ಸಾರಾಂಶ
ಶಿವಾನಂದ ಅಂಗಡಿ ಹುಬ್ಬಳ್ಳಿ
ಧಾರವಾಡ ಜಿಲ್ಲೆ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಕಳೆದ ಎರಡು ವಾರದಿಂದ ಸುರಿಯುತ್ತಿರುವ ಮಳೆಗೆ ಹೆಸರು ಬೆಳೆ ನಾಶವಾಗಿದ್ದು, ಲಕ್ಷ ಲಕ್ಷ ರುಪಾಯಿ ಕೊಟ್ಟು ಲಾವಣಿ ಹೊಲ ಮಾಡಿದ ಅಣ್ಣಿಗೇರಿ ರೈತರು ಕಣ್ಣೀರು ಸುರಿಸುತ್ತಿದ್ದಾರೆ.ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಹೆಸರು ಕಟಾವು ಆಗಿ ರೈತರು ಬಂಪರ್ ದರ ಪಡೆಯಬೇಕಾಗಿತ್ತು. ಹುಬ್ಬಳ್ಳಿ, ಗದಗ ಸೇರಿ ವಿವಿಧ ಮಾರುಕಟ್ಟೆಗಳಲ್ಲಿ ಕ್ವಿಂಟಲ್‌ಗೆ ಸದ್ಯ ₹ 9ರಿಂದ 10 ಸಾವಿರದ ವರೆಗೂ ಬೆಲೆ ಇದೆ. ಆದರೆ, ಹಂಗಾಮಿನ ಸಂದರ್ಭದಲ್ಲಿ ಸುರಿದ (ಆ.3ರಿಂದ 16) ಆಶ್ಲೇಷಾ ಮಳೆ, ಆ.17ರಿಂದ ಮಾಘ ಮಳೆ ಕೃಷಿ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ.
ಲಕ್ಷಾಂತರ ಪರಿಹಾರಕ್ಕೆ ಆಗ್ರಹ: ಅಣ್ಣಿಗೇರಿಯಲ್ಲಿ ಈ ಬಾರಿ 4 ಎಕರೆಗೆ ₹1 ಲಕ್ಷ ಕೊಟ್ಟು ರೈತರು ಲಾವಣಿ ಮಾಡಿದ್ದಾರೆ. ಬಿತ್ತನೆಗೆ ಹೆಸರು ಕಾಳು ಬೀಜ, ಗೊಬ್ಬರ, ಎಡೆ ಹೊಡೆಯುವುದು, ಕಳೆ ತೆಗೆಯಲು ಹೀಗೆ ಸಹಸ್ರಾರು ರುಪಾಯಿಗಳನ್ನು ರೈತರು ಖರ್ಚು ಮಾಡಿದ್ದು, ಮುಂಗಾರಿ ಹಂಗಾಮಿನಲ್ಲೇ ಲಕ್ಷಾಂತರ ರು. ನಷ್ಟ ಅನುಭವಿಸಿದ್ದಾರೆ.ವೆಚ್ಚದ ಹಣವೇ ಬಂದಿಲ್ಲ: ಎಕರೆಗೆ ₹25 ಸಾವಿರದಂತೆ 12 ಎಕರೆ ಹೊಲ ಲಾವಣಿ ಮಾಡಿದ್ದೇನೆ. ರೋಗ, ಕೀಟ ಬಾಧೆಯಿಂದಾಗಿ ಇಳುವರಿ ತೀವ್ರ ಕುಸಿತವಾಗಿ ಎಕರೆಗೆ ಒಂದು ಕ್ವಿಂಟಲ್ ಇಳುವರಿ ಬಂದಿದೆ. ₹10 ಸಾವಿರ ಮಿಕ್ಕಿ ದರ ಸಿಕ್ಕಿದೆ. ಹೆಸರು ಬೇಸಾಯಕ್ಕೆ ₹3 ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದೇನೆ. ಹೀಗಾಗಿ ಲಾವಣಿಗೆ ಕೊಟ್ಟ ಹಣ ಸೇರಿ ವೆಚ್ಚದ ಹಣವೂ ಬಾರದೇ ತೀವ್ರ ನಷ್ಟವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ರೈತರೊಬ್ಬರು ಅಳಲು ತೋಡಿಕೊಂಡರು.
