ಸಾರಾಂಶ
ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸೋಮವಾರ ತಹಸೀಲ್ದಾರಗೆ ಮನವಿ ಸಲ್ಲಿಸಿದರು.
ಬತ್ತ ಖರೀದಿ ಕೇಂದ್ರ ತೆರೆಯಲು ಅಗ್ರಹ
ಕನ್ನಡಪ್ರಭ ವಾರ್ತೆ ಕಾರಟಗಿ
ವಾರದ ಹಿಂದೆ ಸತತವಾಗಿ ಸುರಿದ ಮಳೆಯಿಂದ ಬತ್ತದ ಬೆಳೆ ನಾಶವಾಗಿದ್ದು, ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣ ಬೆಳೆ ಹಾನಿ ಪರಿಹಾರ ನೀಡಬೇಕು. ಕಾರಟಗಿಯಲ್ಲಿ ಬತ್ತ ಖರೀದಿ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸೋಮವಾರ ತಹಸೀಲ್ದಾರಗೆ ಮನವಿ ಸಲ್ಲಿಸಿದರು.ಸಂಘದ ರಾಜ್ಯ ಅಧ್ಯಕ್ಷ ಶರಣಪ್ಪ ಯರಡೋಣಿ ಮಾತನಾಡಿ, ಕಳೆದ ವರ್ಷವೂ ಅಕಾಲಿಕ ಮಳೆಯಿಂದಾಗಿ ರೈತರ ಬೆಳೆ ಹಾನಿಯಾಗಿತ್ತು. ಸಚಿವ ಶಿವರಾಜ ತಂಗಡಗಿ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿದ್ದರೂ ರೈತರಿಗೆ ಪರಿಹಾರ ದೊರೆಯಲಿಲ್ಲ. ಈಗ ಮತ್ತೊಮ್ಮೆ ಸಚಿವರು ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಸಚಿವರ ಭರವಸೆ ಈಡೇರಿದರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ. ಸಚಿವರು ಭರವಸೆ ನೀಡುತ್ತಾರೆ, ಆದರೆ ಅಧಿಕಾರಿಗಳು ಪರಿಹಾರ ನೀಡುವ ಕೆಲಸ ಮಾಡುವುದಿಲ್ಲ, ಇದು ರೈತರಿಗೆ ಸಮಸ್ಯೆಯಾಗುತ್ತದೆ. ರೈತರು ಬೆಳೆದ ಬತ್ತದ ಬೆಳೆಗೆ ಹೆಚ್ಚಿನ ಬೆಲೆ ಕಂಡುಕೊಳ್ಳುವ ನಿಟ್ಟಿನಲ್ಲಿ ತಕ್ಷಣ ಖರೀದಿ ಕೇಂದ್ರವನ್ನು ತೆರೆಯಬೇಕು ಮತ್ತು ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ನಾರಾಯಣ ಈಡಿಗರ, ಹನುಮಂತಪ್ಪ, ದೊಡ್ಡನಗೌಡ, ರಾಮನಗೌಡ, ಅಯ್ಯಪ್ಪ, ಮರಿಸ್ವಾಮಿ, ನಾಗರಾಜ ವೆಂಕಟಗಿರಿ, ಮಲ್ಲಪ್ಪ, ರಮೇಶ್ ಭಂಗಿ, ಭೀಮನಗೌಡ ಸೇರಿದಂತೆ ರೈತರು ಇದ್ದರು.