ಬಿತ್ತನೆ ಬೀಜ ಖರೀದಿಸಲು ಕಾದು ನಿಂತ ರೈತರು

| Published : May 29 2024, 12:50 AM IST

ಸಾರಾಂಶ

ಕವಿತಾಳ ಸಮೀಪದ ಪಾಲಮನಕಲ್ಲೂರು ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖರೀದಿಗೆ ಆಗಮಿಸಿದ ರೈತರು.

ಕನ್ನಡಪ್ರಭ ವಾರ್ತೆ ಕವಿತಾಳ

ಸಮೀಪದ ಪಾಲಮನಕಲ್ಲೂರು ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಖಾಲಿಯಾದ ಕಾರಣ ಬಿತ್ತನೆ ಬೀಜ ಖರೀದಿಗೆ ಆಗಮಿಸಿದ ರೈತರು ಬಿಸಿಲಿನಲ್ಲಿ ಕಾದು ನಿಲ್ಲುವಂತಾಯಿತು.

ಕಳೆದ ಎರಡು ದಿನಗಳಿಂದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದ್ದು, ಅದರಂತೆ ಸೋಮವಾರ ಬೀಜಕ್ಕಾಗಿ ರೈತರು ಆಗಮಿಸಿದಾಗ ಬೀಜ ಖಾಲಿಯಾಗಿತ್ತು. ಹೀಗಾಗಿ ರೈತರು ಕಾದು ನಿಲ್ಲುಂತಾಯಿತು. ಹರ್ವಾಪುರ, ಪರಸಾಪುರ, ವಟಗಲ್ ಮತ್ತು ಪಾಮನಕಲ್ಲೂರು ಮತ್ತಿತರ ಹಳ್ಳಿಗಳಿಂದ ಆಗಮಿಸಿದ್ದ ರೈತರು ಬೀಜ ಖಾಲಿಯಾದ ಮಾಹಿತಿಯಿಂದ ಬೇಸರ ವ್ಯಕ್ತಪಡಿಸಿದರು.

ಅಂದಾಜು 600 ಹೇಕ್ಟೆರ್ ಸಜ್ಜೆ ಮತ್ತು 2 ಸಾವಿರ ಹೇಕ್ಟೆರ್ ಸೂರ್ಯಕಾಂತಿ ಹಾಗೂ 6500 ಹೇಕ್ಟೆರ್ ತೊಗರಿ ಬಿತ್ತನೆ ಗುರಿ ಹೊಂದಿರುವ ಅಧಿಕಾರಿಗಳು ಅದಕ್ಕೆ ಬೇಕಾಗವಷ್ಟು 150 ಕ್ವಿಂಟಲ್ ತೊಗರಿ, 6 ಕ್ವಿಂಟಲ್ ಸಜ್ಜೆ ಮತ್ತು 4 ಕ್ವಿಂಟಲ್ ಸೂರ್ಯಕಾಂತಿ ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಿದ್ದರು. ಅದರಲ್ಲಿ 50 ಕ್ವಿಂಟಲ್ ತೊಗರಿ, 1.80 ಕ್ವಿಂಟಲ್ ಸಜ್ಜೆ ಮತ್ತು 2.10 ಕ್ವಿಂಟಲ್ ಸೂರ್ಯಕಾಂತಿ ಬಿತ್ತನೆ ಬೀಜ ಮಾತ್ರ ಪೂರೈಸಲಾಗಿದೆ. ಕಳೆದ ಎರಡು ದಿನಗಳಿಂದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದ್ದು ಉಳಿದಿದ್ದ ಸ್ವಲ್ಪ ಸೂರ್ಯಕಾಂತಿ ಬೀಜವನ್ನು ವಿತರಿಸಿದರು.

ರಾಯಚೂರಿನಿಂದ ಬಿತ್ತನೆ ಬೀಜ ಬರುವುದು ವಿಳಂಬವಾದ ಕಾರಣ ವಿತರಣೆಗೆ ರೈತರು ಅನಿವಾರ್ಯವಾಗಿ ಬಿಸಿಲಿನಲ್ಲಿ ಕಾಯ್ದು ಕುಳಿತುಕೊಳ್ಳುವಂತಾಯಿತು.

ಮನೆಯಲ್ಲಿ ಗಂಡು ಮಕ್ಕಳು ದುಡಿಯಲು ಬೆಂಗಳೂರಿಗೆ ಹೋಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲ ಕೆಲಸ ಬಿಟ್ಟು, ತೊಗರಿ ಬೀಜಕ್ಕಾಗಿ ಬೆಳಗ್ಗೆಯಿಂದ ಉಪವಾಸ ಕುಳಿತಿದ್ದೇವೆ ಎಂದು ಬಸ್ಸಮ್ಮ ಮತ್ತು ಆದಮ್ಮ ಅಸಮಧಾನ ತೋಡಿಕೊಂಡರು.

ಬಿತ್ತನೆ ಬೀಜ ಖಾಲಿಯಾದ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೆ, ಇನ್ನೊಂದು ದಿನ ಬರುತ್ತಿದ್ದೇವು ಈಗ ಬಂದಿದ್ದೀದ್ದೇವೆ ಸಂಜೆ ಯಾದರೂ ಪರ್ವಾಗಿಲ್ಲ ಬೀಜ ತೆಗೆದುಕೊಂಡು ಹೋಗುತ್ತೇವೆ ಎಂದು ಪರಸಾಪುರ ಗ್ರಾಮದ ರೈತ ಗುಂಡಪ್ಪಗೌಡ ಹೇಳಿದರು.

ರಾಯಚೂರಿನಿಂದ ಬಿತ್ತನೆ ಬೀಜ ಪೂರೈಸುವ ಲಾರಿ ಬರುತ್ತಿದೆ. ಬರುವ ದಾರಿಯಲ್ಲಿ ಬೇರೆ ಊರುಗಳಲ್ಲಿ ಅಲ್ಲಲ್ಲಿ ಬೇಡಿಕೆ ಇದ್ದರೆ ಪೂರೈಸುವುದರಿಂದ ಲಾರಿ ಬರುವುದು ವಿಳಂಬವಾಗಿದೆ. ಬೀಜ ಬಂದ ತಕ್ಷಣ ರೈತರಿಗೆ ಬೀಜ ವಿತರಿಸಲಾಗುತ್ತದೆ ಎಂದು ಸಹಾಯಕ ಕೃಷಿ ಅಧಿಕಾರಿ ಬಸವರಾಜ ತಿಳಿಸಿದರು.