ಕೀಟ, ರೋಗಬಾಧೆಯಿಂದಾಗಿ ಹೆಸರು ಬೆಳೆ ಇಳುವರಿ ತೀವ್ರ ಹೊಡೆತ ಬಿದ್ದಿದ್ದು, ಹೆಸರು ಕಟಾವಿಗೆ ಅಣ್ಣಿಗೇರಿಗೆ ಬಂದಿದ್ದ 100ಕ್ಕೂ ಅಧಿಕ ಕಟಾವು ಯಂತ್ರಗಳು ಎರಡು ವಾರದಿಂದ ಹಾಗೆ ನಿಂತಿವೆ. ತೀವ್ರ ನಷ್ಟ ಅನುಭವಿಸಿದ ಹೆಸರು ಬೆಳೆಗಾರರಿಗೆ ಎಕರೆ ₹ 50 ಸಾವಿರ ಪರಿಹಾರ ಕೊಡಬೇಕು ಎಂದು ಆ. 20ರಂದು ಅಣ್ಣಿಗೇರಿಯಲ್ಲಿ ದಾಸೋಹ ಮಠದ ಸ್ವಾಮೀಜಿ ನೇತೃತ್ವದಲ್ಲಿ ರೈತರೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಣ್ಣಿಗೇರಿ ತಾಲೂಕು ಪಕ್ಷ ರೈತ ಹೋರಾಟ ಸಮಿತಿ ಅಧ್ಯಕ್ಷ ಭಗವಂತಪ್ಪ ರಾಮಪ್ಪ ಪುಟ್ಟಣ್ಣವರ ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.ಧಾರವಾಡ ಜಿಲ್ಲೆಯಲ್ಲಿ 97,406 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿದೆ. ಧಾರವಾಡ-13646, ಹುಬ್ಬಳಅಳಿ ಕುಂದಗೋಳ-17,000, ನವಲಗುಂದ-30,000, ಅಣ್ಣಿಗೇರಿ ತಾಲೂಕಿನಲ್ಲಿ 20,500 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿದೆ.
ಇತರ ಬೆಳೆಗಳಿಗೆ ಹಾನಿ: ಜಿಲ್ಲೆಯಲ್ಲಿ ಸದ್ಯ ಸುರಿಯುತ್ತಿರುವ ಮಳೆಯಿಂದ ಹತ್ತಿ, ಗೋವಿನಜೋಳ, ಸೋಯಾಬಿನ್, ಶೇಂಗಾ, ಮೆಣಸಿನಕಾಯಿ, ಉಳ್ಳಾಗಡ್ಡಿ ಬೆಳೆಗೂ ತೀವ್ರ ಹಾನಿ ಮಾಡಿದೆ.ಮಳೆ ಶುರು ಆಗಿ 15 ದಿನ ಆತು, ಹೊಲಕ್ಕೆ ಹೋಗಲು ಆಗುತ್ತಿಲ್ಲ. ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತವಾಗಿದ್ದು, ಹೊಲವನ್ನಾದರೂ ಸ್ವಚ್ಛ ಮಾಡುತ್ತವೆ ಎಂದರೆ ಸಾಧ್ಯವಾಗುತ್ತಿಲ್ಲ. ಬೆಳೆ ಕಟಾವಿಗೆ ಬಂದು 15 ದಿನ ಆತು, ಈಗಲೇ ಮಳೆ ನಿಂತರೂ ನಾಲ್ಕೈದು ದಿನ ಕೆಲಸ ಮಾಡಲೂ ಆಗದ ಸ್ಥಿತಿ ಇದೆ ಎಂದು ರೈತರು ಹೇಳುತ್ತಾರೆ.
ಪ್ರತಿ ವರ್ಷ ಹೆಸರು ಕಟಾವು ಹಂಗಾಮಿನಲ್ಲೇ ಅಣ್ಣಿಗೇರಿಗೆ ಬರುತ್ತೇವೆ. ಆದರೆ ಎರಡು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕಟಾವು ಒತ್ತಟ್ಟಿಗಿರಲಿ, ಹೊಲಕ್ಕೆ ಕಟಾವು ಯಂತ್ರ ಹೋಗದ ಸ್ಥಿತಿ ಇದೆ. ಮಲಗಲು ಸಹ ಜಾಗ ಇಲ್ಲ, ಮೇಲಾಗಿ ಊಟಕ್ಕೂ ತೊಂದರೆಯಾಗಿದೆ. ಹೀಗಾಗಿ ಅಣ್ಣಿಗೇರಿ ಪೆಟ್ರೋಲ್ ಬಂಕ್‌ನಲ್ಲಿ ಕಟಾವು ಯಂತ್ರ ನಿಲ್ಲಿಸಿ ಊರಿಗೆ ಬಂದಿದ್ದೇನೆ ಎಂದು ಕಂಪ್ಲಿಯಿಂದ ಕಟಾವು ಯಂತ್ರ ತಂದ ಮಂಜು ತಿಳಿಸಿದ್ದಾರೆ.ಹೆಸರು ಕಟಾವಿಗೆ ಬಂದು 15 ದಿನಗಳಾತು, ಆದರೆ ರಾಶಿ ಮಾಡಲು ಮಳೆ ಬಿಡುವು ಕೊಡುತ್ತಿಲ್ಲ. ಮಳೆಯಿಂದ ಹೆಸರು ಹೊಲದಲ್ಲೇ ಕೆಟ್ಟಿದೆ. ಹೊಲಕ್ಕೆ ಹೋಗುವುದೇ ಕಷ್ಟವಾಗಿದೆ. ಸದ್ಯ ಮಳೆ ನಿಂತರೂ ಭೂಮಿ ಆರಲು ಇನ್ನು ನಾಲ್ಕೈದು ದಿನ ಬೇಕು ಎಂದು ಹಳ್ಳಿಕೇರಿ ರೈತ ಈರಣ್ಣ ಸೊಲಬಣ್ಣವರ ತಿಳಿಸಿದ್ದಾರೆ.