ಭೂಮಿ ಕೊಟ್ಟ ರೈತರಿಗೆ ಪರಿಹಾರ ನೀಡಿಲ್ಲ: ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಜೆ.ಎಂ.ಶಿವಲಿಂಗಯ್ಯ

| Published : Aug 30 2024, 01:01 AM IST

ಭೂಮಿ ಕೊಟ್ಟ ರೈತರಿಗೆ ಪರಿಹಾರ ನೀಡಿಲ್ಲ: ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಜೆ.ಎಂ.ಶಿವಲಿಂಗಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆ ಪರಿಹಾರ ನೀಡುವುದಾಗಿ ಹೇಳಿ ಸುಮಾರು 22 ವರ್ಷ ಕಳೆದರೂ ಇಲ್ಲಿಯವರೆಗೆ ಯಾವುದೇ ಪರಿಹಾರ ನೀಡದೆ ರೈತರಿಗೆ ವಂಚಿಸಿದ್ದಾರೆ ಎಂದು ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಜೆ ಎಂ ಶಿವಲಿಂಗಯ್ಯ ಆರೋಪಿಸಿದ್ದಾರೆ. ಕನಕಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕನಕಪುರ

ಶ್ರೀ ಸಾಯಿಸ್ಪೂರ್ತಿ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ವೇಳೆ, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವುದಾಗಿ ಹೇಳಿ ಸುಮಾರು 22 ವರ್ಷ ಕಳೆದರೂ ಇಲ್ಲಿಯವರೆಗೆ ಯಾವುದೇ ಪರಿಹಾರ ನೀಡದೆ ರೈತರಿಗೆ ವಂಚಿಸಿದ್ದಾರೆ ಎಂದು ಪ್ರಜಾ ಪರಿವರ್ತನಾ ವೇದಿಕೆ ಜಿಲ್ಲಾಧ್ಯಕ್ಷ ಜೆ ಎಂ ಶಿವಲಿಂಗಯ್ಯ ಆರೋಪಿಸಿದ್ದಾರೆ.

ಚುಂಚಿ ಕಾಲೋನಿಯಲ್ಲಿರುವ ಶ್ರೀ ಸಾಯಿ ವಿದ್ಯುತ್ ಉತ್ಪಾದನಾ ಘಟಕದ ಆವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವುದಾಗಿ ಹೇಳಿ ಮೋಸದಿಂದ ದಲಿತರ ಭೂಮಿಯನ್ನು ಕಬಳಿಸಿ ಪವರ್ ಹೌಸ್ ನಿರ್ಮಾಣ ಮಾಡಲಾಗಿದೆ. ಅವರಿಗೆ ಯಾವುದೇ ಪರಿಹಾರ ನೀಡದೇ ಅನ್ಯಾಯ ಮಾಡಿದ್ದಾರೆ. ವಿದ್ಯುತ್ ಘಟಕ ಸ್ಥಾಪನೆ ವೇಳೆ ರೈತರಿಂದ ಭೂಮಿ ಬರೆಸಿಕೊಂಡು ಅವರಿಗೆ ಹಣ ನೀಡದೆ ವಂಚಿಸಿರುವುದರಿಂದ ದಲಿತರ ಬದುಕು ಬೀದಿಗೆ ಬಿದ್ದಿದೆ. ರೈತರು ತಮ್ಮ ಜಮೀನಿಗೆ ಹೋಗಲು ಸಾಧ್ಯವಾಗದೆ ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂಮಿ ಕಳೆದುಕೊಂಡ ರೈತ ಪುಟ್ಟಮರೀಗೌಡ ಮಾತನಾಡಿ, ನಮ್ಮ ಜಮೀನಿನಲ್ಲಿ ನಾಲೆ ಹಾದು ಹೋಗಿದ್ದು ಯಾವುದೇ ಪರಿಹಾರವನ್ನೂ ನೀಡಿಲ್ಲ, ನಾಳೆಯ ಕೆಳಗಡೆ ಇರುವ ಜಮೀನುಗಳಿಗೆ ಹೋಗಲು ಸೇತುವೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವುದಾಗಿ ಹೇಳಿ ಪರಿಹಾರವನ್ನೂ ನೀಡಿಲ್ಲ. ನಾಲೆಗೆ ತಡೆಗೋಡೆ ನಿರ್ಮಾಣ ಮಾಡದೇ ದನ ಕರುಗಳು ಪ್ರವಾಸಿಗರ ಕಾರುಗಳು ಬಿದ್ದು ಅನಾಹುತಗಳು ಸಂಭವಿಸಿವೆ. ಸೇತುವೆ ಇಲ್ಲದೆ ನಾಲೆ ಕೆಳಗೆ ಇರುವ ಜಮೀನಿನಲ್ಲಿ ವ್ಯವಸಾಯ ಮಾಡದೆ ರೈತರು ಕಂಗಾಲಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಜಮೀನಿನ ಮೇಲೆ ಅರವತ್ತಾರು ಕೆ ವಿ ವಿದ್ಯುತ್ ಕಂಬಗಳು ಹಾದು ಹೋಗಿದ್ದು, ಅದರ ವಿದ್ಯುತ್ ತಂತಿಗಳು ಜೋತು ಬಿದ್ದಿರುವುದರಿಂದ ಬಾಳೆ ಗಿಡಗಳಿಗೆ ವಿದ್ಯುತ್ ಪ್ರಸರಿಸುವ ಸಾಧ್ಯತೆ ಇದೆ. ಜಮೀನಿನಲ್ಲಿ ಮೂರು ಸಾವಿರದ ಐನೂರು ಬಾಳೆ ಗಿಡಗಳನ್ನು ಹಾಕಿದ್ದು, ಸುಮಾರು ಹದಿನೈದು ದಿನಗಳಿಂದ ಬಾಳೆ ಗಿಡಗಳು ನೀರಿಲ್ಲದೆ ಸೊರಗುತ್ತಿವೆ. ಎಷ್ಟೇ ಮನವಿ ಮಾಡಿದರೂ ಯಾರೂ ಕೂಡ ಗಮನ ಹರಿಸಿಲ್ಲ ಎಂದು ಪ್ರಕಾಶ್ ಹಾಗೂ ದೇವೇಗೌಡ ಅಳಲು ತೋಡಿಕೊಂಡರು.

ಈ ವೇಳೆ ನಾಗರಾಜು, ಮುನಿಯಯ್ಯ, ಕುಂದೂರೇಗೌಡ, ಸಿದ್ದಯ್ಯ, ಬಲೆಜೋಗಯ್ಯ, ಕರಿಗುಂಡಯ್ಯ, ಸುನಿಲ್, ನಂಜುಂಡಯ್ಯ, ಲಿಂಗಾಚಾರಿ, ಸಿದ್ದರಾಮಯ್ಯ, ಮರಿಸಿದ್ದಯ್ಯ, ಚಿಕ್ಕಣ್ಣಗೌಡ, ಬೊಮ್ಮಯ್ಯ, ಚಿಕ್ಕನಂಜಯ್ಯ, ಕುಮಾರ, ಮಾದಯ್ಯ, ಬೆಟ್ಟಮ್ಮ, ಭದ್ರಮ್ಮ, ಶಿವದುಂಡಮ್ಮ, ರತ್ನಮ್ಮ, ಸಾಕಮ್ಮ ಗೌರಮ್ಮ ಪಾಲ್ಗೊಂಡಿದ್ದರು.