ಸಾರಾಂಶ
ಚಿಕ್ಕಮಗಳೂರು: ಮೂಡಿಗೆರೆ ತಾಲೂಕು ಬಿಳ್ಳೂರು ಕಾಫಿ ಬೆಳೆಗಾರ ಹಾಗೂ ರೈತ ಸಂಘದ ಮುಖಂಡ ಎಂ.ಎಂ. ಮಂಜುನಾಥ್ ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೋಮವಾರ ಏಕಾಂಗಿ ಪ್ರತಿಭಟನೆ ನಡೆಸಿದರು.ಕಾಫಿ ಕಣದಲ್ಲಿ ಕಾಫಿಬೀಜಗಳನ್ನು ಒಣಗಿಸುವ ಸಂದರ್ಭದಲ್ಲಿ ಕೆಲವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಹಲ್ಲೆ ನಡೆಸಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ದೂರಿದ ಅವರು, ತಮ್ಮ ತೋಟದ ಅಕ್ಕಪಕ್ಕದ ಜಮೀನು ವಿವಾದ ನ್ಯಾಯಾಲಯದಲ್ಲಿದ್ದು ತೀರ್ಪು ತಮ್ಮ ಪರವಾಗುತ್ತದೆ ಎಂಬ ಆಲೋಚನೆಯಿಂದ ನ್ಯಾಯಾಲಯದಲ್ಲಿನ ಪ್ರಕರಣ ಹಿಂಪಡೆಯು ವಂತೆ ತಮ್ಮನ್ನು ಹೆದರಿಸುವ ಉದ್ದೇಶದಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದರು.ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಖ್ಯ ಆರೋಪಿ ಕೈಬಿಟ್ಟು ಇತರರ ಮೇಲೆ ಬೇಕಾಬಿಟ್ಟಿ ಪ್ರಕರಣ ದಾಖಲಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣದ ಸಂಬಂಧ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಏಕಾಂಗಿ ಪ್ರತಿಭಟನೆ ನಡೆಸಿದ ಎಂ.ಎಂ.ಮಂಜುನಾಥ್ ಅವರಿಗೆ ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್, ಮುಖಂಡರಾದ ಪುಟ್ಟಸ್ವಾಮಿ, ಲಕ್ಷ್ಮಣಗೌಡ, ಚಂದ್ರಶೇಖರ್, ಉದ್ದೇಗೌಡ, ಬಸವರಾಜ್, ಲೋಲೇಶ್ ಮತ್ತು ನಾರಾಯಣ ಸಾಥ್ ನೀಡಿದರು.