ ಮಟ್ಟದಲ್ಲಿ ಬೆಳೆ ಹಾನಿ ನಿರ್ಧರಿಸಬೇಕು, ವಿಮಾ ಕಂಪನಿಗಳು ಉಳಿಸಿಕೊಂಡ ಬಾಕಿಯನ್ನು ರೈತರ ಖಾತೆಗೆ ಕೂಡಲೇ ಜಮಾ ಮಾಡಬೇಕು, ಫಸಲು ಪಹಣಿ ದುರಸ್ತಿ ಪಕ್ಕ ಪೋಡ್, ಹದ್ದುಬಸ್ತು ಶುಲ್ಕ ದುಬಾರಿಯಾಗಿದ್ದು ಅದನ್ನು ಕೂಡಲೇ ಇಳಿಸಬೇಕು, ರೈತರಿಂದ ಖರೀದಿ ಕೇಂದ್ರದ ಮೂಲಕ ಜೋಳ ರಾಗಿ ಕೊಬ್ಬರಿ ಇತ್ಯಾದಿ ಉತ್ಪನ್ನಗಳನ್ನು ಖರೀದಿ ಮಾಡಿದ್ದು ಇನ್ನೂ ರೈತರಿ ಹಣ ಪಾವತಿ ಆಗಿಲ್ಲ ಕೂಡಲೇ ಈ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಸರ್ಕಾರ ಕೊಟ್ಟ ಮಾತಿನಂತೆ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ಕೂಡಲೆ ಹಿಂಪಡೆಯಬೇಕು ಕಂದಾಯ ಬೀಳು, ಕ್ರಯದ ಬೀಳು, ರಿಸ್ಟೋರ್‌ಗೆ ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯಧಿಕ ಮಳೆ ಬಿದ್ದು ಬೆಳೆ, ಮನೆಗಳಿಗೆ ಹಾನಿಯಾಗಿದೆ. ಕೂಡಲೇ ಸಮೀಕ್ಷೆ ನಡೆಸಿ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸಿದ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಖಜಾಂಚಿ ಪರ್ವತೇಗೌಡ, ಗೌರವಾಧ್ಯಕ್ಷ ಮಲ್ಲುಂಡಪ್ಪ, ತಾಲೂಕು ಖಜಾಂಚಿ ಶಿವಣ್ಣ ಹಾಗೂ ಶಂಕರಪ್ಪ ಹಾಜರಿದ್ದರು. 18 ಕೆಸಿಕೆಎಂ 2ರೈತ ವಿರೋಧಿ ನೀತಿ ಕೈ ಬಿಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ಗುರುಶಾಂತಪ್ಪ ನೇತೃತ್ವದಲ್ಲಿ ರೈತ ಸಂಘದ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.