ರಾಗಿ ಖರೀದಿ ಕೇಂದ್ರ ಸ್ಥಗಿತ: ನುಗ್ಗೇಹಳ್ಳಿಯಲ್ಲಿ ರೈತ ಸಂಘ ಪ್ರತಿಭಟನೆ

| Published : Mar 24 2024, 01:33 AM IST

ರಾಗಿ ಖರೀದಿ ಕೇಂದ್ರ ಸ್ಥಗಿತ: ನುಗ್ಗೇಹಳ್ಳಿಯಲ್ಲಿ ರೈತ ಸಂಘ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನುಗ್ಗೇಹಳ್ಳಿ ಹೋಬಳಿ ಕೇಂದ್ರದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಕಳೆದ 2 ದಿನಗಳಿಂದ ರವಾನೆ ಗುತ್ತಿಗೆದಾರರ ಸಮಸ್ಯೆಯಿಂದ ರಾಗಿ ಖರೀದಿ ಸ್ಥಗಿತಗೊಂಡಿದೆ. ಇದರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟಿಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.

ರವಾನೆ ಗುತ್ತಿಗೆದಾರರ ಸಮಸ್ಯೆ । 2 ದಿನಗಳಿಂದ ಕಾರ್ಯನಿರ್ವಹಿಸದ ರಾಗಿ ಕೇಂದ್ರ । ಸೂಕ್ತ ಕ್ರಮಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿ ಕೇಂದ್ರದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಕಳೆದ 2 ದಿನಗಳಿಂದ ರವಾನೆ ಗುತ್ತಿಗೆದಾರರ ಸಮಸ್ಯೆಯಿಂದ ರಾಗಿ ಖರೀದಿ ಸ್ಥಗಿತಗೊಂಡಿದೆ. ಇದರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟಿಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು.

