ಟೋಲ್ ನಿರ್ಮಾಣ ಕೈಬಿಡದಿದ್ದಲ್ಲಿ ಉಗ್ರ ಹೋರಾಟ: ಸರ್ಕಾರಕ್ಕೆ ರೈತರ ಎಚ್ಚರಿಕೆ

| Published : Aug 20 2025, 01:30 AM IST

ಟೋಲ್ ನಿರ್ಮಾಣ ಕೈಬಿಡದಿದ್ದಲ್ಲಿ ಉಗ್ರ ಹೋರಾಟ: ಸರ್ಕಾರಕ್ಕೆ ರೈತರ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಸುತ್ತಲೂ ಇರುವಂಥ ರಾಷ್ಟ್ರೀಯ ಹೆದ್ದಾರಿಗಳಿಗೆ ಸುಂಕದ ಬರೆ ಹಾಕುತ್ತಿದ್ದೀರಾ. ಮೊದಲಿಗೆ ಈ ರಸ್ತೆಯೇ ಸರಿ ಇಲ್ಲ, ಅವೈಜ್ಞಾನಿಕವಾಗಿ ನೀವು ಇಲ್ಲಿ ಟೋಲ್ ಮಾಡುವುದನ್ನು ಇಲ್ಲಿನ ರೈತರು, ಸಾರ್ವಜನಿಕರು ವಿರೋಧಿಸುತ್ತೇವೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ಗುಬ್ಬಿ- ಹೊಸಹಳ್ಳಿ ಭಾಗದಲ್ಲಿ ಹತ್ತಾರು ಗ್ರಾಮಗಳಿದ್ದು, ಇಲ್ಲಿ ಯಾವುದೇ ರೀತಿಯ ವಾಣಿಜ್ಯೋದ್ಯಮಗಳು ನಡೆಯುವುದಿಲ್ಲ, ಅಂತಹ ದಾರಿಯೂ ಇದಲ್ಲ, ಇಲ್ಲಿ ಓಡಾಡುವುದು ಕೇವಲ ರೈತರು ಮತ್ತು ಈ ಭಾಗದ ಜನರು. ಸರ್ಕಾರ ಟೋಲ್ ನಿರ್ಮಿಸಿ ರಸ್ತೆ ಸುಂಕದ ಬರೆ ಹಾಕುತ್ತಿರುವುದು ಸರಿಯಲ್ಲ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ. ಗೋವಿಂದರಾಜು ಸರ್ಕಾರದ ವಿರುದ್ಧ ಕಿಡಿಕಾರಿದರು.

ತಾಲೂಕಿನ ಜಿ. ಹೊಸಹಳ್ಳಿ ಭಾಗದಲ್ಲಿ ಟೋಲ್ ನಿರ್ಮಾಣ ಮಾಡಲು ಹೊರಟಿರುವುದನ್ನು ವಿರೋಧಿಸಿ, ರೈತ ಸಂಘ ಹಾಗೂ ಹಲವು ಸಂಘಟನೆಗಳ ಸಹಯೋಗದಲ್ಲಿ ಗುಬ್ಬಿ- ಸಿ.ಎಸ್. ಪುರ ರಸ್ತೆ ತಡೆದು ಪ್ರತಿಭಟನೆ ನಡೆಸಿ ಮಾತನಾಡಿದರು.

ಕೂಡಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿ ಟೋಲ್ ನಿರ್ಮಾಣ ಚಿಂತನೆಯನ್ನು ಕೈಬಿಡಬೇಕು. ಇಲ್ಲದೇ ಹೋದರೆ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು

