ವಕ್ಫ್ ಬೋರ್ಡ್ ವಿರುದ್ಧ ರೈತಸಂಘ ಪ್ರತಿಭಟನೆ

| Published : Nov 09 2024, 01:08 AM IST / Updated: Nov 09 2024, 01:09 AM IST

ಸಾರಾಂಶ

ರೈತಪರ ಎನ್ನುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ರಾತ್ರೋ ರಾತ್ರಿ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸಲಾಗಿದೆ. ಸಚಿವ ಜಮೀರ್‌ ಅಹಮದ್ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೂಚನೆ ಮೇರೆಗೆ ವಕ್ಫ್ ಆಸ್ತಿ ಘೋಷಿಸಲಾಗುತ್ತಿದೆ. ರಾಜ್ಯದಲ್ಲಿ ರೈತರು, ಹಿಂದೂಗಳು ಮತ್ತು ದೇವಾಲಯಗಳಿಗೆ ಸೇರಿದ ಜಮೀನನ್ನು ವಕ್ಫ್ ಬೋರ್ಡ್‌ ತನ್ನ ಆಸ್ತಿ ಎಂದು ಕಬಳಿಸುವ ಹುನ್ನಾರಕ್ಕೆ ಮುಂದಾಗಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ರಾಜ್ಯದಲ್ಲಿ ರೈತರು, ಹಿಂದೂಗಳು ಮತ್ತು ದೇವಾಲಯಗಳಿಗೆ ಸೇರಿದ ಜಮೀನನ್ನು ವಕ್ಫ್ ಬೋರ್ಡ್‌ ತನ್ನ ಆಸ್ತಿ ಎಂದು ಕಬಳಿಸುವ ಹುನ್ನಾರಕ್ಕೆ ಮುಂದಾಗಿರುವುದನ್ನು ಖಂಡಿಸಿ ತಾಲೂಕು ಬಿಜೆಪಿ ಘಟಕ, ರೈತ ಸಂಘ ಹಾಗೂ ಹಿಂದೂ ಪರ ಸಂಘಟನೆಗಳಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಕಾರರು ಪಟ್ಟಣದ ಆಂಜನೇಯಸ್ವಾಮಿ ದೇವಾಲಯದಿಂದ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರ ಮತ್ತು ವಕ್ಫ್ ಬೋರ್ಡ್‌, ಸಚಿವ ಜಮೀರ್ ಅಹಮದ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭಾ ಮಾಜಿ ನಾಮನಿರ್ದೇಶನ ಸದಸ್ಯ ಹಾಗೂ ಹಿಂದೂಪರ ಸಂಘಟನೆ ಮುಖಂಡ ಧರಣಿ ನಾಗೇಶ್ ಮಾತನಾಡಿ, ರೈತಪರ ಎನ್ನುವ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ರಾತ್ರೋ ರಾತ್ರಿ ರೈತರ ಭೂಮಿಯ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸಲಾಗಿದೆ. ಸಚಿವ ಜಮೀರ್‌ ಅಹಮದ್ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೂಚನೆ ಮೇರೆಗೆ ವಕ್ಫ್ ಆಸ್ತಿ ಘೋಷಿಸಲಾಗುತ್ತಿದೆ. ಕೂಡಲೇ ಸರ್ಕಾರವನ್ನು ಕಿತ್ತೊಗೆಯುವ ಮಾಡಬೇಕೆಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಂಬಿಹಳ್ಳಿ ಮಾತನಾಡಿ, ತಮಿಳುನಾಡಿನಲ್ಲಿ 1700 ವರ್ಷಗಳಷ್ಟು ಹಳೆಯದಾದ ದೇವಾಲಯದ ಜಮೀನು ವಕ್ಫ್ ಬೋರ್ಡ್ ಆಸ್ತಿ ಎಂದು ಕಬಳಿಸಲು ಹುನ್ನಾರ ನಡೆಸಲಾಗಿದೆ. ನಮ್ಮ ರಾಜ್ಯದ ವಿಜಯಪುರ ಜಿಲ್ಲೆಯ ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ ಅಲ್ಲಿನ ಆಸ್ತಿ ಎಂದು ನಮೂದಿಸಿ ಜಿಲ್ಲಾಡಳಿತ ನೋಟಿಸ್ ನೀಡಿರುವುದು ಖಂಡನಾರ್ಹ. ಇದರ ವಿರುದ್ಧ ಸಿಡಿದೇಳದಿದ್ದರೇ ಇಡೀ ದೇಶವೇ ವಕ್ಫ್ ಆಸ್ತಿ ಎನ್ನುವ ದಿನಗಳು ದೂರವಿಲ್ಲ. ಇದಕ್ಕೆ ಕಾರಣಿಕರ್ತರಾಗಿರುವ ಕಾಂಗ್ರೆಸ್ ಸರ್ಕಾರ ನಮ್ಮ ರೈತರನ್ನು ಮಾರಲು ಹೊರಟಿದೆ. ಈ ಕೂಡಲೇ ಈ ಎಲ್ಲಾ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಚನ್ನರಾಯಪಟ್ಟಣ ತಾಲೂಕಿನ ಕೆರೆ ಚಿಕ್ಕೇನಹಳ್ಳಿ ಗ್ರಾಮ ವ್ಯಾಪ್ತಿಯ ಸರ್ವೆ ನಂ. 19ರಲ್ಲಿನ 1.17 ಎಕರೆ ಭೂಮಿ ವಕ್ಫ್ ಬೋರ್ಡ್‌ ಎಂಬುದಾಗಿ ಋಣಭಾರ ಕಾಲಂನಲ್ಲಿ ನಮೂದಾಗಿದೆ. ಈ ಕೂಡಲೇ ಇದನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್‌ ನವೀನ್ ಕುಮಾರ್‌ಗೆ ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ, ಜಿಲ್ಲಾಧ್ಯಕ್ಷ ಮೀಸೆ ಮಂಜಣ್ಣ, ತಾಲೂಕು ಅಧ್ಯಕ್ಷ ಕುಮಾರ್, ಮಹಿಳಾ ಅಧ್ಯಕ್ಷೆ ನಾಗರತ್ನ, ಕೆರೆಬೀದಿ ಜಗದೀಶ್, ಭಾಸ್ಕರಚಾರ್‌, ಓಬಳಾಪುರ ರಂಗೇಗೌಡ, ಗಂಗಾಧರ್, ಗಜಾನನ ಮನೋಹರ್‌, ನಂಜುಂಡಮೈಮ್, ರಾಜಣ್ಣ, ಹರ್ಷವರ್ಧನ್, ರಾಘು, ರಂಗಣ್ಣ, ವಿಶ್ವನಾಥ್, ದುಷ್ಯಂತ್ ಇತರರು ಇದ್ದರು.

* ಹೇಳಿಕೆ- 1

ರೈತರ ಪೌತಿ ಖಾತೆಯನ್ನು ತಿಂಗಳಾದರೂ ಮಾಡದ ಅಧಿಕಾರಿಗಳು ಒಂದು ರಾತ್ರಿಯಲ್ಲಿ ಪಹಣಿಯನ್ನು ವಕ್ಫ್‌ಗೆ ಹಸ್ತಾಂತರಿಸುತ್ತಾರೆ. ಇದಕ್ಕೆಲ್ಲಾ ಸರ್ಕಾರದ ಕುಮ್ಮಕ್ಕು ಕಾರಣವಾಗಿದೆ. ರೈತರ ಹಿತ ಕಾಯುವ ನೈತಿಕತೆ ಇಲ್ಲದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತ ಮಾಡಲು ಅನರ್ಹ.

- ಧರಣಿ ನಾಗೇಶ್, ಹಿಂದೂಪರ ಸಂಘಟನೆ ಮುಖಂಡ