ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆಗಾಗಿ ಕೂಡಲೇ ಜೆಎಂಸಿ ಸರ್ವೇ ಮುಗಿಸಿ ಪರಿಹಾರ ವಿತರಿಸುವಂತೆ ಆಗ್ರಹಿಸಿ ಯೋಜನೆ ಪರವಾಗಿ ರೈತರು ಮಂಗಳವಾರ ಬಿಡದಿ - ಹಾರೋಹಳ್ಳಿ ರಸ್ತೆಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ರಸ್ತೆಯಲ್ಲಿ ಕುರ್ಚಿಗಳ ಮೇಲೆ ಕುಳಿತು ಪ್ರತಿಭಟಿಸಿದ ರೈತರು, ನಾವು ಟೌನ್ ಶಿಪ್ ಯೋಜನೆಗೆ ಭೂಮಿ ಬಿಟ್ಟುಕೊಡಲು ಸಿದ್ಧರಿದ್ದೇವೆ. ನಮ್ಮ ಜಮೀನು ಸರ್ವೇ ಮಾಡಿಸಿ, ಶಾಪಗ್ರಸ್ಥವಾಗಿರುವ ಭೈರಮಂಗಲ ಭಾಗದ ನಮ್ಮ ಭೂಮಿಗಳಿಗೆ ಪರಿಹಾರ ವಿತರಿಸಿ ಮುಕ್ತಿ ಕೊಡಿ ಎಂಬ ಘೋಷಣೆಗಳನ್ನು ಕೂಗಿದರು.ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಿಡದಿ ಠಾಣೆ ಇನ್ಸ್ ಪೆಕ್ಟರ್ ವಿಜಯಕುಮಾರ್ , ರಸ್ತೆ ತಡೆ ಮಾಡದಂತೆ ರೈತರ ಮನವೊಲಿಸಲು ಮುಂದಾದರು. ಅದಕ್ಕೆ ಬಗ್ಗದ ರೈತರು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬರಬೇಕು. ಕೂಡಲೇ ನಮ್ಮ ಜಮೀನುಗಳಲ್ಲಿ ಜೆಎಂಸಿ ಆರಂಭಿಸಬೇಕೆಂದು ಆಗ್ರಹಿಸಿದರು. ಇದರಿಂದ ಹಾರೋಹಳ್ಳಿ-ಬಿಡದಿ ಮುಖ್ಯರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಘಟನೆಗೆ ಎಚ್ ಡಿಕೆಯೇ ಕಾರಣ :ಈ ವೇಳೆ ರೈತ ಮುಖಂಡ ಹೊಸೂರು ರಾಜಣ್ಣ ಮಾತನಾಡಿ, ಮಂಡಲಹಳ್ಳಿ ಗ್ರಾಮದಲ್ಲಿ 21 ಜನ ರೈತರು ಭೂಮಿ ಕೊಡುವುದಾಗಿ ಜಿಬಿಡಿಎಗೆ ಒಪ್ಪಿಗೆ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಜೆಎಂಸಿ ಸೋಮವಾರ ಸರ್ವೇ ಕಾರ್ಯಕ್ಕೆ ಬಂದಿದ್ದರು. ಈ ವೇಳೆ ಹೊರಗಿನ ವ್ಯಕ್ತಿಗಳು ಹಲ್ಲೆ ನಡೆಸಿ ದುಷ್ಕೃತ್ಯ ಎಸಗಿದ್ದಾರೆ. ಈ ಘಟನೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿರವರೇ ನೇರ ಕಾರಣ ಎಂದು ಆರೋಪಿಸಿದರು.
