ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋಧಿಸಿ ರೈತ ಸಂಘ ಧರಣಿ

| Published : May 16 2025, 02:11 AM IST

ಸಾರಾಂಶ

ಕೊಳ್ಳೇಗಾಲದ ಚೆಸ್ಕಾಂ ಕಚೇರಿಯ ಅಧಿಕಾರಿಗಳಿಗೆ ವಿದ್ಯುತ್ ಕ್ಷೇತ್ರ ಖಾಸಗೀಕರಣದ ಕ್ರಮ ಖಂಡಿಸಿ ಗುರುವಾರ ರೈತರು ಮನವಿ ಸಲ್ಲಿಸಿದರು.

ಕೊಳ್ಳೇಗಾಲ: ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರೋಧಿಸಿ ರಾಜ್ಯ ರೈತ ಸಂಘದ ವತಿಯಿಂದ ಗುರುವಾರ ಚೆಸ್ಕಾಂ ಇಲಾಖೆಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ಚೆಸ್ಕಾಂ ಕಚೇರಿಗೆ ಜಮಾಯಿಸಿದ ರೈತ ಮುಖಂಡರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಖಾಸಗಿಕರಣದ ನಿಲುವನ್ನು ಖಂಡಿಸಿದರು. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಸೇರಿದಂತೆ ಡಿಜಿಟಲ್‌ ಮೀಟರ್ ಅಳವಡಿಕೆಯನ್ನು ಕೈ ಬಿಡಬೇಕು. ಕೃಷಿ ಪಂಪ್ ಸೆಟ್‌ಗಳಿಗೆ ಅಧಾರ್ ಜೋಡಣೆ ಮಾಡುವ ಸರ್ಕಾರದ ಕ್ರಮ ಕೈ ಬೀಡಬೇಕು. ಸರ್ಕಾರ ಅಕ್ರಮ ಸಕ್ರಮ ಯೋಜನೆಯಡಿ ರೈತರಿಗೆ ವಿದ್ಯುತ್ ಪರಿಕರ ಒದಗಿಸಬೇಕು. ತೋಟದ ಜಮೀನಿನಲ್ಲಿ ವಾಸಿಸುವ ರೈತ ಕುಟುಂಬಗಳಿಗೆ ವಿದ್ಯಾರ್ಥಿಗಳು ಓದುವ ಉದ್ದೇಶದ ಹಿನ್ನೆಲೆಯಲ್ಲಿ ನಿರಂತರ ವಿದ್ಯುತ್ ಒದಗಿಸಬೇಕು. ರೈತರಿಗೆ ಸರ್ಕಾರದ ಆದೇಶದಂತೆ ಸತತ 7 ಗಂಟೆ ವಿದ್ಯುತ್ ನೀಡಬೇಕು. ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿದ ಚೆಸ್ಕಾಂ ಇಲಾಖೆಯ ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರ್ ಗಾನವಿ ಮಾತನಾಡಿ, ನಿಮ್ಮ ಮನವಿಯನ್ನು ನಮ್ಮ ಮೇಲಧಿಕಾರಿಗಳಿಗೆ ನೀಡುವ ಮೂಲಕ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ರಾಮಕೃಷ್ಣ, ಅಣಗಳ್ಳಿ ದಶರಥ, ಸೋಮಣ್ಣ, ತೇರಂಬಳ್ಳಿ ಮೂರ್ತಿ, ರಾಜಣ್ಣ, ಸರಗೂರು ವೀರಭದ್ರಸ್ವಾಮಿ, ಮಹದೇವ, ನಂಜುಂಡಸ್ವಾಮಿ, ವಾಸು, ಹಿತ್ತಲದೊಡ್ಡಿ ನಾಗರಾಜು, ವಸಂತ್ ಕುಮಾರ್, ವೀರಭದ್ರಪ್ಪ, ಸದಾಶಿವ, ಚಂದ್ರಶೇಖರ್, ಜಗದೀಶ್ ಸೋಮಣ್ಣ, ಷಣ್ಮುಖ ಸ್ವಾಮಿ ಇನ್ನಿತರರಿದ್ದರು.