ಸಾರಾಂಶ
ಬ್ಯಾಡಗಿ: ಬರ ಪರಿಹಾರ ಹಣ ಬಿಡುಗಡೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸಾವಿರಾರು ರೈತರು ಸೋಮವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರಲ್ಲದೇ ತಹಸೀಲ್ದಾರ್ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿ ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಚಾವಡಿ ರಸ್ತೆ, ಹಳೇ ಪುರಸಭೆ, ಮುಖ್ಯರಸ್ತೆ, ಸ್ಟೇಷನ್ ರಸ್ತೆಗಳಲ್ಲಿ ಸಂಚರಿಸಿ ಬಳಿಕ ತಹಸೀಲ್ದಾರ್ ಕಚೇರಿಯನ್ನು ತಲುಪಿತು. ಮೆರವಣಿಗೆಯುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರಲ್ಲದೇ ಬಳಿಕ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು.ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಕಳೆದ ವರ್ಷ ಅತೀವೃಷ್ಟಿ (ಹಸಿಬರಗಾಲ) ಪ್ರಸಕ್ತ ವರ್ಷ ಅನಾವೃಷ್ಟಿಗೆ ಬಿತ್ತಿದ ಬೆಳೆ ಕೈಗೆ ಬರದಂತಾಗಿದ್ದು, ರೈತ ಕುಲವೇ ಸಂಕಷ್ಟದಲ್ಲಿ ಸಿಲುಕಿದೆ. ನಿರಂತರ ಹೋರಾಟದ ಬಳಿಕ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದ ರಾಜ್ಯ ಸರ್ಕಾರ ಪರಿಹಾರ ನೀಡದೇ ಮುಖ್ಯಮಂತ್ರಿ ಆದಿಯಾಗಿ ಸಂಪುಟದ ಸಚಿವರು ಬೊಗಳೆ ಬಿಡುತ್ತಿದ್ದಾರೆ. ಹೀಗಾಗಿ ಕೇವಲ ಘೋಷಣೆಗಷ್ಟೇ ಸೀಮಿತವಾಗಿದ್ದು ಕೂಡಲೇ ಎಸ್‌ಡಿಆರ್‌ಎಫ್ ಹಣ ಪ್ರತಿ ಎಕರೆಗೆ 3400 ರು. ಗಳನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.
ಭಾಗ್ಯವಲ್ಲ ಇದು ನಮ್ಮ ಹಕ್ಕು:ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ರಾಜ್ಯ ಸರ್ಕಾರ ಎಸ್.ಡಿ.ಆರ್.ಎಫ್. ನಿಯಮದಡಿ ಪರಿಹಾರ ಘೋಷಣೆ ಮಾಡದೇ ಕಾಟಾಚಾರಕ್ಕೆ ರೈತರಿಗೆ ರು.2 ಸಾವಿರ ಪರಿಹಾರ ನೀಡಿ ಕೈತೊಳೆದುಕೊಂಡಿದೆ, ನಿಯಮದಂತೆ 2 ಹೆಕ್ಟೇರ್‌ಗೆ (5 ಎಕರೆಗೆ ಮೀರದಂತೆ) ಒಟ್ಟು ರು. 34 ಸಾವಿರ ಹಣ ರೈತರಿಗೆ ಬರಬೇಕು, ಸರ್ಕಾರ ನೀಡುವ ಪರಿಹಾರ ಯಾವುದೇ ಬಿಟ್ಟಿ ಭಾಗ್ಯವಲ್ಲ, ಇದು ನಮ್ಮ ಹಕ್ಕು ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.ರೈತರ ಪರ ಮಾತನಾಡುವವರಿಲ್ಲ:ರುದ್ರಗೌಡ ಕಾಡನಗೌಡ್ರ ಮಾತನಾಡಿ, ರೈತರನ್ನು ಅತ್ಯಂತ ಗೌರವಯುತವಾಗಿ ನಡೆಸಿ ಕೊಳ್ಳಬೇಕಾಗಿದ್ದ ಸರ್ಕಾರಗಳು ನಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ, ಹೋರಾಟದಿಂದಲೇ ತಮಗೆ ಬೇಕಾ ದ್ದನ್ನು ಪಡೆದುಕೊಳ್ಳಲಿ ಎಂಬ ಮನಸ್ಥಿತಿಯಿಂದ ಸರ್ಕಾರಗಳು ಹೊರ ಬರದಿದ್ದರೇ ಮುಂಬರುವ ದಿನಗಳಲ್ಲಿ ರಾಜಕಾರಣಿಗಳನ್ನು ನಿದ್ದೆ ಮಾಡಲು ಬಿಡುವುದಿಲ್ಲ ಎಂದರು.
ರೈತರ ಮನವಿಯನ್ನು ಸ್ವೀಕರಿಸಿದ ತಹಸೀಲ್ದಾರ್ ರವಿ ಕೊರವರ ತಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸುವ ಭರವಸೆ ನೀಡಿದರು.2500 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ: ಬರ ಪರಿಹಾರಕ್ಕೆ ರೈತರು ಅರ್ಜಿ ಸಲ್ಲಿಸಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆಯಿಂದ ಆಕ್ರೋಶಗೊಂಡ ರೈತರು ಸುಮಾರು 2500 ರೈತರು ಸ್ಥಳದಲ್ಲೇ ಅರ್ಜಿಗಳನ್ನು ಸಲ್ಲಿಸಿದರು, ಇದರಿಂದ ಕೆಲಕಾಲ ನೂಕು ನುಗ್ಗಲು ಉಂಟಾಯಿತು. ಸಿಪಿಐ ಮಹಾಂತೇಶ ಲಂಬಿ, ಪಿಎಸ್‌ಐ ಅರವಿಂದ ಹಾಗೂ ಇನ್ನಿತರ ಸಿಬ್ಬಂದಿಗಳು ಸರತಿಯಲ್ಲಿ ನಿಲ್ಲಿಸುವ ಮೂಲಕ ಯಾವುದೇ ಗೊಂದಲಗಳಾಗದಂತೆ ನೋಡಿಕೊಂಡರು.
ಈ ವೇಳೆ ರೈತ ಮುಖಂಡರಾದ ಕಿರಣ ಗಡಿಗೋಳ, ಮೌನೇಶ ಕಮ್ಮಾರ, ಚಿಕ್ಕಪ್ಪ ಛತ್ರದ, ಜಾನ್ ಪುನೀತ್, ಪ್ರವೀಣ ಹೊ ಸಗೌಡ್ರ, ಶೇಖಪ್ಪ ಕಾಶಿ, ಮಲ್ಲೇಶಪ್ಪ ಡಂಬಳ, ಪ್ರವೀಣ ಬೆನ್ನೂರ, ದಾನಪ್ಪ ಬಳ್ಳಾರಿ,ಪ್ರಕಾಶ ಸಿದ್ದಪ್ಪನವರ, ಶಂಕರ ಮರಗಲ, ಸಿದ್ಧಲಿಂಗಪ್ಪ ಬಳ್ಳಾರಿ, ಜಗದೀಶ ಬಳ್ಳಾರಿ, ನಂಜುಂಡಸ್ವಾಮಿ ಹಾವೇರಿಮಠ ಸೇರಿದಂತೆ ಹಲವರು ಭಾಗವಹಿಸಿದ್ದರು.