ಟೌನ್ ಶಿಪ್ ಯೋಜನೆ ಘೋಷಣೆ ಮಾಡಿದ ಕುಮಾರಸ್ವಾಮಿರವರು ಸುಳ್ಳನ್ನು ನಿಜವೆಂದು ಸಾಬೀತು ಮಾಡಲು ಹೊರಟಿದ್ದಾರೆ. ಅವರ ಮಾತು ಕೇಳಿ ಕೆಲ ರೈತರು ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ರೈತರೇ ಬೇಡವೆಂದರೆ ಅಧಿಕಾರಿಗಳು ಸರ್ವೇ ಮಾಡುವುದಿಲ್ಲ. ಆದರೆ, ಒಪ್ಪಿಗೆ ನೀಡಿರುವ ರೈತರ ಜಮೀನು ಸರ್ವೇ ಮಾಡಲು ಅಡ್ಡಿ ಪಡಿಸುವುದು ಯಾವ ನ್ಯಾಯ. ಪ್ರಚಾರಕ್ಕಾಗಿ ಹೆಣ್ಣುಮಕ್ಕಳಿಂದ ಪೊರಕೆಯಲ್ಲಿ ಹೊಡೆಸಿರುವುದು ಅತ್ಯಂತ ಹೇಯ ಕೃತ್ಯ. ಈ ಬೆಳವಣಿಗೆಗಳು ಒಳ್ಳೆಯದಲ್ಲ ಎಂದು ಎಚ್ಚರಿಸಿದರು.
ಕುಮಾರಸ್ವಾಮಿರವರು ಹೇಳಿರುವಂತೆ ಮಾಹಿತಿ ಇಲ್ಲದೆ ರೈತರ ಜಮೀನಿಗೆ ನುಗ್ಗಿಲ್ಲ. ರೈತರೇ ಭೂಮಿ ಕೊಡಲು ಸಿದ್ಧರಾಗಿದ್ದು ಸರ್ವೇಗಾಗಿ ಜಿಬಿಡಿಎಗೆ ಅರ್ಜಿ ನೀಡಿದ್ದರಿಂದ ಅಧಿಕಾರಿಗಳು ಬಂದಿದ್ದರು. ಕುಮಾರಸ್ವಾಮಿರವರು ವಾಸ್ತವವನ್ನು ತಿಳಿಯದೆ ಎಲ್ಲೋ ಕುಳಿತು ಆರೋಪ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.
ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಭೂಮಿ ಹೊಂದಿರುವ ಸುಮಾರು 20 ಸಾವಿರ ರೈತರಿದ್ದೇವೆ. ಈ ಪೈಕಿ ನೂರು ಜನರು ಮಾತ್ರ ಟೌನ್ಶಿಪ್ ಯೋಜನೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಆದರೆ ಕುಮಾರಸ್ವಾಮಿರವರು ಹೊರಗಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ವಾಹನಗಳ ಮೂಲಕ ಕಳುಹಿಸಿ ಇಲ್ಲಿ ರೈತರ ಹೋರಾಟದ ದಿಕ್ಕನ್ನೆ ಬದಲಾಯಿಸುತ್ತಿದ್ದಾರೆ. ಬಸ್ ವ್ಯವಸ್ಥೆ ಮಾಡಿಕೊಟ್ಟವರು ಕುಮಾರಸ್ವಾಮಿ ಎಂದು ಹೊರಗಿನ ರೈತರು ಹೇಳುತ್ತಿದ್ದಾರೆ. ಅವರು ಈ ರೀತಿಯ ರಾಜಕೀಯ ಮಾಡಿ ನಮ್ಮ ಮೇಲೆ ದಬ್ಬಾಳಿಕೆ ಮಾಡಬೇಕೆ? ಎಂದು ಪ್ರಶ್ನಿಸಿದರು.ಟೌನ್ಶಿಪ್ ಯೋಜನೆ ಉದ್ದೇಶಿತ ಪ್ರದೇಶದಲ್ಲಿನ ಬಹುತೇಕ ರೈತರು ಭೂಮಿ ಕೊಡಲು ಒಪ್ಪಿದ್ದು ಈಗಾಗಲೇ ಜಿಬಿಡಿಎಗೆ ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಯಾರಿಗೂ ಹೆದರದೆ ಒಪ್ಪಿಗೆ ಇರುವ ರೈತರ ಜಮೀನನ್ನು ಸರ್ವೇ ಕಾರ್ಯ ಮುಂದುವರೆಸಬೇಕು. ಇಲ್ಲದಿದ್ದರೆ ರೈತರಿಗೆ ತೊಂದರೆಯಾಗುತ್ತದೆ. ಯೋಜನೆ ವಿರೋಧ ಇರುವ ರೈತರು ಕಾನೂನು ಹೋರಾಟ ಮಾಡಲಿ, ಅದನ್ನು ಬಿಟ್ಟು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಹೊಸೂರು ರಾಜಣ್ಣ ಹೇಳಿದರು.