ಕಳೆದ ಸೋಮವಾರದಿಂದ ರಾಗಿ ಖರೀದಿಗೆ ಚಾಲನೆ ನೀಡಲಾಗಿತ್ತು. ರೈತರಿಗೆ ಬುಧವಾರದಿಂದ ರಾಗಿ ಖರೀದಿಗೆ ಟೋಕನ್ ನೀಡಲಾಗಿತ್ತು. ಆದರೆ ರವಾನೆ ಗುತ್ತಿಗೆದಾರರ ಸಮಸ್ಯೆಯಿಂದ ಕಳೆದ 2 ದಿನಗಳಿಂದ ರೈತರಿಂದ ರಾಗಿ ಖರೀದಿಸದೆ ಸ್ಥಗಿತಗೊಂಡಿತು. ಈ ಸಮಸ್ಯೆಯಿಂದ 100ಕ್ಕೂ ಹೆಚ್ಚು ರೈತರು ಕಳೆದ 2 ದಿನಗಳಿಂದ ಮಾರಾಟ ಮಾಡಲು ರಾಗಿ ತಂದು ಹಗಲು ರಾತ್ರಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಕೆಲವರು ಇದ್ದರೆ ರಾತ್ರಿ ಕುಡಿಯಲು ನೀರು ಹಾಗೂ ಊಟ ಸಿಗದೆ ಹಸಿವಿನಿಂದ ಇದ್ದರು. ಈ ಹಿನ್ನೆಲೆ ಕರ್ನಾಟಕ ರಾಜ್ಯ ರೈತ ಸಂಘ ಶುಕ್ರವಾರ ರಾಗಿ ಖರೀದಿ ಕೇಂದ್ರಕ್ಕೆ ಆಗಮಿಸಿ ರವಾನೆ ಗುತ್ತಿಗೆದಾರನ ವಿರುದ್ಧ ಪ್ರತಿಪಡಿಸಿ ತಕ್ಷಣ ರಾಗಿ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಎಸ್‌.ಎಸ್.ರಾಮಚಂದ್ರು ಮಾತನಾಡಿ, ಕಳೆದ 2 ದಿನಗಳಿಂದ ರೈತರಿಂದ ರಾಗಿ ಖರೀದಿಸದೆ ರೈತರಿಗೆ ಸಮಸ್ಯೆ ಮಾಡಿದ್ದಾರೆ. ಖರೀದಿ ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಇನ್ನು ರಾತ್ರಿ ವೇಳೆಯಲ್ಲಿ ರೈತರಿಗೆ ಊಟವಿಲ್ಲದೆ ಸಮಸ್ಯೆ ಎದುರಿಸಿದ್ದಾರೆ. ಕ್ಷೇತ್ರದ ಶಾಸಕರು ಈ ಬಗ್ಗೆ ಏಕೆ ಗಮನಹರಿಸುತ್ತಿಲ್ಲ. ರವಾನೆ ಗುತ್ತಿಗೆದಾರ ನಾಗೇಶ್ ರೈತರಿಂದ ಪ್ರತಿ ಕ್ವಿಂಟಲ್‌ಗೆ 30 ರು. ನೀಡಿದರೆ ಮಾತ್ರ ರಾಗಿ ಖರೀದಿ ಮಾಡಿ ಇಲ್ಲದಿದ್ದರೆ ಸ್ಥಗಿತಗೊಳಿಸಿ ಎಂದು ಉಡಾಫೆ ಉತ್ತರ ನೀಡುತ್ತಾರೆ. ಕೇವಲ ಹಣ ನೀಡಲಿಲ್ಲ ಎಂಬ ಕಾರಣಕ್ಕೆ 2 ದಿನಗಳಿಂದ ರಾಗಿ ಖರೀದಿ ನಿಲ್ಲಿಸಿರುವುದು ಸರಿಯಲ್ಲ. ಇವರ ಬೆಂಬಲಕ್ಕೆ ಅನೇಕ ರಾಜಕೀಯ ನಾಯಕರಿದ್ದಾರೆ. ಕೂಡಲೇ ಫೆಡರೇಷನ್ ಆಡಳಿತ ಮಂಡಳಿ ಇವನ ಟೆಂಡರನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಮಹಿಳಾಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ರಾಗಿ ಖರೀದಿ ಕೇಂದ್ರದಲ್ಲಿ ಮೇಲ್ವಿಚಾರಕರು ರೈತರಿಗೆ ಸ್ಪಂದಿಸುತ್ತಿದ್ದಾರೆ .ಆದರೆ ರವಾನೆ ಗುತ್ತಿಗೆದಾರರು ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಲದಿಂದ ಟೆಂಡರ್ ಪಡೆದಿದ್ದರೂ ಇಲ್ಲಿ ರೈತರು ಪ್ರತಿ ಕ್ವಿಂಟಲ್‌ಗೆ 30ರು ಹಣ ನೀಡಿದರೆ ಮಾತ್ರ ರವಾನೆ ಮಾಡಲಾಗುತ್ತದೆ ಎಂದು ತಿಳಿಸುತ್ತಿದ್ದಾರೆ. ಈ ಸಮಸ್ಯೆಯಿಂದ 2 ದಿನಗಳಿಂದ ರಾಗಿ ಖರೀದಿ ಸ್ಥಗಿತಗೊಂಡಿದೆ. ಈ ಬಗ್ಗೆ ರೈತ ಸಂಘದಿಂದ ಪ್ರತಿಭಟನೆ ನಡೆಸಿ ರೈತರಿಂದ ಯಾವುದೇ ಹಣ ಪಡೆಯುವಂತಿಲ್ಲ ಎಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಈ ತಕ್ಷಣವೇ ಖರೀದಿ ಪ್ರಕ್ರಿಯೆ ಪ್ರಾರಂಭಿಸುವಂತೆ ತಿಳಿಸಲಾಗಿದೆ ಎಂದರು. ರೈತ ಸಂಘ ಹಾಗೂ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಗಿ ಖರೀದಿ ಪ್ರಾರಂಭಗೊಂಡಿತು.

ಖರೀದಿ ಕೇಂದ್ರದ ಮೇಲ್ವಿಚಾರಕ ನಾಗರಾಜ್, ರೈತ ಸಂಘದ ಪ್ರಮುಖರಾದ ಹುಲ್ಲೇನಹಳ್ಳಿ ಶಿವಪ್ಪ, ಬಾಗೂರು ರೇಣುಕಾ ಮಂಜುನಾಥ್, ಹೊನ್ನ ಮಾರನಹಳ್ಳಿ ಬಸವರಾಜ್, ಸಂತೇಶಿವರ ರಾಜಣ್ಣ, ಚಂದ್ರಮ್ಮ, ನಾಗಮ್ಮ, ಗಂಜಲಘಟ್ಟ ನಾಗಣ್ಣ, ಅಗ್ರಹಾರ ಬೆಳಗುಲಿ ಚಂದ್ರಣ್ಣ, ಹೋಟೆಲ್ ಮಂಜಣ್ಣ, ಆಟೋ ಗಂಗು, ಬದ್ದಿಕೆರೆ ಪುಟ್ಟಸ್ವಾಮಿ ಹಾಜರಿದ್ದರು.ನುಗ್ಗೇಹಳ್ಳಿಯ ರಾಗಿ ಖರೀದಿ ಕೇಂದ್ರದಲ್ಲಿ ಕಳೆದ 2 ದಿನಗಳಿಂದ ರಾಗಿ ಸ್ಥಗಿತದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ರವಾನೆ ಗುತ್ತಿಗೆದಾರರ ವಿರುದ್ಧ ಪ್ರತಿಭಟನೆ ನಡೆಸಿತು.