ನಮ್ಮ ಆಡಳಿತ ಮಂಡಳಿ ೧೧ ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಮೂರನೇ ಬಾರಿಯೂ ಅತ್ಯಧಿಕ ಬಹುಮತದಿಂದ ಆಯ್ಕೆ ಮಾಡಿದ್ದೀರಿ
ಯಲ್ಲಾಪುರ: ನಮ್ಮ ಸಂಸ್ಥೆ ಕಳೆದ ೬೦ ವರ್ಷಗಳಲ್ಲಿ ರೈತರ ಬೆನ್ನೆಲುಬಾಗಿ ನಿಂತು ಇಂದು ಪ್ರವರ್ಧಮಾನ ಸ್ಥಿತಿಯಲ್ಲಿದೆ. ಸಂಸ್ಥೆಯ ಲಾಭವೇ ಪ್ರಧಾನವಲ್ಲ. ರೈತರ ಹಿತಕ್ಕೆ ಮಹತ್ವ ನೀಡಿ, ಆಡಳಿತ ಮಂಡಳಿ ಹಲವು ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿ.ಎಂ.ಎಸ್) ದ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಅವರು, ಬುಧವಾರ ಟಿ.ಎಂ.ಎಸ್ ಸಭಾಭವನದಲ್ಲಿ ೬೧ ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ, ಸಭೆಗೆ ಚಾಲನೆ ನೀಡಿ, ಮಾತನಾಡಿ, ರೈತರ ಹಿತಾಸಕ್ತಿಗನುಗುಣವಾಗಿ ನಾವು ಕಾರ್ಯನಿರ್ವಹಿಸುತ್ತೇವೆ. ರೈತರು ತಂದ ಅಡಿಕೆಗೆ ಹಮಾಲಿ ವೆಚ್ಚವನ್ನು ಸಂಘವೇ ಭರಿಸುವುದಕ್ಕೆ ತೀರ್ಮಾನಿಸಿದ್ದೇವೆ. ಅಲ್ಲದೇ ಜೀವನಸುರಕ್ಷಾ ಎಂಬ ವಿಮೆಯನ್ನು ಜಾರಿಗೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಹೆಚ್ಚಿನ ವೆಚ್ಚವನ್ನೂ ಭರಿಸುವಂತೆ ಯೋಜನೆಯನ್ನು ರೂಪಿಸುತ್ತಿದ್ದೇವೆ. ನಮ್ಮ ಮೇಲಿಟ್ಟ ನಮ್ಮ ಗ್ರಾಹಕರ ವಿಶ್ವಾಸ, ನಂಬಿಕೆಗೆ ಎಂದೂ ಹುಸಿಮಾಡುವುದಿಲ್ಲ ಎಂದರು.ನಮ್ಮ ಆಡಳಿತ ಮಂಡಳಿ ೧೧ ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಮೂರನೇ ಬಾರಿಯೂ ಅತ್ಯಧಿಕ ಬಹುಮತದಿಂದ ಆಯ್ಕೆ ಮಾಡಿದ್ದೀರಿ. ಆದರೆ 9 ತಿಂಗಳು ಆಡಳಿತ ಮಂಡಳಿ ಇಲ್ಲದಂತಾಗಿತ್ತು. ನ್ಯಾಯಾಲಯದ ಮೂಲಕ ಹೋರಾಟ ಮಾಡಿ ಆಡಳಿತ ಮಂಡಳಿ ಅಧಿಕಾರ ಹಿಡಿದಿದ್ದೇವೆ ಎಂದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ೫೫ ಸಾವಿರ ಕ್ವಿಂಟಲ್ ಅಡಿಕೆ ರೈತರಿಂದ ಬರಬಹುದೆಂದು ನಿರೀಕ್ಷಿಸಿದ್ದೆವು. ಆದರೆ ೪೮ ಸಾವಿರ ಕ್ವಿಂಟಲ್ ಅಡಿಕೆ ಆವಕ ಬಂದಿದೆ. ಕೆಲ ರೈತರು ಯಾವುದೋ ಕಾರಣಕ್ಕೆ ಬೇರೆಡೆ ಅಡಿಕೆ ಹಾಕಿರಬಹುದು ಎಂದರು.ಈಗ ಬರುತ್ತಿರುವ ಅಡಿಕೆಯ ಪ್ರಮಾಣ ಗಮನಿಸಿ ಹೊಸ ಜಾಗವನ್ನು ಖರೀದಿಸಿದ್ಧೇವೆ. ಅಲ್ಲಿ ಕಟ್ಟಡ ನಿರ್ಮಾವಾಗಬೇಕು ಮತ್ತು ಮುಂಡಗೋಡಿನಲ್ಲಿ ಬೃಹತ್ ಪ್ರಮಾಣದಲ್ಲಿ ಅಡಿಕೆ ಬೆಳೆಗಾರರಿದ್ದಾರೆ ಅವರಿಗೆ ಮಾರುಕಟ್ಟೆಯಿಲ್ಲ. ಅಲ್ಲಿ ಒಂದು ಶಾಖೆಯನ್ನು ಮಾಡಿ, ಗೋದಾಮು ಬಾಡಿಗೆ ಪಡೆದು ಅಡಿಕೆಯನ್ನು ಸಂಗ್ರಹಿಸಿ ಯಲ್ಲಾಪುರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಬಗ್ಗೆ ಪ್ರಯತ್ನಿಸುತ್ತಿದ್ದೇವೆ ಎಂದರು.
ನಿಧನರಾದ ಸಂಘದ ಸದಸ್ಯರಾಗಿದ್ದ 30 ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ನಿರ್ದೇಶಕರಾದ ವೆಂಕಟ್ರಮಣ ಭಟ್ಟ ಕಿರಕುಂಭತ್ತಿ, ಮಂಜುನಾಥ ಹೆಗಡೆ ಜಡ್ಡಿಗದ್ದೆ, ಗಣಪತಿ ಹೆಗಡೆ ಹಿತ್ಲಳ್ಳಿ, ಗಣಪತಿ ಮುದ್ದೆಪಾಲ, ಸೌಮ್ಯಾ ಭಟ್ಟ ಕಿಚ್ಚುಪಾಲ, ಸೀತಾ ಮೆಣಸುಮನೆ, ಹನುಮಂತ ಕೊರವರ, ಸಾಲು ಸಿದ್ದಿ ಶಿಸ್ತಮುಡಿ, ರಾಜೇಂದ್ರ ಗೌಡ, ಅಪ್ಪು ಆಚಾರಿ ಉಪಸ್ಥಿತರಿದ್ದರು.
ವಿಶ್ವದರ್ಶನ ಬಿಎಡ್ ಪ್ರಶಿಕ್ಷಣಾರ್ಥಿ ಪೂರ್ವಿ ಡಿ.ಎಸ್ ಪ್ರಾರ್ಥಿಸಿದರು. ಉಪಾಧ್ಯಕ್ಷ ನರಸಿಂಹ ಕೋಣೆಮನೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಭಾರಿ ಮುಖ್ಯಕಾರ್ಯನಿರ್ವಾಹಕ ಸುದೀಪ್ ಹೆಗಡೆ ವರದಿ ವಾಚಿಸಿದರು. ವಿನಾಯಕ ಮೆಣಸುಮನೆ ನಿರ್ವಹಿಸಿದರು. ನಿರ್ದೇಶಕ ಸುಬ್ರಾಯ ಭಟ್ಟ ಬೋಳ್ಮನೆ ವಂದಿಸಿದರು.