ಸಾರಾಂಶ
ಬಿಇಒ ಕಚೇರಿ ಮುಂಭಾಗ ಮಾನವ ಹಕ್ಕುಗಳ ಸಮಿತಿ ಸತ್ಯಾಗ್ರಹ । ಕ್ರಮ ಕೈಗೊಳ್ಳುವ ಭರವಸೆ
ಕನ್ನಡಪ್ರಭ ವಾರ್ತೆ ಭದ್ರಾವತಿಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿ ಕೆಲಸಕ್ಕೆ ನೇಮಿಸಿಕೊಂಡಿರುವವರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಯಿತು.
ನಗರದ ನ್ಯೂಟೌನ್ ಸೆಂಟ್ ಚಾರ್ಲ್ಸ್ ಹೈಸ್ಕೂಲ್‌ನಲ್ಲಿ ನೆಪಮಾತ್ರಕ್ಕೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡು ನಂತರ ಅವರನ್ನು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿರುವ ಜತೆಗೆ ಅವರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯದಿಂದ ವಂಚಿಸಲಾಗುತ್ತಿದೆ ಎಂದು ಆರೋಪಿಸಲಾಯಿತು.ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಸದಸ್ಯರಾದ ವಿನ್ನಿ ಡಿಸೋಜಾ ಕೋಂ ಲಿಗೋರಿಯಾ ಎಂಬುವರು ಕಳೆದ ೧೭ ವರ್ಷಗಳಿಂದ ಸೆಂಟ್ ಚಾರ್ಲ್ಸ್ ಹೈಸ್ಕೂಲ್ ಸಮ್ಮುಖದಲ್ಲಿರುವ ಕರುಣ ಸೇವಾ ಕೇಂದ್ರ ಮತ್ತು ಕರುಣ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಇವರ ಪಿಎಫ್ ಹಣ ಹೈಸ್ಕೂಲ್ ಮತ್ತು ಸೊಸೈಟಿ ಆಫ್‌ದ ಸಿಸ್ಟರ್ ಆಫ್ ಎಸ್‌ಟಿ ಚಾರ್ಲ್ಸ್ ಹೆಸರಿನಲ್ಲಿ ಶಿವಮೊಗ್ಗದ ಪಿಎಫ್ ಕಏರಿಯಲ್ಲಿರುವ ಖಾತೆಗೆ ಜಮಾ ಮಾಡಲಾಗಿದೆ. ಅಲ್ಲದೆ ಇವರ ವೇತನ ಪ್ರತಿ ತಿಂಗಳು ಇವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಕಳೆದ ೫ ವರ್ಷಗಳಿಂದ ಸಿಸ್ಟರ್ ಹೆಲೆನ್ ಮೊರಾಸ್‌ರವರು ಇವರಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದು, ಮೂಡುಬಿದರೆಯಲ್ಲಿರುವ ಇವರ ಸ್ವಂತ ಮನೆಯಲ್ಲಿ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದಾರೆ. ೧೦ ವರ್ಷಗಳವರೆಗೆ ನಿರಂತರವಾಗಿ ಪಿಎಫ್ ಹಣ ಪಾವತಿಸಿದರೆ ೬೦ ವರ್ಷಗಳ ನಂತರ ಪ್ರತಿ ತಿಂಗಳು ೨ ರಿಂದ ೩ ಸಾವಿರ ರು. ಪಿಂಚಣಿ ಬರುತ್ತದೆ ಎಂದು ಇವರ ಜತೆಗೆ ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೧೦ ರಿಂದ ೧೨ ಜನರನ್ನು ಸಹ ಅರ್ಧದಲ್ಲಿಯೇ ಕೆಲಸದಿಂದ ತೆಗೆದು ಹಾಕಿದ್ದಾರೆಂದು ದೂರಲಾಯಿತು.
ಈ ನಡುವೆ ವಿನ್ನಿ ಡಿಸೋಜಾರವರು ಸ್ಕೂಲ್ ಅಥವಾ ಸೇವಾ ಕೇಂದ್ರ ಅಥವಾ ಮಹಿಳಾ ಮಂಡಳಿಗಳ ಒಕ್ಕೂಟದಲ್ಲಿ ಯಾವುದೇ ಕೆಲಸ ನಿರ್ವಹಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಇವರಿಗೆ ಯಾವುದೇ ವೇತನವಾಗಲಿ, ಪಿಎಫ್ ಹಣವಾಗಲಿ ಪಾವತಿಸಿರುವುದಿಲ್ಲ ಎಂದು ಕ್ಷೇತ್ಶಿಕ್ಷಣಾಧಿಕಾರಿಗೆ ಸೆಂಟ್ ಚಾರ್ಲ್ಸ್ ಹೈಸ್ಕೂಲ್ ಸುಳ್ಳು ಮಾಹಿತಿ ನೀಡಿದೆ ಎಂದು ಸಮಿತಿ ಖಂಡಿಸಿತು.ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪಿಎಫ್ ಕಚೇರಿಯಿಂದ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದರು. ವಿನ್ನಿ ಡಿಸೋಜಾ, ಮೇರಿಯಮ್ಮ, ಗ್ರೇಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ, ಇತರರು ಪಾಲ್ಗೊಂಡಿದ್ದರು.