ಕೊಬ್ಬರಿ ಖರೀದಿ ನೋಂದಣಿಗೆ ಮುಗಿಬಿದ್ದ ರೈತರು

| Published : Mar 06 2024, 02:20 AM IST

ಸಾರಾಂಶ

ತಡರಾತ್ರಿಯಿಂದಲೇ ನೂರಾರು ರೈತರು ಎನ್‌ಐಸಿ ತಂತ್ರಾಂಶದಲ್ಲಿ ಫ್ರೂಟ್ಸ್‌ ಐಡಿ ಮೂಲಕ ನೋಂದಣಿಗಾಗಿ ತಿಂಡಿ, ಊಟ ಬಿಟ್ಟು ಕಾದು ಕುಳಿತ್ತಿದ್ದರು. ದಲ್ಲಾಳಿಗಳ ಉಪಟಳ ತಪ್ಪಿದ ಸಂಭ್ರಮದಲ್ಲಿ ತಮ್ಮ ಹೆಸರು ನೋಂದಣಿಗೆ ಹರಸಾಹಸಪಟ್ಟರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಬೆಂಬಲ ಬೆಲೆ ನೀಡಿ ಕೊಬ್ಬರಿ ಖರೀದಿಸಲು ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ತೆರೆಯಲಾಗಿದ್ದ ಖರೀದಿ ಕೇಂದ್ರದಲ್ಲಿ ರೈತರು ಹೆಸರು ನೋಂದಾಯಿಸಲು ಮುಗಿಬಿದ್ದ ಘಟನೆ ನಡೆಯಿತು.

ಮಧ್ಯವರ್ತಿಗಳ ಕಾಟವಿಲ್ಲದೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಏಜೆನ್ಸಿ ಮೂಲಕ ನೂರಾರು ರೈತರು ಕೊಬ್ಬರಿಯನ್ನು ಖರೀದಿಸಲು ತೆರೆದಿದ್ದ ನೋಂದಣಿ ಘಟಕದ ಮುಂದೆ ತಡರಾತ್ರಿಯಿಂದಲೇ ಠಿಕಾಣಿ ಹೂಡಿದ್ದರು.

ಸುತ್ತಮುತ್ತ ಬಿದ್ದಿದ್ದ ತೆಂಗಿನಗರಿ, ಕಾಯಿಮೊಟ್ಟೆ ಒಂದೆಡೆ ಸೇರಿಸಿ ಬೆಳಗ್ಗೆ ಬೆಂಕಿ ಕಾಯಿಸಿಕೊಂಡು ಸರತಿಯಲ್ಲಿ ನಿಂತರು. ಉಂಡೆ ಕೊಬ್ಬರಿಗೆ ಈ ಬಾರಿ ಕ್ವಿಂಟಾಲ್‌ಗೆ 12 ಸಾವಿರ ರು. ಬೆಲೆ ನಿಗದಿಯಾದ ಹಿನ್ನೆಲೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿದೆ ಎಂದು ಹೋಬಳಿಯ ರೈತರ ಮೊಗದಲ್ಲಿ ಹರ್ಷದ ಸಂಭ್ರಮ ಮನೆ ಮಾಡಿತ್ತು.

ತಡರಾತ್ರಿಯಿಂದಲೇ ನೂರಾರು ರೈತರು ಎನ್‌ಐಸಿ ತಂತ್ರಾಂಶದಲ್ಲಿ ಫ್ರೂಟ್ಸ್‌ ಐಡಿ ಮೂಲಕ ನೋಂದಣಿಗಾಗಿ ತಿಂಡಿ, ಊಟ ಬಿಟ್ಟು ಕಾದು ಕುಳಿತ್ತಿದ್ದರು. ದಲ್ಲಾಳಿಗಳ ಉಪಟಳ ತಪ್ಪಿದ ಸಂಭ್ರಮದಲ್ಲಿ ತಮ್ಮ ಹೆಸರು ನೋಂದಣಿಗೆ ಹರಸಾಹಸಪಟ್ಟರು.

ಇಡೀ ರಾತ್ರಿ ನಿದ್ರೆಗೆಟ್ಟು ನಿಂತಿದ್ದ ರೈತರು ಊಟ ತಿಂಡಿ ಬಿಟ್ಟು ಕಾದು ಕುಳಿತಿದ್ದರು.

ಮಧ್ಯಾಹ್ನ ಸರತಿ ಬಿಟ್ಟು ಹಲವರು ನೂಕಾಟ ನಡೆಸಿ ನೋಂದಣಿಗೆ ಮುಂದಾದರು. ಪರಿಣಾಮ ಕೆಲಕಾಲ ಗದ್ದಲ ನಡೆಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ತಹಬಂದಿಗೆ ತಂದರು. ನೋಂದಣಿಗೆ ಸಾಕಷ್ಟು ಸಮಯವಿದ್ದು ರೈತರು ಗದ್ದಲ ಮಾಡದಂತೆ ರೈತ ಮುಖಂಡರು ಮನವಿ ಮಾಡಿದರೂ ಇದಕ್ಕೆ ಯಾವುದೇ ರೈತರು ಸ್ಪಂದಿಸದೆ ನೋಂದಣಿಗೆ ಬಿಗಿಬಿದ್ದರು.