ಸಾರಾಂಶ
ಯಾವ ರೈತರಿಗೆ ರಾಜ್ಯ ಸರ್ಕಾರದಿಂದ ₹2 ಸಾವಿರ ಪರಿಹಾರ ಬಂದಿಲ್ಲವೋ ಅವರಿಗೆ ಕೇಂದ್ರದ ಕಿಸಾನ್ ಸಮ್ಮಾನ್ ಹಣ ಕೂಡ ಜಮೆಯಾಗಿಲ್ಲ. ಅದಕ್ಕಾಗಿ ರೈತರು ನಿತ್ಯ ಪರಿಹಾರಕ್ಕಾಗಿ ಅಲೆದಾಡುವುದು ಸಾಮಾನ್ಯವಾಗಿದೆ.
ಕನ್ನಡಪ್ರಭ ವಾರ್ತೆ ಅಫಜಲ್ಪುರ
ಕಳೆದ ವರ್ಷ ಮಳೆ ಇಲ್ಲದೆ ಬೆಳೆ ಹಾಳಾದ ರೈತರಿಗೆ ಸರ್ಕಾರ 15 ದಿನಗಳ ಹಿಂದೆ ಬೆಳೆ ಪರಿಹಾರ ನೀಡಿದೆ. ಇನ್ನೂ ಸಾಕಷ್ಟು ರೈತರಿಗೆ ಬೆಳೆ ಪರಿಹಾರ ಬಾರದ ಕಾರಣ ರೈತರು ನಿತ್ಯ ಕೃಷಿ ಮತ್ತು ತಹಸಿಲ್ದಾರ ಕಚೇರಿಗೆ ಅಲೆದಾಡುತ್ತಿದ್ದಾರೆ.ತಹಸಿಲ್ದಾರ ಕಚೇರಿ ಆವರಣದಲ್ಲಿ ಪರಿಹಾರ ಸಹಾಯವಾಣಿ ಆರಂಭಿಸಲಾಗಿದೆ. ಅಲ್ಲಿಯೂ ರೈತರು ನಿತ್ಯ ಬರುತ್ತಿದ್ದು ಸಂಜೆವರೆಗೂ ಪರಿಹಾರಕ್ಕಾಗಿ ನಿಂತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಯಾವ ರೈತರಿಗೆ ರಾಜ್ಯ ಸರ್ಕಾರದಿಂದ ₹2 ಸಾವಿರ ಪರಿಹಾರ ಬಂದಿಲ್ಲವೋ ಅವರಿಗೆ ಕೇಂದ್ರದ ಕಿಸಾನ್ ಸಮ್ಮಾನ್ ಹಣ ಕೂಡ ಜಮೆಯಾಗಿಲ್ಲ. ಅದಕ್ಕಾಗಿ ರೈತರು ನಿತ್ಯ ಪರಿಹಾರಕ್ಕಾಗಿ ಅಲೆದಾಡುವುದು ಸಾಮಾನ್ಯವಾಗಿದೆ.
ರೈತರು ಪಹಣಿಯನ್ನು ಆಧಾರಕ್ಕೆ ಲಿಂಕ್ ಮಾಡಿಸಬೇಕು.ರೈತರ ಆಧಾರ್ ಕಾರ್ಡ್‌ದಲ್ಲಿರುವ ಹೆಸರು ಮತ್ತು ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರು ಒಂದೇ ಆಗಿರಬೇಕು. ಅಲ್ಲದೇ ಆಧಾರ್ ಕಾರ್ಡ್‌ದಲ್ಲಿ ಹಾಗೂ ಪಹಣಿ ಪತ್ರಿಕೆಯಲ್ಲಿ ಹೆಸರು ಒಂದೇ ಆಗಿರಬೇಕು. ಬದಲಾವಣೆ ಆದರೆ ಪರಿಹಾರದ ಹಣ ಜಮೆ ಆಗುವುದಿಲ್ಲ. ಅಲ್ಲದೆ ರೈತರು ಜಮೀನಿನ ಪಹಣಿಗೆ ಎಫ್‌ಐಡಿ ಸಂಖ್ಯೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಇಲ್ಲದೇ ಇದ್ದರೆ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿಯಾಗಿ ಅವಶ್ಯಕ ದಾಖಲೆಗಳನ್ನು ನೀಡಿ ಎಫ್‌ಐಡಿ ಸಂಖ್ಯೆ ಪಡೆಯಬೇಕು’ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳಿದರು.