ಕಡಲೆಕಾಳು ಕೊಟ್ಟು ಕಂಗಾಲಾದ ಗದಗ, ಕೊಪ್ಪಳ ರೈತರು!

| Published : Jun 09 2025, 01:26 AM IST

ಸಾರಾಂಶ

ರೈತರಿಂದ ಕಡಲೆ ಖರೀದಿ ಮಾಡಿ ಹಣ ನೀಡದೇ ಸತಾಯಿಸುತ್ತಿರುವ ಕಂಪನಿ ವಿರುದ್ಧ ರೈತರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಜೂ. 16ರಿಂದ ಗದಗ ಡಿಸಿ ಕಚೇರಿಗೆ ಜಾನುವಾರುಗಳೊಂದಿಗೆ ಮುತ್ತಿಗೆ ಹಾಕಿ, ಅಲ್ಲಿಯೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ವಿಶೇಷ ವರದಿ

ಗದಗ:ರೈತರಿಂದ ಕಡಲೆ ಖರೀದಿ ಮಾಡಿ ಹಣ ನೀಡದೇ ಸತಾಯಿಸುತ್ತಿರುವ ಕಂಪನಿ ವಿರುದ್ಧ ರೈತರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಜೂ. 16ರಿಂದ ಗದಗ ಡಿಸಿ ಕಚೇರಿಗೆ ಜಾನುವಾರುಗಳೊಂದಿಗೆ ಮುತ್ತಿಗೆ ಹಾಕಿ, ಅಲ್ಲಿಯೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಗದಗ, ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಿಂದ ಕೃಷಿಕ ಹೈಟೆಕ್ ಸೀಡ್ಸ್ ಎನ್ನುವ ಕಂಪನಿ ಕಾರ್ಯ ನಿರ್ವಹಿಸುತ್ತಿದೆ. ರೈತರಿಂದ ಕಡಲೆ ಖರೀದಿ ಮಾಡಿ ಅವರಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಹಣ ನೀಡಿ ರೈತರ ವಿಶ್ವಾಸ ಗಳಿಸಿದೆ. ಈಗ ಖರೀದಿ ಮಾಡಿದ ಕಡಲೆ ಬೆಳೆಯ ಹಣ ಪಾವತಿ ಮಾಡಿಲ್ಲ. ಅದರಿಂದ ರೈತರು ಕಂಗಾಲಾಗಿದ್ದಾರೆ.ಕಂಪನಿಯ ಹಿನ್ನೆಲೆ:ಗದಗ ತಾಲೂಕಿನ ಬಿಂಕದಕಟ್ಟಿಯ ಅರವಿಂದ ಹುಚ್ಚಣ್ಣವರ ಹಾಗೂ ಇನ್ನೋರ್ವ ಪಾಲುದಾರ ರೋಣ ತಾಲೂಕು ಮಲ್ಲಾಪುರ ಗ್ರಾಮದ ಚಂದ್ರಶೇಖರ ಅರಹುಣಸಿ ಜತೆಗೂಡಿ ಈ ಕಂಪನಿ ಸ್ಥಾಪಿಸಿದ್ದಾರೆ. ಹಲವಾರು ಬಾರಿ ರೈತರಿಂದ ಕಡಲೆ ಖರೀದಿಸಿ ಹಣ ನೀಡಿದ್ದಾರೆ. ಈ ಮಧ್ಯೆ ಚಂದ್ರಶೇಖರ ಅರಹುಣಸಿ ಆತ್ಮಹತ್ಯೆ ಮಾಡಿಕೊಂಡರು. ತಮ್ಮ ಡೆತ್‌ನೋಟ್‌ನಲ್ಲಿ ಕಂಪನಿಯ ಸಾಲದ ವಿವರಗಳು, ರೈತರಿಗೆ ಪಾವತಿಸಬೇಕಾದ ಹಣದ ವಿವರಗಳನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಆದರೆ ಇದುವರೆಗೂ ರೈತರಿಗೆ ಹಣ ಮಾತ್ರ ಸಿಕ್ಕಿಲ್ಲ. ಪ್ರಯತ್ನ ಫಲಿಸಿಲ್ಲ: ಹಣ ಪಾವತಿಸುವ ಹೊಣೆಗಾರಿಕೆಯನ್ನು ಹೊಂದಿರುವ ಕಂಪನಿಯ ಪಾಲುದಾರ ಕುಟುಂಬಗಳ ಸದಸ್ಯರೊಂದಿಗೆ ನೊಂದ ರೈತರು ಹಲವಾರು ಬಾರಿ ಸಭೆ ನಡೆಸಿ, ಚರ್ಚಿಸಿ, ನಮ್ಮ ಹಣ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಜಗ್ಗದೇ ಇರುವ ಹಿನ್ನೆಲೆಯಲ್ಲಿ ಗದಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲಿ ರಾಜೀ ಸಂಧಾನದ ಮೂಲಕ ಒಂದು ಒಪ್ಪಂದ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ನೇತೃತ್ವದಲ್ಲಿಯೂ ಸಂಧಾನ ಸಭೆಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಜಾನುವಾರುಗಳೊಂದಿಗೆ ಡಿಸಿ ಕಚೇರಿ ಮುತ್ತಿಗೆ:ಗದಗ, ಕೊಪ್ಪಳ ಜಿಲ್ಲೆಗಳ ಬೆಳವಣಕಿ, ಮಲ್ಲಾಪುರ, ಹಡಗಲಿ, ಕವಲೂರ, ಬನ್ನಿಕೊಪ್ಪ, ಮನ್ನಾಪುರ, ಅಬ್ಬಿಗೇರಿ ಗ್ರಾಮಗಳ 160ಕ್ಕೂ ಹೆಚ್ಚಿನ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಒಟ್ಟು ರೈತರಿಗೆ ಬರಬೇಕಾದ ಹಣ ₹9 ಕೋಟಿ. ಆದರೆ ಹಿರಿಯರು ರಾಜೀ ಸಂಧಾನ ನಡೆಸಿ, ₹6 ಕೋಟಿ ಕೊಡುವಂತೆ ಸೂಚಿಸಿದ್ದಾರೆ. ಕಂಪನಿಯ ಇಬ್ಬರು ಪಾಲುದಾರರು ತಲಾ ₹3 ಕೋಟಿ ಕೊಡುವಂತೆ ಸೂಚಿಸಿದ್ದರು. ಇದಕ್ಕೆ ಎಲ್ಲರೂ ಒಪ್ಪಿದ್ದರು. ಆದರೆ ಇದುವರೆಗೂ ಹಣ ರೈತರ ಕೈಗೆ ಬಾರದ ಹಿನ್ನೆಲೆಯಲ್ಲಿ, ನೊಂದ ರೈತರು ಜೂ. 16ರಂದು ಜಾನುವಾರುಗಳೊಂದಿಗೆ ಡಿಸಿ ಕಚೇರಿಗೆ ಆಗಮಿಸಿ, ಜಾನುವಾರುಗಳನ್ನು ಅಲ್ಲಿಯೇ ಕಟ್ಟಿ, ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದಾರೆ. ಇದಕ್ಕೂ ಮೊದಲು ಮಾ. 24ರಂದು ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಮನವಿ ಸಲ್ಲಿಸಿದ ವೇಳೆಯಲ್ಲಿ ಒಂದು ವಾರದ ಅವಕಾಶ ಕೇಳಿದ ಕಾರಣ, ರೈತರು ಜೂ. 3ರ ವರೆಗೆ ಕಾದಿದ್ದಾರೆ. ಏ. 5ರಂದು ಗದಗ ಎಸ್ಪಿ ಅವರ ನೇತೃತ್ವದಲ್ಲಿ ಸಭೆ ನಡೆಯಬೇಕಿತ್ತು. ಅದೂ ನಡೆದಿಲ್ಲ. ಹೀಗಾಗಿ ಜೂ. 16ರಂದು ಪ್ರತಿಭಟನೆ ಪ್ರಾರಂಭಿಸಲು ರೈತರು ನಿರ್ಧರಿಸಿದ್ದಾರೆ.

ರೈತರು ಕೇಳುತ್ತಿರುವ ಪ್ರಶ್ನೆಗಳು:ಚಂದ್ರಶೇಖರ ಅವರ ಮೃತ್ಯುಪತ್ರವನ್ನೇ ಆಧಾರ ಮಾಡಿಕೊಂಡು ರೈತರಿಗೆ ಹಣ ಪಾವತಿಸಲು ಕ್ರಮ ಏಕೆ ಕೈಗೊಳ್ಳಲಾಗುತ್ತಿಲ್ಲ? ಬಾಕಿ ಹಣ ಪಾವತಿಸುವಲ್ಲಿ ವಿಳಂಬಕ್ಕೆ ಕಾರಣವಾದವರ ವಿರುದ್ಧ ಕಾನೂನು ಕ್ರಮ ಏಕೆ ಕೈಗೊಳ್ಳಲಾಗುತ್ತಿಲ್ಲ? ರೈತರ ಸಮಸ್ಯೆಯನ್ನು ಅರಿತಿರುವ ಮತ್ತು ಹೊಣೆಗಾರರಾಗಿರುವ ಸರ್ಕಾರ ಮತ್ತು ಅಧಿಕಾರಿಗಳು ಕೇವಲ ಮಾತುಗಳಿಗೆ ಸೀಮಿತವಾಗುವುದು ಯಾಕೆ? ನಮಗಾದ ಅನ್ಯಾಯಕ್ಕೆ ನ್ಯಾಯ ಕೊಡುವವರೇ ಇಲ್ಲವೇ ಎನ್ನುವ ಹತ್ತಾರು ಪ್ರಶ್ನೆಗಳನ್ನು ರೈತರು ಕೇಳುತ್ತಿದ್ದಾರೆ.

ಪ್ರತಿಭಟನೆಯ ನೇತೃತ್ವವನ್ನು ಶರಣಪ್ಪ ಹದ್ಲಿ, ಗಣೇಶ ಚಿಕ್ಕರಡ್ಡಿ, ನಾಗರಾಜ ಶಿರೋಳ, ಅಶೋಕ ದಾನರಡ್ಡಿ, ಶಿವು ಆದಾಪುರ, ನಿಂಗಪ್ಪ ಚವಡಿ, ಯಂಕಣ್ಣ ಯರಾಸಿ, ರಮೇಶ ಭೀಮರಡ್ಡಿ, ಕುಮಾರ ಯಾರಶಿ, ಮೇಘರಾಜ ಭಾವಿ, ಮಲ್ಲಿಕಾರ್ಜುನ ಕಂದಗಲ್ಲ, ಮಲ್ಲಣ್ಣ ಯರಾಶಿ, ಚಿದಾನಂದ ದಾನರಡ್ಡಿ, ಶಿವಮ್ಮ ಶಿರೋಳ, ಪುಷ್ಪಾ ಸೋಮರಡ್ಡಿ, ಗಂಗಮ್ಮ ಗಡಗಿ, ಪ್ರಕಾಶ ದಾನರಡ್ಡಿ, ವಸಂತ ಮೇಟಿ ಮುಂತಾದವರು ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.