ಈಗಾಗಲೇ ಸುತ್ತಲೂ ಇರುವಂಥ ರಾಷ್ಟ್ರೀಯ ಹೆದ್ದಾರಿಗಳಿಗೆ ಸುಂಕದ ಬರೆ ಹಾಕುತ್ತಿದ್ದೀರಾ. ಮೊದಲಿಗೆ ಈ ರಸ್ತೆಯೇ ಸರಿ ಇಲ್ಲ, ಅವೈಜ್ಞಾನಿಕವಾಗಿ ನೀವು ಇಲ್ಲಿ ಟೋಲ್ ಮಾಡುವುದನ್ನು ಇಲ್ಲಿನ ರೈತರು, ಸಾರ್ವಜನಿಕರು ವಿರೋಧಿಸುತ್ತೇವೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಈ ರಸ್ತೆ ನಿರ್ಮಾಣವಾಗಿ ಸುಮಾರು ಹತ್ತು ವರ್ಷ ಕಳೆದಿದೆ. ಇಷ್ಟು ದಿನ ಇಲ್ಲದ ಟೋಲ್ ನೀತಿಯನ್ನು ಈಗ ಜಾರಿಗೆ ತಂದು ರೈತರಿಂದ, ಸಾರ್ವಜನಿಕರಿಂದ ಟೋಲ್ ಹಣ ವಸೂಲಿ ಮಾಡುವುದು ಸರಿಯಲ್ಲ. ಇಲ್ಲಿ ರಸ್ತೆಯೇ ಸರಿಯಾಗಿ ನಿರ್ಮಾಣವಾಗಿಲ್ಲ, ಸಾಕಷ್ಟು ಸಮಸ್ಯೆಗಳಿವೆ, ದಿನಂಪ್ರತಿ ಅಪಘಾತಗಳು ಸಂಭವಿಸುತ್ತವೆ, ರಸ್ತೆ ಸಾಕಷ್ಟು ಕಿರಿದಾಗಿದ್ದು, ಇಂಥ ರಸ್ತೆಗೆ ಟೋಲ್ ನಿರ್ಮಾಣ ಮಾಡಿದರೆ ಈ ಭಾಗದ ರೈತರ ಸ್ಥಿತಿ ಏನಾಗಬೇಕು ಎಂದು ಪ್ರಶ್ನಿಸಿದರು.

ಮುಖಂಡ ಹೊನ್ನಗಿರಿಗೌಡ ಮಾತನಾಡಿ, ಜಿಲ್ಲೆಯ ಸಂಸದರು ಹಾಗೂ ಕ್ಷೇತ್ರದ ಶಾಸಕರು ಇದರ ಬಗ್ಗೆ ಕೂಡಲೇ ಗಮನಹರಿಸಿ ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಟೋಲ್ ನಿರ್ಮಾಣ ಮಾಡಲು ಅವಕಾಶ ನೀಡಬಾರದು ಹಾಗೂ ಮುಂದುವರಿದರೆ ದೊಡ್ಡ ಮಟ್ಟದ ಹೋರಾಟ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಬಿ. ಆರತಿ ಅವರಿಗೆ ಹಾಗೂ ಕೆಆರ್ ಎಲ್ ಡಿಯ ಎಇಇ ಶ್ರೀಕಾಂತ್ ಅವರಿಗೆ ರೈತ ಸಂಘದಿಂದ ಇಲ್ಲಿ ಟೋಲ್ ನಿರ್ಮಿಸದಂತೆ ಮನವಿ ನೀಡಲಾಯಿತು

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಸಿ. ಶಂಕರಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ಸಿ. ಜಿ ಲೋಕೇಶ್, ರೈತ ಮುಖಂಡರಾದ ಸಿ. ಕೆ. ಪ್ರಕಾಶ್, ದಲಿತ ಮುಖಂಡ ನಾಗರಾಜು, ನಟರಾಜು, ರವೀಶ್ ಜಿ. ಸಿ., ಬೇರೆ ತಾಲೂಕಿನ ರೈತ ಪದಾಧಿಕಾರಿಗಳಾದ ಶಬ್ಬೀರ್, ರಂಗ ಹನುಮಯ್ಯ, ರೆಹಮಾತ್ ಹುಲ್ಲಾ, ಅಜ್ಜಪ್ಪ, ಮಂಜುನಾಥ್, ಮೋಹನ್ ಕಳ್ಳಿಪಾಳ್ಯ, ಕುಮಾರ್, ಶಿವ ಕುಮಾರ್, ಕೃಷ್ಣ ಜೆಟ್ಟಿ ಸೇರಿ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಸಾರ್ವಜನಿಕರು ಇದ್ದರು.