ಸಾರಾಂಶ
ತಹಸೀಲ್ದಾರ್ ಸಂತೋಷ ಹಿರೇಮಠ ಅವರನ್ನು ದಿಢೀರ್ ವರ್ಗಾವಣೆ ಮಾಡಿರುವುದನ್ನು ಸರಕಾರ ಕೂಡಲೇ ರದ್ದು ಮಾಡಬೇಕು. ತಕ್ಷಣವಾಗಿ ಅದೇ ಸ್ಥಳದಲ್ಲಿ ಮುಂದುವರಿಸಲು ಒತ್ತಾಯಿಸಿ ರೈತ ಸಂಘಟನೆ ಮುಖಂಡರು ಸೋಮವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಶಿಗ್ಗಾಂವಿ: ತಹಸೀಲ್ದಾರ್ ಸಂತೋಷ ಹಿರೇಮಠ ಅವರನ್ನು ದಿಢೀರ್ ವರ್ಗಾವಣೆ ಮಾಡಿರುವುದನ್ನು ಸರಕಾರ ಕೂಡಲೇ ರದ್ದು ಮಾಡಬೇಕು. ತಕ್ಷಣವಾಗಿ ಅದೇ ಸ್ಥಳದಲ್ಲಿ ಮುಂದುವರಿಸಲು ಒತ್ತಾಯಿಸಿ ರೈತ ಸಂಘಟನೆ ಮುಖಂಡರು ಸೋಮವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಶಿಗ್ಗಾಂವಿ ತಹಸೀಲ್ದಾರ್ ಆಗಿ ಒಂದುವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ ಸಂತೋಷ ಹಿರೇಮಠ ಅವರ ಕೆಲಸದಿಂದ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಲಭ್ಯವಾಗುತ್ತಿದ್ದು, ಯಾವುದೇ ಕಾರಣಗಳು ಇಲ್ಲದೆ ಪ್ರಾಮಾಣಿಕ ಅಧಿಕಾರಿ ವರ್ಗಾವಣೆ ಖಂಡನೀಯವಾಗಿದೆ. ತಾಲೂಕಿನಲ್ಲಿ ೨೦೨೩ರಲ್ಲಿ ಬರಗಾಲ ಆವರಿಸಿದ್ದು, ಈ ವರ್ಷದಲ್ಲಿ ಅತಿವೃಷ್ಟಿಯಾಗಿದ್ದು ತಾಲೂಕಿನ ರೈತರಿಗೆ ಬೆಳೆ ಪರಿಹಾರ, ಇನ್ಸೂರೆನ್ಸ್ ಸೇರಿದಂತೆ ನೂರಾರು ಸಮಸ್ಯೆಗಳು ಇರುತ್ತವೆ. ತಾಲೂಕಿನಲ್ಲಿರುವ ಜ್ವಲಂತ ಸಮಸ್ಯೆಗಳ ಕುರಿತು ಸಂತೋಷ ಹಿರೇಮಠ ಅವರಿಗೆ ಸಂಪೂರ್ಣ ಮಾಹಿತಿ ಇರುತ್ತದೆ. ಬರುವ ತಹಸೀಲ್ದಾರ್‌ಗೆ ತಾಲೂಕಿನ ವಿಷಯ ತಿಳಿಯಬೇಕೆಂದರೆ ೩ರಿಂದ ೪ ತಿಂಗಳು ಬೇಕಾಗುತ್ತೆ. ಹೀಗಿರುವಾಗ ಹಿರೇಮಠ ಅವರನ್ನು ರಾಜಕೀಯ ಷಡ್ಯಂತ್ರದಿಂದ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು. ದಶಕದಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಕಂದಾಯ ಇಲಾಖೆಯನ್ನು ಪಾರದರ್ಶಕ ಆಡಳಿತಕ್ಕೆ ಅಣೆಗೊಳಿಸಿದ್ದ ತಹಸೀಲ್ದಾರ್ ಅವರ ವರ್ಗಾವಣೆ ಸರಕಾರ ರದ್ದುಪಡಿಸದಿದ್ದರೇ ನಡೆಯಲಿರುವ ಉಪ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು, ಕ್ರಿಯಾಶೀಲ ತಹಸೀಲ್ದಾರ್ ಕರ್ತವ್ಯ ಇಲ್ಲಿ ಅವಶ್ಯವಿದೆ. ಈ ನಿಟ್ಟಿನಲ್ಲಿ ಸಂತೋಷ ಹಿರೇಮಠ ಅವರನ್ನು ಮುಂದುವರೆಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ. ಮನವಿ ಸ್ವೀಕರಿಸಿದ ಸವಣೂರ ಉಪ ವಿಭಾಗಾಧಿಕಾರಿ ಮೊಹ್ಮದ ಖಿಜರ್, ತಮ್ಮ ಬೇಡಿಕೆ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸುವುದಾಗಿ ಭರವಸೆ ನೀಡಿದರು. ರೈತ ಸಂಘ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಆನಂದ ಕೆಳಗಿಮನಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷೆ ಸಂತೋಷಿಮಾತಾ, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷೆ ನೀಲಮ್ಮ ವನಹಳ್ಳಿ, ರೈತ ಮುಖಂಡರಾದ ಶಂಕರಗೌಡ್ರ ಪಾಟೀಲ, ದೇವರಾಜ ದೊಡ್ಡಮನಿ, ಗಿರೀಶ ಪಾಟೀಲ, ಮಂಜುನಾಥ ಕಂಕಣವಾಡ, ಶಿವುಕುಮರಯ್ಯ ಜೆಡಿಮಠ, ಈರಣ್ಣ ಸಮಗೊಂಡ, ಮಂಜುನಾಥ ಬೆಂಡಿಗೇರಿ, ಮುತ್ತಣ್ಣ ಗುಡಗೇರಿ, ಪಂಚಯ್ಯ ಹಿರೇಮಠ, ಮೌಲಾಲಿ ಸವಣೂರ, ಮಂಜುನಾಥ ಬ್ಯಾಳಪ್ಪನವರ, ರಾಮನಗೌಡ್ರ ಗಾಳಿಗೌಡ್ರ, ಬಸವರಾಜ ಗಂಜೀಗಟ್ಟಿ, ಮೌಲಸಾಬ ಜೇಕಿನಕಟ್ಟಿ, ದಯಾನಂದ ಮೆಣಸಿನಕಾಯಿ, ಅಶೋಕ ಮಡ್ಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.