ಯೂರಿಯಾಕ್ಕಾಗಿ ರಾತ್ರಿಯಿಡಿ ಸೊಸೈಟಿ ಎದುರು ಮಲಗಿದ ರೈತರು!

| Published : Jul 30 2025, 12:47 AM IST

ಯೂರಿಯಾಕ್ಕಾಗಿ ರಾತ್ರಿಯಿಡಿ ಸೊಸೈಟಿ ಎದುರು ಮಲಗಿದ ರೈತರು!
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಸಂಘದಲ್ಲಿ ಮಂಗಳವಾರ ಮುಂಜಾನೆ ಗೊಬ್ಬರ ವಿತರಿಸಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರೈತರು ಸೋಮವಾರ ರಾತ್ರಿಯೇ ಆಗಮಿಸಿ ಸರದಿಯಲ್ಲಿ ನಿಂತಿದ್ದರು. ಮಂಗಳವಾರ ಮುಂಜಾನೆ ಬಂದಲ್ಲಿ ಸಾಲು ದೊಡ್ಡದಾಗಿ ತಮಗೆ ಗೊಬ್ಬರ ಸಿಗಲಿಕ್ಕಿಲ್ಲ ಎಂದು ಸೋಮವಾರ ರಾತ್ರಿ ಅಲ್ಲಿಯೇ ಅಲ್ಲಿ ಮಲಗಿದರು. ಅಲ್ಲಿಯೇ ಊಟ ತರಿಸಿಕೊಂಡು ಸವಿದರು.

ಕೊಪ್ಪಳ:

ಯೂರಿಯಾ ಗೊಬ್ಬರ ಪಡೆಯಲು ರೈತರು ಏನೆಲ್ಲಾ ಹರಸಾಹಸ ಮಾಡುತ್ತಿದ್ದಾರೆ. ಈ ಗೊಬ್ಬರ ಇದೀಗ ಅನ್ನದಾತರಿಗೆ ಅಕ್ಷರಶಃ ಚಿನ್ನವಾ ಎನಿಸಿದ್ದು, ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎದುರು ರಾತ್ರಿಯಿಡೀ ಮಲಗಿದ ರೈತರು ಮುಂಜಾನೆ ಸರತಿಯಲ್ಲಿ ನಿಂತು ಗೊಬ್ಬರ ಪಡೆದುಕೊಂಡರು.ಸಹಕಾರ ಸಂಘದಲ್ಲಿ ಮಂಗಳವಾರ ಮುಂಜಾನೆ ಗೊಬ್ಬರ ವಿತರಿಸಲಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರೈತರು ಸೋಮವಾರ ರಾತ್ರಿಯೇ ಆಗಮಿಸಿ ಸರದಿಯಲ್ಲಿ ನಿಂತಿದ್ದರು. ಮಂಗಳವಾರ ಮುಂಜಾನೆ ಬಂದಲ್ಲಿ ಸಾಲು ದೊಡ್ಡದಾಗಿ ತಮಗೆ ಗೊಬ್ಬರ ಸಿಗಲಿಕ್ಕಿಲ್ಲ ಎಂದು ಸೋಮವಾರ ರಾತ್ರಿ ಅಲ್ಲಿಯೇ ಅಲ್ಲಿ ಮಲಗಿದರು. ಅಲ್ಲಿಯೇ ಊಟ ತರಿಸಿಕೊಂಡು ಸವಿದರು.

ಮಂಗಳವಾರ ಬೆಳಗಾಗುತ್ತಿದ್ದಂತೆಯೇ ಸರತಿಯಲ್ಲಿ 700 ಕ್ಕೂ ಹೆಚ್ಚು ಜನರು ನಿಂತಿದ್ದರು. ಬೆಳಗ್ಗೆ ಒಂದು ಲೋಡ್‌ ಗೊಬ್ಬರ ಮಾತ್ರ ಬಂದಿದ್ದು, 200 ರಿಂದ 300 ಚೀಲ ಮಾತ್ರ ವಿತರಿಸಲಾಯಿತು. ಇದರಿಂದ ಸಿಟ್ಟಿಗೆದ್ದ ರೈತರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ರಾತ್ರಿಯಿಡೀ ಗೊಬ್ಬರಕ್ಕಾಗಿ ಕಾದಿದ್ದೇವೆ. ಸೋಮವಾರವೂ ಬಂದು ಗೊಬ್ಬರ ವಿತರಿಸುವಂತೆ ಕೋರಿದ್ದೇವೆ. ನಾಳೆ ಕೊಡುತ್ತೇವೆ ಎಂದು ಹೇಳಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಪೂರೈಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪೊಲೀಸ್‌ ಭದ್ರತೆಯಲ್ಲಿ ಗೊಬ್ಬರ ವಿತರಿಸಲಾಯಿತು.

ಮಂಗಳವಾರ 21 ರೈಲ್ವೆ ವ್ಯಾಗನ್‌ ಮೂಲಕ ಜಿಲ್ಲೆಗೆ ಗೊಬ್ಬರ ಬಂದಿದ್ದು, ಎಲ್ಲೆಡೆ ಸಮರ್ಪಕವಾಗಿ ಪೂರೈಸಲಾಗುತ್ತದೆ. 431 ಟನ್‌ ಯೂರಿಯಾ ಮತ್ತು 854 ಟನ್‌ ಕಾಂಪ್ಲೆಕ್ಸ್‌ ಗೊಬ್ಬರ ಬಂದಿದೆ. ಅದನ್ನು ವಿತರಸಲಾಗುತ್ತದೆ. ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಎತ್ತಿನ ಬಂಡಿಗೆ ಹೆಗಲು ಕೊಟ್ಟ ಸಹೋದರರು:ನಾಗರ ಪಂಚಮಿಯಂದು ಚಕ್ಕಡಿಗೆ ಎತ್ತು ಕಟ್ಟಬಾರದೆಂಬ ಸಂಪ್ರದಾಯ ಚಾಲ್ತಿಯಲ್ಲಿರುವ ಹಿನ್ನೆಲೆಯಲ್ಲಿ 10 ಚೀಲ ಯೂರಿಯಾ ಗೊಬ್ಬರ ಪಡೆದ ಸಹೋದರರು ತಾವೇ ಎತ್ತಿನ ಬಂಡಿಗೆ ಹೆಗಲು ಕೊಟ್ಟು ಎಳೆದುಕೊಂಡು ಹೋದ ಘಟನೆ ತಾಲೂಕಿನ ಮುದ್ದಾಬಳ್ಳಿಯಲ್ಲಿ ಜರುಗಿದೆ.

ಸಹೋದರರಾದ ಪ್ರಕಾಶ ಹಾಗೂ ಬಸವರಾಜ ಸೇರಿಕೊಂಡು ಎತ್ತಿನ ಬಂಡಿಗೆ ಹೆಗಲು ಕೊಟ್ಟು 500 ಕೆಜಿ ಗೊಬ್ಬರವನ್ನು ಗ್ರಾಮದ ಪ್ರಾಥಮಿಕ ಸಹಕಾರಿ ಸಂಘದಿಂದ ಮನೆಯವರಿಗೂ ತಂದಿದ್ದಾರೆ. ಈ ರೈತರು ಐದು ಆಧಾರ್‌ ಕಾರ್ಡ್‌ಗಳ ಮೂಲಕ ಹತ್ತು ಮೂಟೆ ಗೊಬ್ಬರ ಪಡೆದಿದ್ದಾರೆ.