ರೆಡ್ ಜೋನ್ ನಿಂದ ಮುಕ್ತಿ ಕೊಡಿ :ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಎಚ್.ಎಸ್.ಸಿದ್ಧರಾಜು ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಕುಮಾರಸ್ವಾಮಿರವರು ರೆಡ್ ಜೋನ್ ಮಾಡಿ ರೈತರ ಮರಣ ಶಾಸನ ಬರೆದರು. ನಾವೆಲ್ಲರೂ ಜೆಡಿಎಸ್ ಪಕ್ಷದಲ್ಲಿದ್ದು ಎಲ್ಲವನ್ನೂ ಕಂಡಿದ್ದೇವೆ. ರೆಡ್ ಜೋನ್ ವನವಾಸಕ್ಕೆ ಮುಕ್ತಿಕೊಡಿ ಎಂದು ಹಲವಾರು ಬಾರಿ ಕೇಳಿಕೊಂಡರೂ ನೀವು ನಮ್ಮ ಮಾತು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ದೂರಿದರು.
ಕುಮಾರಸ್ವಾಮಿರವರ ನಿರ್ಲಕ್ಷದಿಂದ ಸುಮಾರು 3000 ಎಕರೆಯಷ್ಟು ಜಮೀನನ್ನು ರೈತರು ಕಡಿಮೆ ಬೆಲೆ ಕಳೆದುಕೊಂಡಿದ್ದಾರೆ. ಉಳಿಕೆ ಜಮೀನಿಗೆ ಬರುವ ಪರಿಹಾರದಿಂದ ಬದುಕಿಕೊಳ್ಳುತ್ತೇವೆ. ದಯವಿಟ್ಟು ನಮಗೆ ತೊಂದರೆಕೊಡಬೇಡಿ ಎಂದು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಬೈರಮಂಗಲ ವಿಎಸ್ಎಸ್ಎನ್ ಅಧ್ಯಕ್ಷ ಮಂಜುನಾಥ್, ತಾಪಂ ಮಾಜಿ ಅಧ್ಯಕ್ಷ ಆರ್.ಜಯಚಂದ್ರ, ರೈತಮುಖಂಡರಾದ ಶಿವರಾಮ್, ರಾಮಾಂಜಿನಿ, ಕೃಷ್ಣಮೂರ್ತಿ, ಯಾಲಕಯ್ಯ, ವೆಂಕಟಾಚಲಯ್ಯ, ನಾಗರಾಜು, ಸಂಜೀವರೆಡ್ಡಿ, ತಾಯಪ್ಪನದೊಡ್ಡಿಸ್ವಾಮಿ, ವಿನಯ್ ಕುಮಾರ್, ನಾಗೇಶ್, ಅಂಚೀಪುರ ಶೇಖರ್ ಮತ್ತಿತರರು ಇದ್ದರು.
14ಕೆಆರ್ ಎಂಎನ್ 4,5.ಜೆಪಿಜಿ4.ಬೈರಮಂಗಲದಲ್ಲಿ ಟೌನ್ ಶಿಪ್ ಯೋಜನೆ ಪರ ರೈತರು ವಾಹನಗಳನ್ನು ತಡೆದು ಪ್ರತಿಭಟಿಸಿದರು.
5.ರಸ್ತೆ ತಡೆಯಿಂದ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ.